More

    ನಾಲ್ವರು ಅಂತಾರಾಜ್ಯ ದರೋಡೆಕೋರರ ಬಂಧನ

    ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಸಮೀಪದ ಜಾಗನಮನೆಯಲ್ಲಿ ದರೋಡೆಕೋರರು ಎರಡು ಮನೆಗಳಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಹಣ ಹಾಗೂ ಆಭರಣ ದೋಚಿದ ಪ್ರಕರಣವನ್ನು ಪೊಲೀಸರು ಕೇವಲ ನಾಲ್ಕೇ ದಿನಗಳಲ್ಲಿ ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಜಾಗನಮನೆ ಸಮೀಪದ ಹುಲಿಮನೆಯ ಅನಂತ ವಿಷ್ಣು ಕೋತ, ಶಿವಾನಂದ ರಘುನಾತ ಕೋತ ಹಾಗೂ ಮಧ್ಯಪ್ರದೇಶದ ಪ್ರತಾಪ ಸಿಂಗ್ ರತನ್ ಸಿಂಗ್, ಭಾಯಾಕುಂ ಸಿಂಗ್ ಅಜನಾರಿಯಾ ಬಂಧಿತರು. ಇವರು ಜಾಗನಮನೆಯ ಗೋಪಾಲ ದೇವೇಂದ್ರ ಹೆಗಡೆ ಅವರ ಮನೆಗೆ ನುಗ್ಗಿ, ಚಾಕು ತೋರಿಸಿ ಬೆದರಿಕೆ ಹಾಕಿ, 1.05 ಲಕ್ಷ ರೂ. ನಗದು, 2.61 ಲಕ್ಷ ರೂ ಮೌಲ್ಯದ ಆಭರಣಗಳನ್ನು ಹಾಗೂ ನಾಗರಾಜ ಗಣೇಶ ಹೆಗಡೆ ಅವರ ಮನೆಯಿಂದ 2000 ರೂ. ಮೌಲ್ಯದ ಆಭರಣ ಹಾಗೂ 6000 ರೂ. ನಗದು ದೋಚಿದ್ದರು.

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಮಧ್ಯಪ್ರದೇಶದ ಬಳಿ ಇಬ್ಬರನ್ನು ಬಂಧಿಸಿದ್ದಾರೆನ್ನಲಾಗಿದ್ದು, ಮತ್ತಿಬ್ಬರನ್ನು ತಾಲೂಕಿನ ಹುಲಿಮನೆ ಬಳಿ ಬಂಧಿಸಿದ್ದಾರೆ. ಅವರಿಂದ ಎರಡು ಬೈಕ್, 2.10 ಲಕ್ಷ ರೂ. ನಗದು ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಅಂತಾರಾಜ್ಯ ದರೋಡೆಕೋರರಾಗಿದ್ದು, ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲೇ ಇತ್ತೀಚೆಗೆ 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇನ್ನುಳಿದಂತೆ ಇಬ್ಬರು ಆರೋಪಿಗಳು ಹಾಗೂ ಅವರ ಬಳಿ ಇರುವ ವಾಹನ, ಹಣ, ಆಭರಣಗಳನ್ನು ವಶಪಡಿಸಿಕೊಳ್ಳಲು ಜಾಲ ಬೀಸಲಾಗಿದೆ. ಹಿಂದೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಅನಂತ ಕೋತ, ಕಾರವಾರ ಜೈಲಿನಲ್ಲಿ ಕುಳಿತೇ ಈ ದರೋಡೆಗೆ ಸ್ಕೆಚ್ ಹಾಕಿದ್ದ. ಜಿಲ್ಲೆಯಲ್ಲಿ ಜೈಲಿನಲ್ಲಿ ಕುಳಿತು ದರೋಡೆಗೆ ಯೋಜನೆ ರೂಪಿಸಿದ ಮೂರನೇ ಪ್ರಕರಣ ಇದಾಗಿದೆ. ಹಿತ್ಲಳ್ಳಿ ಗ್ರಾ.ಪಂ. ಸದಸ್ಯ ಪ್ರಸನ್ನ ಭಟ್ಟ ಅವರು ನೀಡಿದ ಸಣ್ಣ ಸುಳಿವು ಅಪರಾಧಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಯಿತು. ಅವರನ್ನು ಇಲಾಖೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು ಎಂದು ಡಿವೈಎಸ್​ಪಿ ಜಿ.ಟಿ. ನಾಯಕ ಮಾಹಿತಿ ನೀಡಿದರು.

    ಎಸ್​ಪಿ ಶಿವಪ್ರಕಾಶ ದೇವರಾಜು, ಡಿವೈಎಸ್​ಪಿ ಜಿ.ಟಿ. ನಾಯಕ ಅವರ ಮಾರ್ಗದರ್ಶನದಲ್ಲಿ ಎಎಸ್​ಪಿ ಸಾಹಿಲ್ ಬಾಗ್ಲಾ, ಸಿಪಿಐ ಸುರೇಶ ಯಳ್ಳೂರ, ಪಿಎಸ್​ಐ ಮಂಜುನಾಥ ಗೌಡರ್ ನೇತೃತ್ವದಲ್ಲಿ ಬನವಾಸಿ ಪಿಎಸ್​ಐ ಮಹಾಂತೇಶ ನಾಯ್ಕ, ಎಎಸ್​ಐ ಎ.ಡಿ. ಪಾವಸ್ಕರ್, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಚಿದಂಬರ ಅಂಗಡಿ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ, ಅಕ್ಷಯ ಮರಾಠಿ ಕಾರ್ಯಾಚರಣೆಯಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts