More

    ನಾಲ್ಕೈದು ತಿಂಗಳಿಂದ ಜಮೆಯಾಗದ ಪಿಂಚಣಿ

    ಶಿರಸಿ: ಸಾಮಾಜಿಕ ಭದ್ರತಾ ಯೋಜನೆ ಸಹಿತ ವಿವಿಧ ಪಿಂಚಣಿ ಯೋಜನೆಗಳ ಸಾವಿರಾರು ಫಲಾನುಭವಿಗಳ ಖಾತೆಗೆ ನಾಲ್ಕೈದು ತಿಂಗಳಿನಿಂದ ಹಣ ಜಮಾ ಆಗಿಲ್ಲ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ವೃದ್ಧರು, ಅಂಗವಿಕಲರು ಸೇರಿ ಹಲವು ಫಲಾನುಭವಿಗಳು ಸಂಕಷ್ಟಪಡುವಂತಾಗಿದೆ.

    ವಿವಿಧ 9 ಪಿಂಚಣಿ ಯೋಜನೆಗಳ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 3 ಸಾವಿರಕ್ಕಿಂತ ಹೆಚ್ಚು ಫಲಾನುಭವಿಗಳು ಈ ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರದ ನಿಯಮಾವಳಿಯಂತೆ ಜನವರಿಯಲ್ಲಿ ಕೆ-1 (ಖಜಾನೆ-1)ರಿಂದ ಕೆ-2ಕ್ಕೆ ಫಲಾನುಭವಿಗಳ ದಾಖಲೆ ವರ್ಗಾಯಿಸಲಾಗಿದೆ. ಈ ಸಂದರ್ಭದಲ್ಲಿ ಸೂಕ್ತ ದಾಖಲೆ ಸಲ್ಲಿಸದ, ಬ್ಯಾಂಕ್ ಖಾತೆ, ವಿಳಾಸ ಸರಿಯಿಲ್ಲದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆಯಾಗದ ಅನೇಕ ಕಾರಣಗಳಿಗಾಗಿ ಫಲಾನುಭವಿಗಳ ಖಾತೆ ಕೆ-2 (ಖಜಾನೆ -2) ತಂತ್ರಾಂಶದಲ್ಲಿ ಸ್ಥಗಿತಗೊಂಡಿತ್ತು. ಕೆಲ ಫಲಾನುಭವಿಗಳು ದಾಖಲೆ ಸಮರ್ಪಕವಾಗಿ ಒದಗಿಸಿದ ಕಾರಣ ಅಂತಹ ಫಲಾನುಭವಿಗಳಿಗೆ ಪಿಂಚಣಿ ಲಭಿಸಿದೆ. ಉಳಿದಂತೆ ದಾಖಲೆ ಸಲ್ಲಿಸಿದ 3100ಕ್ಕೂ ಹೆಚ್ಚು ಫಲಾನುಭವಿಗಳ ಖಾತೆ ಸಮರ್ಪಕವಾಗಿ ಆಗದ ಪರಿಣಾಮ 4-5 ತಿಂಗಳಿನಿಂದ ಪಿಂಚಣಿ ಸಿಕ್ಕಿಲ್ಲ.

    ಆರ್ಥಿಕ ಅಶಕ್ತರಿಗೆ ಸಮಸ್ಯೆ: ಅನೇಕ ಫಲಾನುಭವಿಗಳ ಬ್ಯಾಂಕ್, ಅಂಚೆ ಖಾತೆ ಸಂಖ್ಯೆ ಸಂಗ್ರಹಿಸಿ ಕೆ-2 ತಂತ್ರಾಂಶದಲ್ಲಿ ಅಪ್​ಡೇಟ್ ಮಾಡಿ, ಅದರ ಪ್ರತಿಯನ್ನು ಅಪ್​ಲೋಡ್ ಮಾಡಿದರೂ ಖಾತೆ ಸಂಖ್ಯೆ ಸರಿಯಾಗಿಲ್ಲ ಎಂದು ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಅವರ ಖಾತೆ ಈಗ ತಾತ್ಕಾಲಿಕವಾಗಿ ಸ್ಥಗಿತ ಪಟ್ಟಿಯಲ್ಲಿ ಕಾಣುತ್ತಿದೆ.

    ಸರಿಯಾದ ಖಾತೆ ಸಂಖ್ಯೆ ನಮೂದಿಸಿದ್ದರೂ ಇದೇ ಸಮಸ್ಯೆ. ಖಾತೆಗೆ ಹಣ ಜಮೆಯಾಗಿದೆ ಎಂದು ತೋರಿಸಿದರೂ ಪಿಂಚಣಿ ಸಿಗದಿರುವ ಪ್ರಕರಣಗಳಿವೆ. ಕೆಲವರ ಪಿಂಚಣಿ ಸ್ಥಿತಿಯು ಅನುಮೋದನೆಗೆ ಬಾಕಿ ಇದೆ ಎಂದು ತೋರಿಸುತ್ತದೆ. ಆದರೆ, ಇದು ತಂತ್ರಾಂಶದಲ್ಲಿ ಕಾಣಿಸದೆ ಐಡಿ ನಂಬರ್ ಹಾಕಿ ಪರಿಶೀಲಿಸಿದಾಗ ಕಾಣುತ್ತದೆ. ಪಿಂಚಣಿ ಬರದ ಬಗ್ಗೆ ಫಲಾನುಭವಿಗಳು ತಾಲೂಕು ಕಚೇರಿಯಲ್ಲಿ ಕೇಳಿದರೆ ಸೂಕ್ತ ದಾಖಲೆ ಸಲ್ಲಿಸಿಲ್ಲ, ಬ್ಯಾಂಕ್ ಖಾತೆ ಸರಿಯಿಲ್ಲ, ವಿಳಾಸ ಸರಿಯಿಲ್ಲ, ತಾಂತ್ರಿಕ ಸಮಸ್ಯೆಯಾಗಿದೆ, ವಿಳಂಬವಾಗಬಹುದು ಎನ್ನುವ ಕಾರಣ ನೀಡಲಾಗುತ್ತಿದೆ. ಈ ಬಗ್ಗೆ ಹಲವು ಫಲಾನುಭವಿಗಳು ಕೇಳಿದ ದಾಖಲೆ ಕೂಡ ಒದಗಿಸಿದ್ದಾರೆ. ಆದರೂ ಪಿಂಚಣಿ ಜಮಾ ಆಗಿಲ್ಲ. ಜತೆಗೆ, ಈವರೆಗೂ ಸ್ಥಗಿತಗೊಂಡಿರುವ ಖಾತೆಗಳು ತೆರವಾಗಿಲ್ಲ. ಹೀಗಾಗಿ, ಆರ್ಥಿಕ ಅಶಕ್ತರಾದ ಹಲವು ಫಲಾನುಭವಿಗಳು ಮುಂಗಾಣದಂತಾಗಿದ್ದಾರೆ.

    ಅದೇ ದಾಖಲೆ, ಅದೇ ವಿಳಾಸ… ಆದರೂ..

    ಫೆಬ್ರವರಿವರೆಗೆ ಪ್ರತಿ ತಿಂಗಳ 10ರೊಳಗೆ ಪಿಂಚಣಿ ಮೊತ್ತ ಖಾತೆಗೆ ಜಮೆಯಾಗುತ್ತಿತ್ತು. ಕಳೆದ 6 ತಿಂಗಳಿನಿಂದ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ವಿಳಾಸ ಸರಿಯಿಲ್ಲ, ಬ್ಯಾಂಕ್ ಖಾತೆ ಮತ್ತು ಆಧಾರ್ ತಾಳೆಯಾಗುತ್ತಿಲ್ಲ ಎನ್ನುತ್ತಾರೆ. ಆದರೆ, ಫೆಬ್ರವರಿಯವರೆಗೆ ಅದೇ ದಾಖಲೆ, ಅದೇ ವಿಳಾಸ ಹೊಂದಿದ್ದ ನನ್ನ ಖಾತೆಗೆ ಹಣ ಜಮೆಯಾದದ್ದು ಹೇಗೆ ಎಂದು ಹೆಸರು ಹೇಳಲಿಚ್ಛಿಸದ ಫಲಾನುಭವಿಯೊಬ್ಬರು ಪ್ರಶ್ನಿಸುತ್ತಾರೆ.

    ಸರ್ಕಾರದಿಂದ ಬರುವ ಪಿಂಚಣಿಯನ್ನೇ ನಂಬಿ ಬದುಕು ನಡೆಸುತ್ತಿದ್ದೇನೆ. 5 ತಿಂಗಳಿನಿಂದ ಪಿಂಚಣಿ ಮೊತ್ತ ಜಮಾ ಆಗಿಲ್ಲ. ಪ್ರತಿ ತಿಂಗಳು ತಹಸೀಲ್ದಾರ್ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣ ಈ ಹಿಂದಿನಂತೆ ನಿಗದಿತ ದಿನಾಂಕದೊಳಗೆ ಪಿಂಚಣಿ ಮೊತ್ತ ಸಿಗುವಂತೆ ಕ್ರಮ ವಹಿಸಬೇಕು.

    – ಹೆಸರು ಹೇಳಲಿಚ್ಛಿಸದ ಫಲಾನುಭವಿ

    ಸಂಬಂಧಪಟ್ಟ ಅಧಿಕಾರಿಗಳಿಂದ ವಿಸõತವಾದ ವಿವರ ಪಡೆದು, ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ವೇಳೆ ಕೆಲವರ ಹೆಸರಲ್ಲಿ ಬೇರೆ ಬೇರೆ ಖಾತೆಗಳಿದ್ದುದು ಬೆಳಕಿಗೆ ಬಂದಿದೆ. ಅದಕ್ಕಾಗಿ ಕೆಲವರ ಖಾತೆ ಸ್ಥಗಿತಗೊಂಡಿರಬಹುದು. ಕೆ-2 ತಂತ್ರಾಂಶದಲ್ಲಿ ಅಪ್​ಲೋಡ್ ಮಾಡಿದ ಬಳಿಕ ಫಲಾನುಭವಿಗಳಿಗೆ ತಾಂತ್ರಿಕ ಸಮಸ್ಯೆಗಳಾಗಿದ್ದರೆ ತಹಸೀಲ್ದಾರ್​ಗೆ ಪರಿಹರಿಸಲು ಸೂಚನೆ ನೀಡಿದ್ದೇನೆ. ಆಧಾರ್ ಲಿಂಕ್ ಆಗದಿದ್ದರೆ ಹಣ ಪಾವತಿ ಕಷ್ಟ. ಈ ತರಹ ಏನೇ ಸಮಸ್ಯೆಯಿದ್ದರೂ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

    – ಎಚ್.ಕೆ. ಕೃಷ್ಣಮೂರ್ತಿ, ಎಡಿಸಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts