More

    ನಾಗರಿಕರಿಗೆ ಆಸ್ತಿ ತೆರಿಗೆ ಏರಿಕೆಯ ವಿಪತ್ತು

    ಹುಬ್ಬಳ್ಳಿ: ಕರೊನಾ ಮಹಾಮಾರಿಯಿಂದ ಜನರು ಸಂಕಟದಲ್ಲಿರುವಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ದರದಲ್ಲಿ ಏರಿಕೆ ಮಾಡಿ ಗಾಯದ ಮೇಲೆ ಬರೆ ಹಾಕಿದೆ. ಪಾಲಿಕೆಯ ನಿರ್ಣಯಕ್ಕೆ ನಾಗರಿಕರಷ್ಟೇ ಅಲ್ಲ, ವರ್ತಕರು, ವಾಣಿಜ್ಯ-ಕೈಗಾರಿಕೋದ್ಯಮಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    2020-21ನೇ ಸಾಲಿಗೆ ಅನ್ವಯವಾಗುವಂತೆ ಆಸ್ತಿ ತೆರಿಗೆಯಲ್ಲಿ ವಾಸದ ಕಟ್ಟಡಗಳಿಗೆ ಶೇ. 20ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ. 30ರಷ್ಟು, ವಾಸೇತರ-ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳಿಗೆ ಶೇ. 25ರಷ್ಟು ಹಾಗೂ ಖುಲ್ಲಾ ಜಾಗಗಳಿಗೆ ಶೇ. 30ರಷ್ಟು ಏರಿಕೆ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 2.85 ಲಕ್ಷ ಆಸ್ತಿಗಳಿವೆ.

    ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಮನ್ನಾ ಮಾಡಬೇಕೆಂದು ವರ್ತಕರು, ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸರ್ಕಾರಕ್ಕೆ ಕೇಳಿದ್ದರು. ಮನ್ನಾ ಮಾಡುವುದಿರಲಿ, ಏರಿಕೆ ಮಾಡಿ ಕೋವಿಡ್ ಪ್ಯಾಕೇಜ್ ನೀಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಆರ್ಥಿಕ ವರ್ಷ ಆರಂಭಗೊಂಡ ಒಂದೂವರೆ ತಿಂಗಳ ಬಳಿಕ ತೆರಿಗೆ ಹೆಚ್ಚಿಸಿರುವುದು ಇದೇ ಮೊದಲು. ಹಳೇ ದರದಂತೆ ಈಗಾಗಲೇ ಆಸ್ತಿ ತೆರಿಗೆ ಸಂದಾಯ ಮಾಡಿರುವವರು ವ್ಯತ್ಯಾಸದ ಮೊತ್ತ ತುಂಬಬೇಕೆಂದು ಪಾಲಿಕೆ ಅಧಿಕಾರಿಗಳು ಕರದಾತರಿಗೆ ಕರೆ ಮಾಡುತ್ತಿದ್ದಾರೆ. ಇಲ್ಲದಿದ್ದರೆ, ನೋಟಿಸ್ ಜಾರಿ ಮಾಡುತ್ತೇವೆ, ಬಡ್ಡಿ ಆಕರಣೆ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ.

    ಸ್ವಯಂ ಘೊಷಿತ ಆಸ್ತಿ ತೆರಿಗೆ ಪದ್ಧತಿಯ ನಿಯಮದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ದರದಲ್ಲಿ ಏರಿಕೆ ಕಡ್ಡಾಯ. ಶೇ. 15ರಿಂದ 30ರ ವರೆಗೆ ಏರಿಕೆ ಮಾಡುವುದನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ವಿವೇಚನೆಗೆ ಬಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 2017-18ರಲ್ಲಿ ಕೊನೆಯ ಬಾರಿ ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಿತ್ತು. 2020-21ನೇ ಸಾಲಿನಲ್ಲಿ ಆಸ್ತಿ ತೆರಿಗೆ ದರ ಏರಿಕೆ ಮಾಡಬಾರದೆಂದು ಹಾಗೂ ಈಗಿರುವ ದರದಲ್ಲಿಯೇ ಆಕರಣೆ ಮಾಡಲು ಅವಕಾಶ ನೀಡಬೇಕೆಂದು ಪಾಲಿಕೆ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕೇಳಿದ್ದರು. ಅಧಿಕಾರಿಗಳು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಇದೀಗ ನಿಯಮಾವಳಿಯ ನೆಪ ಹೇಳಿ ಏರಿಕೆಗೆ ಅಸ್ತು ಎಂದಿದ್ದಾರೆ.

    ಉಸ್ತುವಾರಿ ಸಚಿವರ ಗಮನಕ್ಕೆ ಬಂದಿಲ್ಲವೆ?: ಪಾಲಿಕೆಯಲ್ಲಿ ಕಳೆದ 1 ವರ್ಷದಿಂದ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲ. ಅಧಿಕಾರಿಗಳದ್ದೇ ಕಾರುಬಾರು. ಆದರೆ, ಆಸ್ತಿ ತೆರಿಗೆ ಏರಿಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗಮನಕ್ಕೆ ಇಲ್ಲವೆ? ಲಾಕ್​ಡೌನ್ ಪೂರ್ವ ಹಾಗೂ ಬಳಿಕ ಕೈಗಾರಿಕೋದ್ಯಮಿಗಳು ವಿವಿಧ ಹಂತಗಳಲ್ಲಿ ಸಚಿವರನ್ನು ಭೇಟಿ ಮಾಡಿ ವಿನಾಯಿತಿ, ರಿಯಾಯಿತಿ ಕೋರಿದ್ದಾರೆ. ಆದರೆ, ಸಚಿವರು ಮೌನ ವಹಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದ ರಿಯಲ್ ಎಸ್ಟೇಟ್ ಉದ್ಯಮಿಗಳು, ವರ್ತಕರು, ಕೈಗಾರಿಕೋದ್ಯಮಿಗಳು ಆಸ್ತಿ ತೆರಿಗೆ ಏರಿಕೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಬುಧವಾರ ಸಚಿವರ ಭೇಟಿಗೆ ನಿರ್ಧರಿಸಿದ್ದಾರೆ.

    ವಿಶೇಷ ಪ್ಯಾಕೇಜ್ ರೂಪಿಸಿ: ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯು ಆಸ್ತಿ ಕರವನ್ನು ಹೆಚ್ಚಳ ಮಾಡಿ ಕರದಾತರಿಗೆ ಶಾಕ್ ನೀಡಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಮಾಜಿ ಶಾಸಕ ನಾಗರಾಜ ಛಬ್ಬಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಉಭಯ ನಾಯಕರು, ಲಾಕ್​ಡೌನ್​ನಿಂದಾಗಿ ಜನತೆ ಮೊದಲೇ ಸಂಕಷ್ಟಕ್ಕೀಡಾಗಿದೆ. ವ್ಯಾಪಾರ- ವಹಿವಾಟು ಇಲ್ಲದೆ ಉದ್ಯಮಿಗಳು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಕೆಲಸವಿಲ್ಲದೆ ಉದ್ಯೋಗದಾತರು ಪರದಾಡುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಪಾಲಿಕೆಯು ಪ್ರಸಕ್ತ ಸಾಲಿನ ಆಸ್ತಿಕರವನ್ನು ಶೇ.20 ರಿಂದ 30ರ ವರೆಗೆ ಏರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಕೂಡಲೆ ಈ ಏರಿಕೆಯನ್ನು ಹಿಂಪಡೆಯಬೇಕು. ಆಸ್ತಿ ಕರ ಪಾವತಿ ಮೇಲೆ ರಿಯಾಯಿತಿ ನೀಡಬೇಕು. ಪಾಲಿಕೆಯ ಆದಾಯ ಹೆಚ್ಚಳಕ್ಕಾಗಿ ಜನರ ಮೇಲೆ ಅನಗತ್ಯ ಹೊರೆ ಹಾಕದೇ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಪಡೆಯುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ಆಯುಕ್ತರಿಗೆ ಒತ್ತಾಯ ಮಾಡಿದ್ದಾರೆ.

    ಸಂಕಟದ ಸಮಯದಲ್ಲಿ ಆಸ್ತಿ ತೆರಿಗೆ ಪ್ರಮಾಣ ಹೆಚ್ಚಿಸಿರುವುದು ಖಂಡನೀಯ. ಕೋವಿಡ್ ಪರಿಹಾರವೆಂದು ಸರ್ಕಾರಗಳು ಪ್ಯಾಕೇಜ್ ಘೊಷಣೆ ಮಾಡಿವೆ. ಕಳೆದ 2 ತಿಂಗಳಿಂದ ವಾಣಿಜ್ಯ ವಹಿವಾಟು ನಿಂತು ಹೋಗಿದೆ. ಮುಂದೆ ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ. ಹೀಗಿರುವಾಗ ಆಸ್ತಿ ತೆರಿಗೆ ಕಡಿಮೆ ಮಾಡಬೇಕಿತ್ತು. ಬದಲಾಗಿ ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.

    | ಸುರೇಶ ಕಿರೇಸೂರ ಎಸಿಸಿಇ (ಇಂಡಿಯಾ) ಹುಬ್ಬಳ್ಳಿ ಶಾಖೆ ಚೇರ್​ಮನ್

    ಕರೊನಾ ಸಂಕಟದಿಂದ ಜನರು ತತ್ತರಿಸಿರುವ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ದರ ಏರಿಕೆ ಮಾಡಿರುವುದು ಕ್ರೂರ ನಿರ್ಧಾರ. ತಕ್ಷಣದಿಂದ ಈ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಗೆ ಬೇರೆ ಮಾರ್ಗ ಯೋಚಿಸಿ.

    | ಸಂತೋಷ ನರಗುಂದ ಧಾರವಾಡ ಜಿಲ್ಲಾ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ

    ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಬಿಜಿನೆಸ್ ಇಲ್ಲ. ಕೈಗಾರಿಕೆಗಳಿಗೆ ಮುಂದಿನ ದಿನಗಳು ಅಶಾದಾಯಕವಾಗಿಲ್ಲ. ಹಿಂದಿನ ಸೇಲ್ಸ್ ಬಾಕಿ ಕೋಟ್ಯಂತರ ರೂ. ಬರಬೇಕಿದೆ. ಆಸ್ತಿ ತೆರಿಗೆ ಮನ್ನಾ ಮಾಡಬೇಕೆಂದು ನಾವು ಕೇಳಿದ್ದೆವು. ಆದರೆ, ಈಗ ಶೇ. 20ರಷ್ಟು ಏರಿಕೆ ಮಾಡಿ ನಮ್ಮನ್ನು ಮುಳುಗಿಸಲು ಹೊರಟಿದ್ದಾರೆ.

    | ಸಂತೋಷ ಕಾಟವೆ ಎಸ್​ಎಸ್​ಕೆ ಸಣ್ಣಕೈಗಾರಿಕೆಗಳ ಸಂಘದ ಕಾರ್ಯದರ್ಶಿ

    ಪಾಲಿಕೆ ಸದ್ದಿಲ್ಲದೆ ಆಸ್ತಿ ತೆರಿಗೆ ಏರಿಕೆ ಮಾಡಿರುವುದು ಖಂಡನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಪ್ಯಾಕೇಜ್ ಘೊಷಣೆ ಮಾಡಿರುವಾಗ ನಿಯಮಾವಳಿ ನೆಪ ಹೇಳಿ ಏರಿಕೆ ಮಾಡಿರುವುದು ಉದ್ಯಮಗಳಿಗೆ ದೊಡ್ಡ ಹೊರೆಯಾಗಲಿದೆ. ಏರಿಕೆಯನ್ನು ಕೈ ಬಿಡಬೇಕು.

    | ಪ್ರದೀಪ ರಾಯ್ಕರ್ ಕ್ರೆಡೈ ಕರ್ನಾಟಕ ಉಪಾಧ್ಯಕ್ಷ

    ಕರೊನಾ ಸಂಕಟದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ದರದಲ್ಲಿ ಶೇ. 20ರಷ್ಟು ಕಡಿತ ಮಾಡಬೇಕು. ಶೇ. 5ರಷ್ಟು ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ.

    | ವಿನಯ ಜವಳಿ ಹುಬ್ಬಳ್ಳಿಯ ಕರ್ನಾಟಕ, ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ

    ಪ್ರಸಕ್ತ ವರ್ಷ ಹಳೇ ದರದಲ್ಲಿಯೇ ಆಸ್ತಿ ತೆರಿಗೆ ಆಕರಿಸಲು ನಿರ್ದೇಶನ ಕೋರಿ ಸರ್ಕಾರವನ್ನು ಕೇಳಿದ್ದೆವು. ಆದರೆ, ಪಕ್ಕದ ದಾವಣಗೆರೆ ಮಹಾನಗರ ಪಾಲಿಕೆ, ಕೆಲ ನಗರ ಸ್ಥಳೀಯ ಸಂಸ್ಥೆಗಳು ನಿಯಮಾವಳಿಯಂತೆ ಏರಿಕೆ ಮಾಡಿವೆ. ನೀವೂ ಸಹ ಮಾಡಿ ಎಂದು ಸೂಚಿಸಿದ್ದರಿಂದ ಏರಿಕೆ ಮಾಡಲಾಗಿದೆ.

    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts