More

    ನಾಲ್ಕು ದಿನ ಫಲಪುಷ್ಪ ಪ್ರದರ್ಶನ

    ಹಾವೇರಿ: ನಮ್ಮೂರ ಜಾತ್ರೆ ಅಂಗವಾಗಿ ಜ. 3ರಿಂದ 6ರವರಗೆ ಹುಕ್ಕೇರಿಮಠದ ಕಾಲೇಜ್ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್. ತಿಳಿಸಿದರು.

    ನಗರದ ಹುಕ್ಕೇರಿಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ದಿನಗಳಿಂದ ಫಲಪುಷ್ಪ ಪ್ರದರ್ಶನದ ತಯಾರಿ ನಡೆಸಲಾಗಿದೆ. ಪ್ರದರ್ಶನದಲ್ಲಿ 17ಸಾವಿರ ಕೆಂಪು ಗುಲಾಬಿ ಹೂವುಗಳಿಂದ ತಯಾರಿಸಿದ ನಂದಿ, 12 ಸಾವಿರ ಬಿಳಿ ಹೂವುಗಳಿಂದ ತಯಾರಿಸಿದ ಆನೆ, ವಿವಿಧ ಪುಷ್ಪಗಳಿಂದ ಗಂಡಭೇರುಂಡ, ಚಿಣ್ಣರಿಗಾಗಿ ಬಾತುಕೋಳಿ, ನವಿಲುಗಳನ್ನು ರಚಿಸಲಾಗಿದೆ ಎಂದರು.

    ಸಿರಿಧಾನ್ಯಗಳಿಂದ ಸಿದ್ಧಗಂಗಾ, ಹುಕ್ಕೇರಿಮಠದ ಲಿಂ. ಶಿವಬಸವ ಹಾಗೂ ಶಿವಲಿಂಗ ಶ್ರೀಗಳ ಚಿತ್ರ, ಜಗದ್ಗುರು ಬಸವಣ್ಣ, ಭುವನೇಶ್ವರಿ ದೇವಿ, ವೀರಯೋಧರ ಸ್ಮಾರಕ ಸೇರಿ ಇತರ ಗಣ್ಯರ ಚಿತ್ರಗಳನ್ನು ಸಿರಿಧಾನ್ಯ, ರಂಗೋಲಿಯಲ್ಲಿ ಬಿಡಿಸಲಾಗುವುದು ಎಂದರು.

    ವಿವಿಧ ಹಣ್ಣು, ತರಕಾರಿಗಳಲ್ಲಿ ಗಣ್ಯರ ಮೂರ್ತಿಗಳನ್ನು ರಚಿಸಲಾಗಿದೆ. ಜಿಲ್ಲೆಯ 7 ತಾಲೂಕುಗಳಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಪ್ರದರ್ಶನದಲ್ಲಿರಲಿವೆ. ಬೋನ್ಸಾಯ್ ಗಿಡಗಳು, ಹೂವುಗಳು ಸೇರಿ 1.80ಲಕ್ಷ ರೂ. ವೆಚ್ಚದಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.

    ಜ. 3ರಂದು ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಸಂಸದ ಶಿವಕುಮಾರ ಉದಾಸಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸುದ್ದಿಗೋಷ್ಠಿಯಲ್ಲಿ ಜಾತ್ರಾ ಸಮಿತಿಯ ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಎಸ್.ಎಸ್. ಮುಷ್ಠಿ, ಬಿ. ಬಸವರಾಜ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಅಶೋಕ ಕುರುಬರ, ಬಸವರಾಜ ಬರೇಗಾರ, ಗಿರೀಶ ತುಪ್ಪದ ಇತರರಿದ್ದರು.

    ಶಿವಬಸವ ದನಗಳ ಜಾತ್ರೆ

    ಜ. 3ರಂದು ಬೆಳಗ್ಗೆ 10ಕ್ಕೆ ಎಪಿಎಂಸಿಯಲ್ಲಿರುವ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಶಿವಬಸವ ದನಗಳ ಜಾತ್ರೆ, ಉಚಿತ ಪಶು ಚಿಕಿತ್ಸೆ ಶಿಬಿರ, ಜಾನುವಾರು ಪ್ರದರ್ಶನ, ಕೃಷಿ ಚಿಂತನಗೋಷ್ಠಿ ಆಯೋಜಿಸಲಾಗಿದೆ. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಇತರರು ಪಾಲ್ಗೊಳ್ಳುವರು. ‘ಕೃಷಿಯಲ್ಲಿ ನೀರಿನ ಸದ್ಬಳಕೆ’ ಕುರಿತು ಡಾ. ಅಶೋಕ ಪಿ., ‘ಮಣ್ಣಿನ ಫಲವತ್ತತೆ ನಿರ್ವಹಣೆ’ ಕುರಿತು ಡಾ. ರಾಜಕುಮಾರ ಜಿ.ಆರ್., ‘ಶೂನ್ಯ ಬಂಡವಾಳ ಕೃಷಿ’ ಕುರಿತು ಡಾ. ಚಂದ್ರಶೇಖ ಸಿ.ಪಿ., ಉಪನ್ಯಾಸ ನೀಡುವರು. ಜಾನುವಾರು ಪ್ರದರ್ಶನದಲ್ಲಿ ಉತ್ತಮ ತಳಿಯ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts