More

    ನಾಮಪತ್ರ ಹಿಂಪಡೆಯಲು ಇಂದು ಕೊನೇ ದಿನ

    ವಿಜಯವಾಣಿ ಸುದ್ದಿಜಾಲ ಕಾರವಾರ: ಡಿ.27 ರಂದು ಜಿಲ್ಲೆಯ 7 ತಾಲೂಕುಗಳ 126 ಗ್ರಾಪಂಗಳಿಗೆ ನಡೆಯಲಿರುವ ಚುನಾವಣೆಗೆ ಸಲ್ಲಿಕೆಯಾಗಿದ್ದ 21 ನಾಮಪತ್ರಗಳು ತಿರಸ್ಕೃತವಾಗಿವೆ. ಗುರುವಾರ ಪರಿಶೀಲನೆ ನಡೆಯಿತು. ಒಟ್ಟು 1280 ಸ್ಥಾನಗಳಿಗೆ 4420 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 4244 ಅಭ್ಯರ್ಥಿಗಳ ಉಮೇದುವಾರಿಕೆ ಕ್ರಮಬದ್ಧವಾಗಿವೆ. ಡಿ.19 ರಂದು ಸ್ಪರ್ಧೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಕಣದ ಅಂತಿಮ ಚಿತ್ರಣ ಲಭ್ಯವಾಗಲಿದೆ.

    ತಾಲೂಕುವಾರು ವರದಿ: ಶಿರಸಿಯಲ್ಲಿ 1, ಯಲ್ಲಾಪುರ, ಹಳಿಯಾಳದಲ್ಲಿ ತಲಾ 3, ಸಿದ್ದಾಪುರದಲ್ಲಿ 7, ಜೊಯಿಡಾದಲ್ಲಿ 5, ಮುಂಡಗೋಡಿನಲ್ಲಿ 2 ನಾಮಪತ್ರಗಳು ತಿರಸ್ಕೃತವಾಗಿವೆ. ಶಿರಸಿಯಲ್ಲಿ 955, ಸಿದ್ದಾಪುರದಲ್ಲಿ 750, ಯಲ್ಲಾಪುರದಲ್ಲಿ 512, ಮುಂಡಗೋಡಿನಲ್ಲಿ 679, ಹಳಿಯಾಳದಲ್ಲಿ 682, ದಾಂಡೇಲಿಯಲ್ಲಿ 117, ಜೊಯಿಡಾದಲ್ಲಿ 509 ಅಭ್ಯರ್ಥಿಗಳ ಉಮೇದುವಾರಿಕೆ ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಮದ್ಯ ಮಾರಾಟ ನಿಷೇಧ: ಡಿಸೆಂಬರ್ 22 ಹಾಗೂ 27 ರಂದು ಮತದಾನ ಜರುಗುವ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮದ್ಯಪಾನ, ಮಾರಾಟ, ಸಾಗಣೆ ಹಾಗೂ ಸಂಗ್ರಹ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಆದೇಶ ಹೊರಡಿಸಿದ್ದಾರೆ. ಮೊದಲ ಹಂತದ ಮತದಾನದ 48 ಗಂಟೆ ಪೂರ್ವ ಎಂದರೆ ಡಿ.20ರಂದು ಸಾಯಂಕಾಲ 5ರಿಂದ 22ರ ಸಾಯಂಕಾಲ 5ರವರೆಗೆ ಹಾಗೂ ಎರಡನೇ ಹಂತಕ್ಕಾಗಿ ಡಿ.25 ರ ಸಾಯಂಕಾಲ 5ರಿಂದ 27ರ ಸಾಯಂಕಾಲ 5 ಗಂಟೆವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

    22, 27ರಂದು ನಿಷೇದಾಜ್ಞೆ ಜಾರಿ: ಗ್ರಾಪಂ ಮತದಾನ ಸುಸೂತ್ರವಾಗಿ ನಡೆಯಲು ಡಿಸೆಂಬರ್ 22 ಹಾಗೂ 27ರಂದು ಜಿಲ್ಲಾದ್ಯಂತ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಸಂತೆ, ಜಾತ್ರೆ ಸೇರಿದಂತೆ ಇತರೆ ಎಲ್ಲ ಜನಸಂದಣಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮೊದಲ ಹಂತದ ಮತದಾನ ನಡೆಯಲಿರುವ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಡಿಸೆಂಬರ್ 22ರಂದು, 2ನೇ ಹಂತದ ಮತದಾನ ನಡೆಯುವ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ, ದಾಂಡೇಲಿ ತಾಲೂಕುಗಳಲ್ಲಿ ಡಿಸೆಂಬರ್ 27ರಂದು ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಸೆಕ್ಷನ್ 144ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts