More

    ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತ

    ಕಾರವಾರ: ತಾಲೂಕಿನಲ್ಲಿ ದಿನವಿಡೀ ಎಡೆಬಿಡದೆ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಯಿತು.

    ಗುರುವಾರ ಪ್ರಾರಂಭವಾದ ಮಳೆ ಶುಕ್ರವಾರ ಮಧ್ಯಾಹ್ನದವರೆಗೂ ನಿರಂತರವಾಗಿ ಮುಂದುವರಿಯಿತು. ಮಧ್ಯಾಹ್ನದ ನಂತರ ಮಳೆ ಇಳಿಮುಖವಾಗಿದೆ.

    ನಿರಂತರ ಮಳೆಯಿಂದ ಹಲವೆಡೆ ತಗ್ಗು ಪ್ರದೇಶದಲ್ಲಿ ನೀರು ತುಂಬಿತ್ತು. ಮುದಗಾದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅರೆಬರೆಯಾಗಿದ್ದರಿಂದ ಗುರುವಾರ ಸಾಯಂಕಾಲ ಗುಡ್ಡದ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

    ಅರಗಾ ನೌಕಾನೆಲೆಯ ಎದುರು ಹೆದ್ದಾರಿಯ ಮೇಲೆ ಕೆಲ ಕಾಲ ನೀರು ನಿಂತಿತ್ತು. ಕಾರವಾರದ ಕೆಎಚ್​ಬಿ, ಪದ್ಮನಾಭನಗರ, ಕೆನರಾಬ್ಯಾಂಕ್ ಕಾಲನಿ ಸೇರಿ ನಗರದ ವಿವಿಧೆಡೆ ಮಳೆಯ ನೀರು ಮನೆಯ ಬಾಗಿಲವರೆಗೂ ಬಂದು ನಿಂತಿತ್ತು. ಶುಕ್ರವಾರ ಬೆಳಗಿನ ವರದಿಯಂತೆ ಕಾರವಾರದಲ್ಲಿ 101.7 ಮಿಮೀ ಮಳೆಯಾಗಿದೆ. ಶುಕ್ರವಾರ ಬೆಳಗಿನಿಂದ ಸಾಯಂಕಾಲ 5.30 ರವರೆಗೆ 47.8 ಮಿಮೀ ಮಳೆಯಾಗಿದೆ.

    ನೀರಿನ ಹರಿವು ಹೆಚ್ಚಳ: ಕದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 105.5 ಮಿಮೀ ಮಳೆಯಾಗಿದ್ದು, 6562 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 34.50 ಮೀ. ಗರಿಷ್ಠ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 30.35 ಮೀ. ನೀರು ಸಂಗ್ರಹವಾಗಿದೆ. 4886 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದಿಸಿ ಹೊರಬಿಡಲಾಗುತ್ತಿದೆ. ಸೂಪಾ ಜಲಾಶಯಕ್ಕೆ 5312 ಕ್ಯೂಸೆಕ್, ಕೊಡಸಳ್ಳಿಗೆ 3933 ಕ್ಯೂಸೆಕ್ ನೀರಿನ ಒಳ ಹರಿವಿದೆ.

    ಎಲ್ಲೆಲ್ಲಿ ಎಷ್ಟೆಷ್ಟು ಮಳೆ?: ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಶುಕ್ರವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 125, ಭಟ್ಕಳದಲ್ಲಿ 113, ಹಳಿಯಾಳದಲ್ಲಿ 9.2, ಹೊನ್ನಾವರದಲ್ಲಿ 172.5, ಕುಮಟಾದಲ್ಲಿ 97.2, ಮುಂಡಗೋಡಿನಲ್ಲಿ1, ಸಿದ್ದಾಪುರದಲ್ಲಿ 77.6, ಶಿರಸಿಯಲ್ಲಿ 43.5, ಜೊಯಿಡಾದಲ್ಲಿ 37.8, ಯಲ್ಲಾಪುರದಲ್ಲಿ 18.6 ಮಿಮೀ ಮಳೆಯಾಗಿದೆ. ಶುಕ್ರವಾರ ಎಲ್ಲೆಡೆ ಆಗಾಗ ಮಳೆ ಬಂದು ಹೋಗುತ್ತಿದೆ.

    ಮರ ಬಿದ್ದು ಮಂದಿರ ನೆಲಸಮ: ಕುಮಟಾ ತಾಲೂಕಿನ ಕಲಭಾಗದ ಗುರುವಾರ ರಾತ್ರಿ ಗಾಳಿಮಳೆಗೆ ಮರ ಬಿದ್ದು ಪುರಾತನ ರಾಮನಾಥೇಶ್ವರ ಮಂದಿರ ನೆಲಸಮವಾಗಿದೆ. ಸ್ಥಳೀಯರು ವಿಜಯವಾಣಿಯೊಂದಿಗೆ ಮಾತನಾಡಿ, ಪ್ರಾಚೀನ ಶಿಲಾಮೂರ್ತಿ, ವೀರಗಲ್ಲು ಮುಂತಾದ ಪಳಿಯುಳಿಕೆಗಳನ್ನು ಹೊಂದಿರುವ ಗ್ರಾಮದೇವರಾದ ರಾಮನಾಥೇಶ್ವರ ದೇವರ ಮಂದಿರ ಬಹಳ ಪುರಾತನವಾದದ್ದು. ಕಳೆದ 7 ವರ್ಷದ ಹಿಂದೆಯೂ ಗಾಳಿಮಳೆಗೆ ಕಟ್ಟಡ ಭಾಗಶಃ ಹಾನಿಗೊಳಗಾಗಿತ್ತು. ಭಕ್ತಾದಿಗಳೇ ಹಣ ಹೊಂದಿಸಿ ಮಂದಿರವನ್ನು ದುರಸ್ತಿ ಮಾಡಿಕೊಂಡಿದ್ದರು. ಆದರೆ ಈ ಬಾರಿ ಮರ ಬಿದ್ದ ಹೊಡೆತಕ್ಕೆ ಸಂಪೂರ್ಣ ಮಂದಿರ ನೆಲಸಮವಾಗಿದೆ. ಮಂದಿರವನ್ನು ಹೊಸದಾಗಿ ನಿರ್ವಿುಸಿ ಜೀಣೋದ್ಧಾರ ಮಾಡಬೇಕಾದ ಅವಶ್ಯಕತೆ ಇದೆ ಎಂದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಾಥೇಶ್ವರ ಮಂದಿರವನ್ನು ಜೀಣೋದ್ದಾರ ಮಾಡಲೇಬೇಕು. ಇದಕ್ಕಾಗಿ 20 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಬಹುದು. ಜತೆಗೆ ಮಂದಿರವಿರುವ ಜಾಗದ ಮಾಲೀಕರಿಂದ ಸಮಿತಿಗೆ ಭೂಮಿ ಪಡೆಯುವ ಕೆಲಸವೂ ಆಗಬೇಕಿದೆ. ಈ ಬಗ್ಗೆ ಸಚಿವ ಶ್ರೀನಿವಾಸ ಪೂಜಾರಿಯವರೊಂದಿಗೆ ಮಾತನಾಡಿ ಅನುದಾನ ಕೊಡಿಸುವ ಜವಾಬ್ದಾರಿ ನನ್ನದು’ ಎಂದರು. ತಹಸೀಲ್ದಾರ್ ಮೇಘರಾಜ ನಾಯ್ಕ, ಸ್ಥಳೀಯರಾದ ಎನ್.ಎನ್ ಪಟಗಾರ, ಗಣಪತಿ ಪಟಗಾರ, ನಾಗೇಶ ನಾಯ್ಕ, ಹರೀಶ ನಾಯ್ಕ, ಕಲಭಾಗಕರ ಕುಟುಂಬದವರು, ಕೃಷ್ಣ ಪಟಗಾರ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts