More

    ನವ ಭಾರತ ನಿರ್ಮಾಣಕ್ಕೆ ಸನ್ನದ್ಧರಾಗಿ

    ಕಲಬುರಗಿ: ಸೃಜನಶೀಲತೆ, ನಿರಂತರ ಕಲಿಕೆ, ಹೊಸ ಆಲೋಚನೆ ಹಾಗೂ ಆವಿಷ್ಕಾರಗಳ ಮೂಲಕ ಜನರು ಎದುರಿಸುತ್ತಿರುವಂಥ ಸಮಸ್ಯೆಗಳಿಗೆ ಪರಿಹಾರ ಹುಡುಕಿ ನವ ಭಾರತದ ನಿರ್ಮಾಣಕ್ಕೆ ಇಂಜಿನಿಯರ್​ಗಳು ಸನ್ನದ್ಧರಾಗಬೇಕಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಪತಿ ಡಾ.ಕರಿಸಿದ್ದಪ್ಪ ಕರೆ ನೀಡಿದರು.

    ಹೈದರಾಬಾದ್ ಕರ್ನಾಟಕ ಶಿಕ್ಷಣ(ಎಚ್ಕೆಇ) ಸಂಸ್ಥೆಯ ಇಲ್ಲಿನ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ)ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಭಾನುವಾರ ಜರುಗಿದ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪದವಿ ಮುಗಿದಾಕ್ಷಣ ಕಲಿಕೆ ಮುಗಿಯಿತು ಎಂದಲ್ಲ. ಇದು ಹೊಸ ಅವಕಾಶಗಳಿಗೆ ಮಾರ್ಗ ತೋರಿಸುತ್ತದೆ. ಹೊಸ ಹೊಸ ಅನ್ವೇಷಣೆ ಜತೆಯಲ್ಲಿ ನಿಜವಾದ ಕಲಿಕೆ ಶುರುವಾಗಲಿದೆ ಎಂದು ಹೇಳಿದರು.

    ಪದವಿ ನಂತರ ದೇಶದ ಕೆಲಸಕ್ಕಾಗಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಜ್ಞಾನ ಸಂಗ್ರಹ ಇಮ್ಮಡಿಗೊಳಿಸಿಕೊಳ್ಳಬೇಕು. ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಕೌಶಲವನ್ನು ಸಹ ಬೆಳೆಸಿಕೊಳ್ಳಬೇಕು. ಇನ್ನೊಬ್ಬರಿಗೆ ಸ್ಫೂರ್ತಿಯಾಗಿ ಮುನ್ನೆಡೆಯುತ್ತ ಪರಿಹಾರಗಳಿಗೆ ಸಾಕ್ಷಿಯಾಗಬೇಕು. ಸೃಜನಶೀಲತೆ ಕೆಲವರಿಗೆ ದೇವರು ನೀಡಿದ ಕಾಣಿಕೆ. ಹಾಗಂದ ಮಾತ್ರಕ್ಕೆ ಅದು ಕೆಲವರಿಗೇ ಮೀಸಲಾಗಿದೆ ಎಂದು ಅರ್ಥವಲ್ಲ. ಸೋತಾಗ ಎದೆಗುಂದಬೇಡಿ. ನಿಮ್ಮಿಂದ ಜಗತ್ತಿಗೆ ಏನಾದರೂ ಆಗಬೇಕಾಗಿದೆ ಎಂದು ಅರಿತು, ನಿಮ್ಮ ಮೇಲೆಯೇ ನೀವು ವಿಶ್ವಾಸವಿಟ್ಟು ಯೋಚನಾ ಕ್ರಮ ಬದಲಿಸಿಕೊಂಡು ಮುನ್ನೆಡೆದರೆ ಸಾಧನೆ ಎಲ್ಲರಿಗೂ ಒಲಿಯಲಿದೆ ಎಂದು ತಿಳಿಸಿದರು.

    ಡಾ.ಕರಿಸಿದ್ದಪ್ಪ ಹಾಗೂ ಮುಂಬಯಿ ನೆಹರು ವಿಜ್ಞಾನ ಕೇಂದ್ರ ವಿಶ್ರಾಂತ ಮುಖ್ಯಸ್ಥ ಶಿವಪ್ರಸಾದ ಖೆನೇದ್ ಅವರು ಇಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿರುವ 2019ನೇ ಬ್ಯಾಚ್ ನವ ಇಂಜಿನಿಯರ್ಗಳಿಗೆ ಪದವಿ ಪ್ರದಾನ ಮಾಡಿದರು. ರ್ಯಾಂಕ್ ವಿಜೇತರಿಗೆ ಚಿನ್ನದ ಪದಕಗಳನ್ನು ವಿತರಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

    ಎಚ್ಕೆಇ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಹೈಟೆಕ್ ಶಿಕ್ಷಣ, ಪರಿಣಾಮಕಾರಿ ಬೋಧನೆ ಮತ್ತು ಅತ್ಯುತ್ತಮ ಸೌಲಭ್ಯಗಳು ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಲೇಜು ಸಾಧನೆ ಜತೆಗೆ ಹೆಸರು ಮಾಡಿದೆ.ಹಳೆಯ ವಿದ್ಯಾರ್ಥಿಗಳು ವಿಶ್ವದೆಲ್ಲ್ಲೆಡೆ ಸಿಗುತ್ತಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ಪ್ರಾಚಾರ್ಯ ಡಾ.ಎಸ್.ಎಸ್.ಕಲಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಡಾ.ಎಸ್.ಆರ್.ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರೆ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಖಂಡೇರಾವ, ಡಾ.ಎಸ್.ಬಿ.ಕಾಮರಡ್ಡಿ, ಡಾ.ಅನಿಲಕುಮಾರ ಪಟ್ಟಣ, ಮಹಾದೇವಪ್ಪ ರಾಂಪುರೆ, ಅರುಣಕುಮಾರ ಪಾಟೀಲ್, ಡಾ.ಕೈಲಾಶ ಪಾಟೀಲ್, ಸೋಮನಾಥ ನಿಗ್ಗುಡಗಿ, ಡಾ.ರಾಜಶೇಖರ ಪಾಟೀಲ್, ಉಪ ಪ್ರಾಚಾರ್ಯ ಡಾ.ಎಸ್.ಆರ್. ಪಾಟೀಲ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ರವೀಂದ್ರ ಲಠ್ಠೆ ಇತರರಿದ್ದರು. ಡಾ.ಸುಜಾತಾ ಬಿರಾದಾರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts