More

    ನಿಯಮ ಸರಳೀಕರಣಗೊಳಿಸಿ

    ಶಿರಸಿ: ವ್ಯಾಪಾರ- ವಹಿವಾಟಿಗೆ ಅನುಮತಿ ನೀಡಲು ನಗರಸಭೆ ಕಠಿಣ ನಿಯಮ ಅನುಸರಿಸುತ್ತಿದೆ. ಈ ಕಾರಣದಿಂದ ಹಲವಾರು ವ್ಯಾಪಾರಿಗಳು ಅನುಮತಿಗಾಗಿ ಬರುತ್ತಿಲ್ಲ. ಹೀಗಾಗಿ ಸರಳೀಕರಣ ಮಾಡಬೇಕು ಎಂದು ಸದಸ್ಯ ಪ್ರದೀಪ ಶೆಟ್ಟಿ ಒತ್ತಾಯಿಸಿದರು.

    ಶುಕ್ರವಾರ ಇಲ್ಲಿನ ನಗರಸಭೆಯಲ್ಲಿ ಅಧ್ಯಕ್ಷ ಗಣಪತಿ ನಾಯ್ಕ ನೇತೃತ್ವದಲ್ಲಿ ಏರ್ಪಾಡಾಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಅತಿಕ್ರಮಣ ಜಾಗದಲ್ಲಿನ ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಈ ನಿಯಮಾವಳಿಯಲ್ಲಿ ಮತ್ತಷ್ಟು ಸರಳ ನೀತಿ ಅನುಸರಿಸಬೇಕು ಎಂದು ಹೇಳಿದರು.

    ಈ ವೇಳೆ ಅಧ್ಯಕ್ಷರು ನಗರಸಭೆ ವ್ಯಾಪ್ತಿಯಲ್ಲಿ ಇರುವ ಅತಿಕ್ರಮಿತ ವಾಣಿಜ್ಯ ಕಟ್ಟಡಗಳ ಮಾಹಿತಿಯನ್ನು ತಿಂಗಳೊಳಗೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಆರೋಗ್ಯ ನಿರೀಕ್ಷಕ ಆರ್.ಎಂ. ವೇರ್ಣೆಕರ್ ಮಾತನಾಡಿ, ನಗರದ 34 ಪಾರ್ಕಿಂಗ್ ಸ್ಥಳದಲ್ಲಿ ಅನಧಿಕೃತವಾಗಿ ನೂರಾರು ಅಂಗಡಿಗಳು ತಲೆ ಎತ್ತಿವೆ. ನಗರಾಡಳಿತ ಸರ್ವಾನುಮತದಿಂದ ನಿರ್ಣಯಿಸಿದರೆ ಅಂಥ ಅಂಗಡಿಗಳನ್ನು ಖುಲ್ಲಾ ಮಾಡಿಸಲಾಗುವುದು ಎಂದರು. ಸಾರ್ವಜನಿಕರಿಗೆ ಸಮಸ್ಯೆ ಆಗುವ ಕಡೆ ನಿರ್ದಾಕ್ಷಿಣ್ಯವಾಗಿ ಖುಲ್ಲಾ ಮಾಡಲು ಸೂಚಿಸಲಾಯಿತು.

    ಮಾರಿಕಾಂಬಾ ಜಾತ್ರೆ ಸಂಬಂಧ ನಗರಸಭೆಗೆ ದೇವಾಲಯದ ವತಿಯಿಂದ 20 ಲಕ್ಷ ರೂ., ಕಸ ವಿಲೇವಾರಿ ಸಂಬಂಧ ಕಳೆದ ವರ್ಷದ್ದು 11 ಲಕ್ಷ ರೂ. ಬಾಕಿಯಿದೆ. ಜಾತ್ರೆಗಾಗಿ ನಗರಸಭೆಯಿಂದ 44 ಲಕ್ಷ ರೂ. ಖರ್ಚು ಮಾಡಲಾಗಿದೆ. ಜಾತ್ರೆ ವೇಳೆ 296 ಅಂಗಡಿ ಒಕ್ಕಲೆಬ್ಬಿಸಲಾಗುತ್ತದೆ. ಹಾಗಾಗಿ 4 ತಿಂಗಳ ಬಾಡಿಗೆ ನಗರಸಭೆಗೆ ಕೈತಪ್ಪುತ್ತದೆ ಎಂಬ ವಿಷಯ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆ, ಮಾರಿಕಾಂಬಾ ದೇವಾಲಯದಿಂದ ನಗರಸಭೆಗೆ ಬರಬೇಕಿರುವ ಮೊತ್ತವನ್ನು ಅಗತ್ಯವಾಗಿ ಪಡೆಯಬೇಕು ಎಂದು ಎಲ್ಲ ಸದಸ್ಯರು ಒತ್ತಾಯಿಸಿದರು.

    ಮ್ಯಾನೇಜರ್ ಎಲ್.ವಿ.ನಾಯ್ಕ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ 3.20 ಕೋಟಿ ರೂ. ಗುರಿಯಿದ್ದು 2.04 ಕೋಟಿ ರೂ. ಸಂಗ್ರಹವಾಗಿದೆ. ವ್ಯಾಪಾರ ಪರವಾನಗಿ ತೆರಿಗೆ ಗುರಿ 14.50 ಲಕ್ಷ ರೂ. ಇದ್ದು 3.20 ಲಕ್ಷ ರೂ. ಮಾತ್ರ ವಸೂಲಾಗಿದೆ. ಕರೊನಾ ಕಾರಣದಿಂದ ಹಿನ್ನಡೆಯಾಗಿದೆ ಎಂದರು. ಶ್ರೀಕಾಂತ ತಾರಿಬಾಗಿಲು, ಮಧುಕರ ಬಿಲ್ಲವ, ಖಾದರ್ ಆನವಟ್ಟಿ ಸಮಸ್ಯೆಗಳ ಕುರಿತು ರ್ಚಚಿಸಿದರು. ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ರಮೇಶ ನಾಯಕ ಇದ್ದರು.

    8 ಲಕ್ಷ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡ ಕೊಂಡವಾಡೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ನಗರಸಭೆ ನಿಧಿಯಿಂದ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಲಾಗುವುದು. ಜತೆ, ನಗರಸಭೆಗೆ ನೂತನ ಕಟ್ಟಡ ನಿರ್ವಿುಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ನೀಡಲಾಗುವುದು.
    ಗಣಪತಿ ನಾಯ್ಕನಗರಸಭೆ ಅಧ್ಯಕ್ಷ

    ಸಮಸ್ಯೆಗಳ ಚರ್ಚೆ
    ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪವಾಯಿತು. ನಗರದ ನೀರಿನ ಸಮಸ್ಯೆ, ನಗರೋತ್ಥಾನ ಕಾಮಗಾರಿಗಳ ಸಮರ್ಪಕತೆ, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಕರ ಸಂಗ್ರಹಣೆಯ ಸವಾಲುಗಳು, ಬಿಡಾಡಿ ದನಗಳ ಹಾವಳಿ, ಬಾಕಿ ಇರುವ ಬಿಲ್​ಗಳು, ಅನುಮತಿಯಿಲ್ಲದ ಅಂಗಡಿಗಳು ಸೇರಿ ಹಲವು ಸಮಸ್ಯೆಗಳ ಬಗ್ಗೆ ಸದಸ್ಯರು ಅಧ್ಯಕ್ಷರ ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts