More

    ನಾಮ್ ಕೇ ವಾಸ್ತೆ ಸಿಸಿ ಕ್ಯಾಮರಾ!

    ರಾಜೇಂದ್ರ ಶಿಂಗನಮನೆ ಶಿರಸಿ

    ಅಪರಾಧ ಚಟುವಟಿಕೆ ನಿಯಂತ್ರಿಸುವ ಜತೆಗೆ ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನದ ಉದ್ದೇಶದಿಂದ ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳು ನಿರ್ವಹಣೆ ಕೊರತೆಯಿಂದ ಹಾಳಾಗಿ ಎರಡೂವರೆ ವರ್ಷವಾದರೂ ದುರಸ್ತಿಯಾಗಿಲ್ಲ.

    ಪೊಲೀಸ್ ಇಲಾಖೆಯ ವಿನಂತಿ ಮೇರೆಗೆ 2018ರ ಜೂನ್​ನಲ್ಲಿ ನಗರಸಭೆ 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಬಸ್ ನಿಲ್ದಾಣ ವೃತ್ತ, ಶಿವಾಜಿ ಚೌಕ, ಐದು ರಸ್ತೆ ವೃತ್ತ, ಮರಾಠಿಕೊಪ್ಪ ಕ್ರಾಸ್, ಅಶ್ವಿನಿ ಸರ್ಕಲ್, ದೇವಿಕೆರೆ ಸೇರಿ 23 ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಬೆಂಗಳೂರಿನ ಮೌರ್ಯ ಇನ್ಪೋಟೆಕ್ ಪ್ರೈವೇಟ್ ಲಿಮಿಟೆಡ್ ಕ್ಯಾಮರಾ ಅಳವಡಿಕೆಯ ಗುತ್ತಿಗೆ ಪಡೆದಿತ್ತು. ಆದರೆ ಈಗ ಎಲ್ಲ ಸಿಸಿ ಕ್ಯಾಮರಾಗಳು ಹಾಳಾಗಿವೆ.

    ಕ್ಯಾಮರಾ ಅಳವಡಿಸುವ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ನಗರಸಭೆ ಜನಪ್ರತಿನಿಧಿಗಳು, ಸಾಮಾನ್ಯ ಸಭೆಯಲ್ಲಿ ಕ್ಯಾಮರಾ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸದಸ್ಯರ ಗಮನಕ್ಕೆ ತರದೆ, ಅಗತ್ಯವಿಲ್ಲದ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಲಾಗಿದೆ. ಆಗ ನಗರಸಭೆ ಸದಸ್ಯರು ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು ಎಂದು ಒತ್ತಾಯಿಸಿದ್ದರು. ಅದಾಗಿ ಒಂದು ತಿಂಗಳಲ್ಲಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡ ನಂತರ ನಗರಸಭೆಯಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿತ್ತು. ಕಳಪೆ ಕ್ಯಾಮರಾ ಹಾಕಿದ್ದರಿಂದ, ಅದು ಒಂದೆರಡು ತಿಂಗಳಿನಲ್ಲಿ ಹಾಳಾಗಿದೆ. ಅನೇಕ ಬಾರಿ ದುರಸ್ತಿ ಮಾಡಿದರೂ ಅವು ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿಲ್ಲ.

    ಕ್ಯಾಮರಾ ಅಳವಡಿಕೆ ಕಾಮಗಾರಿ ಮುಗಿದ ಬಳಿಕ ನಗರಸಭೆಯು ಅದರ ನಿರ್ವಹಣೆಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದೆ. ಕೆಲವು ಬಾರಿ ತೊಂದರೆಯಾದಾಗ ಪೊಲೀಸ್ ಇಲಾಖೆ ಗುತ್ತಿಗೆದಾರ ಕಂಪನಿ ಸಂರ್ಪಸಿ ದುರಸ್ತಿ ಮಾಡಿಸಿದೆ. ಕ್ಯಾಮರಾಗಳು ಕಳಪೆಯಾಗಿದ್ದರಿಂದ ಪದೇಪದೆ ದುರಸ್ತಿ ಮಾಡಿಸಿರುವ ಪೊಲೀಸ್ ಇಲಾಖೆ, ನಗರಸಭೆ ಈಗ ದುರಸ್ತಿಪಡಿಸಲು ಮುಂದಾಗಿಲ್ಲ. ಇದರಿಂದ ನಗರದಲ್ಲಿ ಮತ್ತೆ ಕಳ್ಳಕಾಕರು ನಿರ್ಭೀತಿಯಿಂದ ಓಡಾಡುವಂತಾಗಿದೆ.

    ನಗರದಲ್ಲಿ ಈ ಹಿಂದೆ ಅಳವಡಿಸಿದ್ದ ಬಹುತೇಕ ಸಿಸಿಟಿವಿ ಕ್ಯಾಮರಾಗಳು ಅನುಪಯುಕ್ತವಾಗಿವೆ. ಕಳಪೆ ಕ್ಯಾಮರಾ ಅಳವಡಿಸಿರುವುದು ಈ ಅವಾಂತರಕ್ಕೆ ಕಾರಣವಾಗಿದೆ. ಈಗ ನಗರಸಭೆ ಅಧಿಕಾರಿಗಳೇ ಮುಂದಾಗಿ ಗುತ್ತಿಗೆದಾರರಿಂದ ದುರಸ್ತಿ ಕಾರ್ಯ ಮಾಡಿಸಬೇಕು.
    | ಮಧುಕರ ಬಿಲ್ಲವ ಶಿರಸಿ ನಗರಸಭೆ ಸದಸ್ಯ

    ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ದುರಸ್ತಿಗೊಳಿಸಬೇಕು ಎಂದು ಪೊಲೀಸ್ ಇಲಾಖೆ ಈಗಾಗಲೇ ನಗರಸಭೆಗೆ ಪತ್ರ ಬರೆದಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಂತರ ನಗರದಲ್ಲಿರುವ ಎಲ್ಲ ಕ್ಯಾಮರಾಗಳ ಸರ್ವೆ ನಡೆಸಿ ಮತ್ತೊಮ್ಮೆ ನಗರಾಡಳಿತದ ಗಮನಕ್ಕೆ ತರಲಾಗುವುದು.
    | ರವಿ ನಾಯ್ಕ ಡಿಎಸ್ಪಿ, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts