More

    ನಾಲೆ ಕೊಳಚೆ ಕಾಳಿ ನದಿಗೆ

    ಕಾರವಾರ: ನಾಲೆಗಳ ಕೊಳಚೆ ನೀರು ಕಾಳಿ ನದಿಗೆ ನೇರವಾಗಿ ಸೇರಿಸುವುದನ್ನು ತಕ್ಷಣ ತಡೆಯುವಂತೆ ರಾಷ್ಟ್ರೀಯ ಹಸಿರು ಪೀಠ (ಎನ್​ಜಿಟಿ)ಇಲ್ಲಿನ ನಗರಸಭೆಗೆ ಸೂಚಿಸಿದೆ. ಶೀಘ್ರದಲ್ಲಿ ಕ್ರಮ ವಹಿಸದಿದ್ದಲ್ಲಿ ಕಠಿಣ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಎನ್​ಜಿಟಿ ಸೂಚನೆ ಆಧರಿಸಿ ನಗರಾಭಿವೃದ್ಧಿ ಇಲಾಖೆ ಅಕ್ಟೋಬರ್ 7 ರಂದು ಇಲ್ಲಿನ ನಗರಸಭೆಗೆ ನೋಟಿಸ್ ನೀಡಿದ್ದು, ಕೊಳಚೆ ನೀರು ನದಿಗೆ ಹೋಗುವುದನ್ನು ತಡೆಯಲು ಯೋಜನೆ ರೂಪಿಸಿ ಜ.16 ರ ಒಳಗೆ ವರದಿ ನೀಡುವಂತೆ ತಿಳಿಸಿದೆ.

    ನಗರ ತ್ಯಾಜ್ಯದಿಂದ ನದಿಗಳು ಕಲುಷಿತವಾಗುತ್ತಿರುವ ಬಗ್ಗೆ ಪತ್ರಿಕಾ ವರದಿಗಳನ್ನು ಆಧರಿಸಿ ಎನ್​ಜಿಟಿ ಸ್ವಯಂ ಪ್ರೇರಿತ ಪ್ರಕರಣವೊಂದನ್ನು 2018 ರಲ್ಲಿ ದಾಖಲಿಸಿಕೊಂಡಿತ್ತು. ಅದರ ವಿಚಾರಣೆಯ ಭಾಗವಾಗಿ ಎನ್​ಜಿಟಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನಾಲೆಗಳ ಶುದ್ಧೀಕರಣದ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ರಾಜ್ಯದ 17 ನದಿಗಳಿಗೆ 10 ಕ್ಕೂ ಹೆಚ್ಚು ನಗರಸಭೆಗಳ ತ್ಯಾಜ್ಯ ಸೇರ್ಪಡೆಯಾಗುವುದನ್ನು ಗುರುತಿಸಲಾಗಿದೆ. ಅದರಲ್ಲಿ ಕಾಳಿ ನದಿಯೂ ಸೇರಿದೆ.

    ತ್ಯಾಜ್ಯ ಚರಂಡಿಗೆ: ನಗರದ 31 ವಾರ್ಡ್​ಗಳಲ್ಲಿ 23 ವಾರ್ಡ್​ಗಳಿಗೆ ಇದುವರೆಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಕೆಲವೆಡೆ ಶೌಚದ ತ್ಯಾಜ್ಯವನ್ನೂ ನಾಲಾಗಳಿಗೆ ನೇರವಾಗಿ ಬಿಡಲಾಗುತ್ತಿದೆ. ಇನ್ನು ಕೆಲವೆಡೆ ಬಚ್ಚಲು, ಹಾಗೂ ಇತರ ತ್ಯಾಜ್ಯದ ನೀರನ್ನು ನೀರನ್ನು ನಾಲೆಗಳಿಗೆ ಬಿಡಲಾಗುತ್ತಿದೆ. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಕಾತ್ಯಾಯನಿ ನಾಲಾ ಸೇರಿ ಐದಕ್ಕೂ ಹೆಚ್ಚು ಕಡೆಗಳಲ್ಲಿ ನಾಲೆಗಳ ನೀರು ನೇರವಾಗಿ ಕಾಳಿ ನದಿಗೆ ಸೇರುತ್ತದೆ. ಅದನ್ನು ತಡೆದು, ಶುದ್ಧೀಕರಣಕ್ಕೆ ನಗರಸಭೆ ಶೀಘ್ರ ಕ್ರಮ ವಹಿಸಬೇಕಿದೆ. ಇಲ್ಲದಿದ್ದಲ್ಲಿ ಎನ್​ಜಿಟಿ ಕೈಗೊಳ್ಳುವ ಶಿಸ್ತು ಕ್ರಮಕ್ಕೆ ನಗರಸಭೆ ಅಧಿಕಾರಿ ಗುರಿಯಾಗಬೇಕಿದೆ.

    ನಗರಸಭೆ ಕ್ರಮವೇನು?: ನಗರದ ಎಲ್ಲ ವಾರ್ಡ್​ಗಳಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ 300 ಕೋಟಿ ರೂ. ಯೋಜನಾ ವರದಿ ಸಿದ್ಧಪಡಿಸಿದೆ. ಆದರೆ, ಅದು ಜಾರಿಯಾಗಲು ಇನ್ನು ನಾಲ್ಕೈದು ವರ್ಷವಾದರೂ ಬೇಕು. ಇದರಿಂದ ಅಲ್ಲಿಯವರೆಗೆ ನಾಲೆಗಳ ನೀರು ಶುದ್ಧೀಕರಿಸಿ ಬಿಡಲು ಕ್ರಮ ವಹಿಸಬೇಕಿದೆ. ಅಥಚಾ ನಾಲೆಗಳಿಗೆ ಕೊಳಚೆ ನೀರು ಹರಿಯುವುದನ್ನೇ ತಡೆಯಬೇಕಿದೆ. ನಗರದ ಜಿಪಂ ಕಚೇರಿಯ ಬಳಿ ಒಳಚರಂಡಿ ಕೊಳಚೆ ಉಕ್ಕಿ ಸಮುದ್ರ ಸೇರುವುದನ್ನು ತಡೆಯಲಾಗಿದೆ. ಕೋಣೆ ನಾಲೆಯ ನೀರನ್ನು ಶುದ್ಧೀಕರಿಸಲು ಯೋಜನೆ ರೂಪಿಸಲಾಗುತ್ತಿದೆ. ಇನ್ನು ಕಾಳಿ ನದಿಗೆ ಸೇರುವ ನಾಲೆಗಳಿಗೆ ಜಾಲರಿ ಹಾಕಿ ಕಸ ನೇರವಾಗಿ ಹೋಗುವುದನ್ನು ತಡೆಯಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ ತಿಳಿಸಿದ್ದಾರೆ.

    ನಾಲೆಗಳಿಗೆ, ಚರಂಡಿಗಳಿಗೆ ನೇರವಾಗಿ ತ್ಯಾಜ್ಯದ ನೀರು ಬಿಡುವುದು ಕಂಡಲ್ಲಿ ನೋಟಿಸ್ ನೀಡಿ, ತಡೆಯಲಾಗುತ್ತಿದೆ. ಮನೆಗಳ ಕಾಂಪೌಂಡ್ ಒಳಗೆ ಸೋಕ್ ಫೀಟ್ ಮಾಡಲು ಸೂಚಿಸಲಾಗಿದೆ. ತ್ಯಾಜ್ಯದ ನೀರನ್ನು ನೇರವಾಗಿ ಚರಂಡಿಗಳಿಗೆ ಬಿಡುವ ಮೂರು ಅಪಾರ್ಟ್​ವೆುಂಟ್​ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. | ಮಲ್ಲಿಕಾರ್ಜುನ ನಗರಸಭೆ ಪರಿಸರ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts