More

    ನಾಲ್ವರು ಜಿ.ಪಂ. ಸದಸ್ಯರು ಅನರ್ಹ

    ಧಾರವಾಡ: ಬಿಜೆಪಿ ನೀಡಿದ್ದ ವಿಪ್ ಉಲ್ಲಂಘನೆ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಧಾರವಾಡ ಜಿ.ಪಂ.ನ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿ ರಾಜ್ಯ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಸದಸ್ಯರ ಅನರ್ಹತೆ ಇದೇ ಪ್ರಥಮವಾಗಿದ್ದು, ಪಕ್ಷಾಂತರಿಗಳಿಗೆ ಪಾಠ ಕಲಿಸಿದಂತಾಗಿದೆ.

    ಜಿಲ್ಲೆಯ ಗಳಗಿ ಕ್ಷೇತ್ರದ ಅಣ್ಣಪ್ಪ ದೇಸಾಯಿ, ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರ, ಗರಗ ಕ್ಷೇತ್ರದ ರತ್ನಾ ಪಾಟೀಲ ಹಾಗೂ ತಬಕದ ಹೊನ್ನಳ್ಳಿ ಕ್ಷೇತ್ರದ ಮಂಜವ್ವ ಹರಿಜನ ಅನರ್ಹಗೊಂಡ ಸದಸ್ಯರು.

    ಅನರ್ಹತೆಯ ಹಿನ್ನೆಲೆ: ಆರಂಭಿಕ ಅವಧಿಯಿಂದ ಅಧ್ಯಕ್ಷರಾಗಿದ್ದ ಬಿಜೆಪಿಯ ಚೈತ್ರಾ ಶಿರೂರ ವಿರುದ್ಧ ಕಾಂಗ್ರೆಸ್ ಪಕ್ಷದವರು 2019ರ ಫೆಬ್ರವರಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಬಿಜೆಪಿ ಚಿಹ್ನೆಯಡಿ ಗೆದ್ದು ಬಂದಿದ್ದ ಅಣ್ಣಪ್ಪ, ಜ್ಯೋತಿ, ರತ್ನಾ ಹಾಗೂ ಮಂಜವ್ವ ಸಭೆಗೆ ಗೈರಾಗಿದ್ದರು. ಇದರಿಂದ ಬಿಜೆಪಿಯ ಸಂಖ್ಯಾಬಲ 6ಕ್ಕೆ ಕುಸಿದು ಅಧಿಕಾರದ ಗದ್ದುಗೆ ಬಿಟ್ಟುಕೊಟ್ಟಿತ್ತು. ಪಕ್ಷ ನೀಡಿದ್ದ ವಿಪ್ ಉಲ್ಲಂಘಿಸಿ ಸಭೆಗೆ ಗೈರಾಗಿರುವುದನ್ನು ಮುಂದಿಟ್ಟುಕೊಂಡು ಜಿಲ್ಲಾ ಬಿಜೆಪಿ ಮುಖಂಡರು ರಾಜ್ಯ ಚುನಾವಣೆ ಆಯೋಗದ ಮೊರೆ ಹೋಗಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾಲ್ವರ ಸದಸ್ಯತ್ವ ರದ್ದು ಮಾಡಬೇಕು ಎಂದು ಅಂದಿನ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆಯೋಗ ಎರಡೂ ಕಡೆಯ ವಿಚಾರಣೆಯನ್ನು ಮಾರ್ಚ್​ನಲ್ಲಿ ಮುಕ್ತಾಯಗೊಳಿಸಿತ್ತು. ಜೂ. 10ರಂದು ಅಂತಿಮ ಆದೇಶ ಹೊರಡಿಸಿದ್ದು, ನಾಲ್ವರ ಸದಸ್ಯತ್ವ ರದ್ದುಗೊಳಿಸಿದೆ. ಬಿಜೆಪಿ ಪರ ವಕೀಲರಾದ ಅರುಣ ಜೋಶಿ ಹಾಗೂ ಸುನೀಲ ಗುಡಿ ವಕಾಲತ್ತು ವಹಿಸಿದ್ದರು.

    ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿ: ಜಿ.ಪಂ.ನ ಅಧಿಕಾರ ಬಿಟ್ಟುಕೊಟ್ಟಿದ್ದ ಬಿಜೆಪಿ ಮುಖಂಡರು, ಅದಕ್ಕೆ ಕಾರಣರಾದ ಸದಸ್ಯರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಕಾನೂನು ಹೋರಾಟ ನಡೆಸಿದ್ದರು. ಗೆಲ್ಲಿಸಿದ ಪಕ್ಷಕ್ಕೆ ದ್ರೋಹ ಬಗೆದು ಸಭೆಗೆ ಗೈರಾಗಿ ಪಕ್ಷಾಂತರ ಮಾಡಿದವರ ಸದಸ್ಯತ್ವವನ್ನಾದರೂ ರದ್ದುಪಡಿಸುವ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ.

    ಅಧಿಕಾರಕ್ಕೆ ಭಂಗವಿಲ್ಲ: ಪಕ್ಷೇತರ ಸೇರಿ 12 ಸದಸ್ಯರ ಬಲದೊಂದಿಗೆ ಸದ್ಯ ಕಾಂಗ್ರೆಸ್​ನ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷರಾಗಿದ್ದಾರೆ. 2021ರ ಮೇವರೆಗೆ ಅಧಿಕಾರ ಅವಧಿ ಇದೆ. ಬಿಜೆಪಿಯ ಸದಸ್ಯ ಬಲ 6ಕ್ಕೆ ಕುಸಿದಿದೆ. ಹೀಗಾಗಿ ಅಂದಾಜು 10 ತಿಂಗಳ ಬಾಕಿ ಅವಧಿಯಲ್ಲಿ ಮರು ಚುನಾವಣೆ ನಡೆಯಲಿದೆಯೇ ಎಂಬ ಜಿಜ್ಞಾಸೆ ಮೂಡಿಸಿದೆ. ಅನರ್ಹ ಸದಸ್ಯರು ಆಯೋಗದ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲು ಅವಕಾಶವಿದೆ ಎನ್ನಲಾಗಿದೆ. ಹೀಗಾಗಿ, ಹಾಲಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ ಕಡಿಮೆ ಎಂದು ರ್ತಸಲಿದೆ.

    ಸಂಖ್ಯಾಬಲ ಏರಿಳಿತ: 22 ಸದಸ್ಯ ಬಲದ ಜಿ.ಪಂ.ಗೆ 2016ರ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ 11, ಕಾಂಗ್ರೆಸ್​ನ 10 ಹಾಗೂ ಪಕ್ಷೇತರರಾಗಿ ಶಿವಾನಂದ ಕರಿಗಾರ ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ನಂತರದ ದಿನಗಳಲ್ಲಿ ಬಿಜೆಪಿಯ ಯೋಗೀಶಗೌಡ ಗೌಡರ ಕೊಲೆಯಾದ ನಂತರ ನಡೆದ ಹೆಬ್ಬಳ್ಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನ ಚನ್ನಬಸಪ್ಪ ಮಟ್ಟಿ ಜಯ ಸಾಧಿಸಿದರು. ಕಾಂಗ್ರೆಸ್ ಬಲ 11ಕ್ಕೇರಿತು. ಪಕ್ಷೇತರ ಸೇರಿ ಬಿಜೆಪಿಯ ಸಂಖ್ಯಾಬಲ 11ಕ್ಕೆ ಇಳಿದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts