More

    ನಾಗರ ಪಂಚಮಿ ಸಂಭ್ರಮ

    ಗದಗ: ಕರೊನಾ ಆತಂಕದ ನಡುವೆಯೂ ಜಿಲ್ಲಾದ್ಯಂತ ಸಡಗರ-ಸಂಭ್ರಮದಿಂದ ನಾಗರ ಪಂಚಮಿ ಆಚರಿಸಲಾಯಿತು.
    ‘ನಾಗರ ಪಂಚಮಿ ನಾಡಿಗೆ ದೊಡ್ಡದು’ ಎನ್ನುವಂತೆ ಮಹಿಳೆಯರ ಪಾಲಿಗೆ ಗುರುವಾರ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.
    ಸ್ಥಳೀಯ ವಿವೇಕಾನಂದ ನಗರದ ನಿಸರ್ಗ ಬಡಾವಣೆಯ ನಾಗನಕಟ್ಟೆ, ಪಂಚಾಕ್ಷರಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನ, ಕರಿಯಮ್ಮನಕಲ್ಲ ಬಡಾವಣೆಯ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳು ಹಾಗೂ ಬಡಾವಣೆಗಳಲ್ಲಿರುವ ನಾಗನ ಮೂರ್ತಿಗಳಿಗೆ ಗೃಹಿಣಿಯರು, ಯುವತಿಯರು, ಬಾಲೆಯರು ನಾಗರಮೂರ್ತಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಬಳಿಕ ಮನೆಯಲ್ಲಿ ಮಣ್ಣಿನಿಂದ ಮಾಡಿದ ನಾಗರ ಮೂರ್ತಿಗೆ ಕುಟುಂಬ ಸದಸ್ಯರೆಲ್ಲ ಸೇರಿ ದೇವರು, ಹಿರಿಯರ ಹೆಸರಲ್ಲಿ ಹಾಲೆರೆದು, ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.
    ಲಡ್ಡು ಸವಿ, ಜೋಕಾಲಿ ಜೀಕು: ಪಂಚಮಿ ವಿಶೇಷವಾದ ಅಳ್ಳಿಟ್ಟು, ಶೇಂಗಾ, ಎಳ್ಳು, ರವೆ, ಪುಟಾಣಿ ಹಿಟ್ಟು, ಮಂಡಕ್ಕಿ, ಮೈದಾ ಹಿಟ್ಟಿನ ಗುಳಗಿ, ಅರಳು, ವಿವಿಧ ಉಂಡೆಗಳು (ಲಡ್ಡು) ಹಾಗೂ ಕೊಬ್ಬರಿ, ಬೆಲ್ಲವನ್ನು ಸವಿದರು. ಮಕ್ಕಳು ಉತ್ಸಾಹದಿಂದ ಜೋಕಾಲಿ ಜೀಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ಅಲ್ಲಲ್ಲಿ ಲಿಂಬೆಹಣ್ಣು ಎಸೆಯುವ ಆಟವಾಡಿದರು. ಆ. 13ರಂದು ನಾಗಪ್ಪನ ಹುತ್ತ ಮುರಿಯುವ ಹಬ್ಬ ಆಚರಣೆ ನಡೆಯಲಿದೆ.
    ಬಸವ ಪಂಚಮಿ ಇಂದು: ವಿಶ್ವಗುರು, ಮಹಾಮಾನವತಾವಾದಿ, ಜಗಜ್ಯೋತಿ ಬಸವಣ್ಣನವರು ಕ್ರಿ.ಶ. 1167ರಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಮಹಾಬಯಲಿನಲ್ಲಿ ಬಯಲಾದರು. ಆ ಬಯಲ ಸ್ವರೂಪರಾದ ದಿನವನ್ನೇ ‘ಬಸವ ಪಂಚಮಿ‘ಯನ್ನಾಗಿ ಬಸವತತ್ವಾನುಯಾಯಿಗಳು, ಬಸವಭಕ್ತರು ಆಚರಿಸುತ್ತ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆ. 13ರಂದು ಬೆಳಗ್ಗೆ 9ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿ ಕೋವಿಡ್ ನಿಯಮಾನುಸಾರ ಸಾಂಕೇತಿಕವಾಗಿ ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಪಣೆ, ಜಯಘೊಷ ನಂತರ ಭೀಷ್ಮಕೆರೆಯಲ್ಲಿನ ಶ್ರೀ ಬಸವೇಶ್ವರ ಮೂರ್ತಿ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ ಎಂದು ಪ್ರಕಾಶ ಅಸುಂಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts