More

    ನವಜಾತ ಶಿಶುಗಳಲ್ಲಿ ಶ್ರವಣದೋಷ ಪತ್ತೆಗೆ ಯೋಜನೆ : ಉಪ ಕುಲಪತಿ ಡಾ.ಜಿ.ಪ್ರದೀಪ್ ಕುಮಾರ್ ಮಾಹಿತಿ

    ಕೋಲಾರ : ನವಜಾತ ಶಿಶುಗಳಲ್ಲಿ ಶ್ರವಣದೋಷ ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ಶ್ರವಣ, ಮಾತು ಮತ್ತು ಭಾಷೆ ನ್ಯೂನ್ಯತೆ ಕೇಂದ್ರವನ್ನು ಶ್ರೀದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಆರಂಭಿಸಲಾಗಿದೆ ಎಂದು ಸಂಸ್ಥೆ ಉಪ ಕುಲಪತಿ ಡಾ.ಜಿ.ಪ್ರದೀಪ್ ಕುಮಾರ್ ಹೇಳಿದರು.

    ಶ್ರೀದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ, ಶ್ರೀದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನವಜಾತ ಶಿಶುಗಳಲ್ಲಿ ಶ್ರವಣ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಹುಟ್ಟಿದ ಎಲ್ಲ ಶಿಶುಗಳ ಶ್ರವಣ ಪರೀಕ್ಷೆಗೆ ಕೈಗೊಂಡಿರುವ ಮಹತ್ವಪೂರ್ಣ ಯೋಜನೆ ಇದಾಗಿದ್ದು, ಆರಂಭಿಕ ಹಂತದಲ್ಲಿ ಶ್ರವಣದೋಷ ಪತ್ತೆಹಚ್ಚಿ ಅಂತಹ ಮಕ್ಕಳಿಗೆ ಪುನರ್ವಸತಿ ಕಾರ್ಯಕ್ರಮ ಯೋಜಿಸುವುದು ಇದರ ಇನ್ನೊಂದು ಉದ್ದೇಶ ಎಂದರು.
    ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥ ಡಾ. ಮ. ಜಯರಾಮ ಮಾತನಾಡಿ, ಸಂಸ್ಥೆಯಲ್ಲಿ 5 ವರ್ಷಗಳವರೆಗೆ ನವಜಾತ ಶಿಶುಗಳಲ್ಲಿ ಶ್ರವಣ ತಪಾಸಣೆ ನಡೆಯಲಿದೆ. ಈ ಯೋಜನೆಯಡಿ, ಹುಟ್ಟಿದ ಮಕ್ಕಳನ್ನು ಅವರು ಹುಟ್ಟಿದ 24ರಿಂದ 48 ಗಂಟೆಯೊಳಗೆ ಕೇಳುವಿಕೆಗೆ ಸಂಬಂಧಪಟ್ಟ ಕೆಲವು ಮೂಲಭೂತ ಪರೀಕ್ಷೆಗಳಿಗೆ ಒಳಪಡಿಸಲಾಗುವುದು ಎಂದರು.

    ಪರೀಕ್ಷೆ ವರದಿ ಪಾಸ್ ಅಥವಾ ರೆಫರ್ ಎಂದು ನಮೂದಿಸಲಾಗುವುದು. ರೆಫರ್ ಆದ ಮಕ್ಕಳನ್ನು 6ರಿಂದ 8 ವಾರದೊಳಗೆ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಆಗಲೂ ಶ್ರವಣ ದೋಷವಿರುವ ಸಂದೇಹ ಬಂದರೆ 3 ರಿಂದ 6 ತಿಂಗಳೊಳಗೆ ಪೂರ್ಣಪರೀಕ್ಷೆಗೆ ಒಳಪಡಿಸಿ ದೋಷ ಖಾತರಿಯಾದರೆ ಕೇಳುವಿಕೆಗೆ ಸಂಬಂಧಿಸಿದ ಶ್ರವಣ ಸಾಧನ ಅಳವಡಿಸಿ ದೀರ್ಘಕಾಲದ ಹಾಗೂ ಸಂಪೂರ್ಣ ವಾಕ್‌ಶ್ರವಣ ತರಬೇತಿ ನೀಡಲಾಗುವುದು. ಮಕ್ಕಳಲ್ಲಿನ ಶ್ರವಣನ್ಯೂನತೆ, ಪರಿಣಾಮ ತಡೆಗಟ್ಟಲು ಮನೆಯಲ್ಲೇ ಮಾಡಬಹುದಾದ ತರಬೇತಿ ಬಗ್ಗೆ ಪಾಲಕರಿಗೆ ಮಾಹಿತಿ ನೀಡಲಾಗುವುದು ಎಂದರು.

    ಮುಂಬರುವ ದಿನಗಳಲ್ಲಿ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ಈ ಯೋಜನೆ ವಿಸ್ತರಿಸುವ ಯೋಚನೆಯಿದ್ದು, ಕೋಲಾರ ನಗರದಲ್ಲಿ ಹುಟ್ಟುವ ಬಹುತೇಕ ಎಲ್ಲ ಮಕ್ಕಳನ್ನು ತಲುಪುವ ನಿರೀಕ್ಷೆ ಇದೆ ಎಂದು ಆಶಿಸಿದರು.
    ಕೇಳುವಿಕೆ ಮತ್ತು ಕಿವುಡುತನಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

    ಮಹಾವಿದ್ಯಾಲಯದ ರಿಜಿಸ್ಟ್ರಾರ್ ಡಾ.ಕೆ.ಎನ್.ವಿ.ಪ್ರಸಾದ್, ಆರ್.ಎಲ್.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಎಂ.ಅಜೀಂ ಹಾಜರಿದ್ದರು. ಇದಕ್ಕೂ ಮುನ್ನ ಶ್ರವಣ, ಮಾತು ಮತ್ತು ಭಾಷೆ ನ್ಯೂನತೆ ಕೇಂದ್ರವನ್ನು ವರ್ಚುವಲ್ ವೇದಿಕೆ ಮೂಲಕ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts