More

    ನಾಲ್ಕೇ ದಿನದಲ್ಲಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

    ಹಳಿಯಾಳ: ತಾಲೂಕಿನ ಬೆಳವಟಗಿ ಗ್ರಾಮದ ಕುಂಟಾಳನಟ್ಟಿ ಅರಣ್ಯದ ಒಣ ಹಳ್ಳದಲ್ಲಿ ಏ. 7ರಂದು ಕಂಡು ಬಂದ ನಾಗರಾಜ ಚನ್ನಪ್ಪ ಕೊಳದಾರ (29) ಶವದ ಪ್ರಕರಣದ ರಹಸ್ಯ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಳವಟಗಿ ಗ್ರಾಮದ ಮಾರುತಿ ಸಂಭಾಜಿ ಮಾದಪ್ಪಗೌಡ್ರ (45) ಬಂಧಿತ ಕೊಲೆ ಆರೋಪಿ. ತಾನೇ ಕೊಲೆ ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಈತನನ್ನು ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

    ನಡೆದಿದ್ದೇನು: ಏ. 4ರಂದು ಮಧ್ಯಾಹ್ನ ನಾಗರಾಜ ದೇವಸ್ಥಾನಕ್ಕೆ ಹೋದವರು ವಾಪಸ್ ಬಂದಿರಲಿಲ್ಲ. ನಂತರ ಏ. 7ರಂದು ಮಧ್ಯಾಹ್ನ ಬೆಳವಟಗಿ ಗ್ರಾಮದ ಕುಂಟಾಳನಟ್ಟಿ ಒಣ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೃತನ ತಂದೆ ಚನ್ನಪ್ಪ ಕೊಳದಾರ, ‘ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ’ ಎಂದು ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

    ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೊಲೀಸರು ಮಾರುತಿ ಮಾದಪ್ಪಗೌಡ್ರ ಅವರನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ತಾನೇ ನಾಗರಾಜನನ್ನು ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ವೃತ್ತಿಯಲ್ಲಿ ಚಾಲಕನಾಗಿರುವ ಮಾರುತಿಯು ನಾಗರಾಜ ಅವರ ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದನು. ಈ ಸಂಬಂಧಕ್ಕೆ ನಾಗರಾಜ ಅಡ್ಡಿಯಾಗುತ್ತಿದ್ದರು. ಈ ಕಾರಣಕ್ಕೆ ಏ. 4ರಂದು ಶನಿವಾರ ಕಾಡಿಗೆ ಹೋಗಿ ಕಟ್ಟಿಗೆ ಕಡಿದು ತರುವ ಎಂದು ಹೇಳಿ ಕರೆದುಕೊಂಡು ಹೋದ ಮಾರುತಿ, ನಾಗರಾಜ ಅವರ ತಲೆಯ ಹಿಂಭಾಗಕ್ಕೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ರುಂಡ ಬೇರ್ಪಡಿಸಿ ಸಾಕ್ಷ್ಯ ನಾಶಪಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ದಾಂಡೇಲಿ ಡಿವೈಎಸ್​ಪಿ ಪಿ. ಮೋಹನಪ್ರಸಾದ, ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಹಳಿಯಾಳ ಪಿಎಸ್​ಐ ಯಲ್ಲಾಲಿಂಗ ಕೊಣ್ಣೂರ, ಪಿಎಸ್​ಐ ರಾಜಕುಮಾರ, ಸಿಬ್ಬಂದಿ ಪಿ.ಎಂ. ಸೊಲ್ಲಾಪುರಿ, ಪ್ರಕಾಶ ಮೂಳೆ, ಅಶೋಕ ಹುಬ್ಬಳ್ಳಿ, ಜಗದೀಶ ಕುಂಬಾರ, ಎಂ.ಎಂ. ಮುಲ್ಲಾ, ದೇವಿದಾಸ್ ಉದ್ದಂಡಿ, ಶ್ರೀಶೈಲ ಮಂಗಾನವರ, ಬಸವರಾಜ, ಗುರುರಾಜ ಇತರರು ತನಿಖಾ ಕಾರ್ಯಾಚರಣೆ ತಂಡದಲ್ಲಿದ್ದರು. ಹಳಿಯಾಳ ಪೊಲೀಸರ ಕಾರ್ಯವನ್ನು ಎಸ್ಪಿ ಶಿವಪ್ರಕಾಶ ದೇವರಾಜು ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts