More

    ನಿಗೂಢವಾಗಿ ಸಾಯುತ್ತಿವೆ ಜೇನುಹುಳುಗಳು!

    ವಿಜಯವಾಣಿ ಸುದ್ದಿಜಾಲ ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಮನೆಯಲ್ಲಿ ಕಳೆದ ಒಂದೆರಡು ದಿನಗಳಿಂದ ಇದ್ದಕ್ಕಿದ್ದಂತೆ ಸಾವಿರಾರು ಜೇನು ನೊಣಗಳು ಸಾಯುತ್ತಿವೆ. ಇದರಿಂದ ಜೇನು ಸಾಕಾಣಿಕೆ ಮಾಡುವ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

    ಕಳೆದ ಎರಡು ದಿನಗಳಿಂದ ಹೀಗೆ ಜೇನು ಹುಳುಗಳು ಸಾಯುತ್ತಿದ್ದು, ಹೊರಮನೆಯ ನಾರಾಯಣ ಭಟ್ಟ ಅವರು ಸಾಕಿರುವ ಜೇನು ಪೆಟ್ಟಿಗೆಗಳಲ್ಲಿ ಅತಿ ಹೆಚ್ಚು ಜೇನುನೊಣಗಳು ಸಾವನ್ನಪ್ಪಿವೆ. ಉಮ್ಮಚಗಿಯ ಶಂಕರ ಭಟ್ಟ ಅವರ ಜೇನು ಪೆಟ್ಟಿಗೆಗಳಲ್ಲಿಯೂ ಜೇನು ನೊಣಗಳು ಸಾಯುತ್ತಿವೆ. ನೊಣಗಳು ಇದ್ದಕ್ಕಿದ್ದಂತೆ ಒದ್ದಾಡಲಾರಂಭಿಸುತ್ತವೆ, ನಂತರ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪುತ್ತಿವೆ.

    ಅಕ್ಕಪಕ್ಕದ ಅಡಕೆ ತೋಟದ ಮಾಲೀಕರು ಅಡಕೆ ಸಿಂಗಾರಕ್ಕೆ ರಾಸಾಯನಿಕ ಔಷಧ ಸಿಂಪಡಿಸುತ್ತಿರುವುದೇ ಇದಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಇದು ರಾಸಾಯನಿಕ ಬಳಕೆಯಿಂದ ಆಗಿರುವುದೋ ಅಥವಾ ಯಾವುದಾದರೂ ರೋಗ ತಗುಲಿರಬಹುದೋ ಎಂಬುದು ವಿಷಯ ತಜ್ಞರು ಬಂದು ಪರಿಶೀಲಿಸಿದ ಬಳಿಕ ಗೊತ್ತಾಗಲಿದೆ.

    ಸ್ಥಳಕ್ಕೆ ಉಮ್ಮಚಗಿ ಗ್ರಾಪಂ ಅಧ್ಯಕ್ಷ ಗ.ರಾ. ಭಟ್ಟ, ಸದಸ್ಯ ಖೈತಾನ್ ಡಿಸೋಜಾ, ಸ್ಥಳೀಯ ಪ್ರಮುಖ ಗೋವಿಂದ ಬಸಾಪುರ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಘಟನೆ ಕುರಿತು ಮಾಹಿತಿ ಪಡೆಯುತ್ತೇವೆ, ನಂತರ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡುತ್ತೇವೆ. ಜೇನು ನೊಣಗಳ ಸಾವಿಗೆ ಕಾರಣ, ಅದಕ್ಕೆ ಸೂಕ್ತ ಪರಿಹಾರ ಏನು ಎಂಬುದರ ಬಗೆಗೆ ರೈತರಿಗೆ ಮಾಹಿತಿ ನೀಡಲಾಗುವುದು. ರೈತರು ಭಯಪಡುವ ಅಗತ್ಯವಿಲ್ಲ. | ಸತೀಶ ಹೆಗಡೆ ,ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts