More

    ನರಗುಂದ ತಾಲೂಕಲ್ಲಿ ನೆರೆ ಭೀತಿ

    ಗದಗ: ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

    ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಬೆಣ್ಣಿಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರ ಪರಿಣಾಮ ರೋಣ ತಾಲೂಕಿನ ಯಾವಗಲ್ ಮತ್ತಿತರ ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿವೆ. ನರಗುಂದ-ರೋಣ ಮಾರ್ಗ ಬಹುತೇಕ ಬಂದ್ ಆಗಿದೆ.

    ನರಗುಂದ ಮತ್ತು ರೋಣ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳು ನೆರೆಯ ಆತಂಕ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸುಂದರೇಶಬಾಬು ಅವರು ಯಾವಗಲ್ ಸೇರಿ ಪ್ರವಾಹ ಪೀಡಿತ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ನೆರೆಯನ್ನು ಎದುರಿಸುವ ಕುರಿತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

    ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿಯ ಜಲಾಶಯ ಭರ್ತಿಯಾಗತೊಡಗಿದೆ. ಗದಗ ಬೆಟಗೇರಿಯಲ್ಲಿ ಗುರುವಾರ ಮಳೆ ಕಡಿಮೆ ಪ್ರಮಾಣದಲ್ಲಿ ಸುರಿಯಿತು. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಆದರೆ, ಇಡೀ ದಿನ ಮೋಡ ಕವಿದ ವಾತಾವರಣ ಮುಂದುವರಿಯಿತು. ಬುಧವಾರ ಸುರಿದ ಮಳೆಗೆ ಸ್ಥಳೀಯ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೀರು ನಿಂತು ಹೊಂಡದಂತಾಗಿದೆ. ಕೊಠಡಿಗಳಿಗೂ ನೀರು ನುಗ್ಗಿತ್ತು.

    ತಂಪು ಗಾಳಿ ಬೀಸುತ್ತಿರುವುದರಿಂದ ಜನ ಮುಖಕ್ಕೆ ಮಾಸ್ಕ್, ಸ್ವೆಟರ್, ಜರ್ಕಿನ್ ಹಾಕಿಕೊಂಡು ಸಂಚರಿಸುತ್ತಿರುವುದು ಕಂಡು ಬಂದಿತು. ಜಿಲ್ಲೆಯ ಮುಂಡರಗಿ, ಗಜೇಂದ್ರಗಡ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಜಿಟಿಜಿಟಿ ಮಳೆ ಸುರಿಯಿತು.

    ಎರಡು ಮನೆ ಕುಸಿತ: ನರಗುಂದ ಪಟ್ಟಣದ ಹಾಲಭಾವಿಕೇರಿ ಬಡಾವಣೆಯ ಅಬ್ದುಲ್​ಸಾಬ್ ಹವಾಲ್ದಾರ್ ಎಂಬವರ ಮನೆ, ಶಂಕರಲಿಂಗನ ಬಡಾವಣೆಯ ದಶರಥ ಹನುಮಂತಪ್ಪ ಮೊಟೇಕರ ಎಂಬುವವರ ಮನೆಯ ಮುಂದಿನ ಗೋಡೆ ಕುಸಿದಿದೆ. ನರಗುಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಯಾವುದೇ ಮನೆಗಳು ಬಿದ್ದಿರುವ ಕುರಿತು ಕಂದಾಯ ಇಲಾಖೆಯಿಂದ ಇದುವರೆಗೆ ಯಾವುದೇ ಮಾಹಿತಿಯಾಗಲಿ ಅರ್ಜಿಗಳಾಗಲಿ ಬಂದಿಲ್ಲ. ಮನೆ ಬಿದ್ದಿರುವ ಬಗ್ಗೆ ಅರ್ಜಿ ಸಲ್ಲಿಸಿದರೆ ಸ್ಥಳ ಪರಿಶೀಲಿಸಿ ಅರ್ಹರಿಗೆ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ನಿಯಮದಡಿ ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ಎ.ಎಚ್. ಮಹೇಂದ್ರ ತಿಳಿಸಿದ್ದಾರೆ.

    329 ಮಿ.ಮೀ. ಮಳೆ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಗದಗ ತಾಲೂಕಿನಲ್ಲಿ 30.3 ಮಿ.ಮೀ, ಮುಂಡರಗಿ 11.8 ಮಿಮೀ, ನರಗುಂದ 27.3 ಮಿ.ಮೀ, ರೋಣ 17 ಮಿಮೀ, ಶಿರಹಟ್ಟಿ 22.4 ಮಿಮೀ ಸೇರಿ ಜಿಲ್ಲೆಯಲ್ಲಿ 109.1 ಮಿ.ಮೀ ಮಳೆ ಆಗಿದೆ. ಏಪ್ರಿಲ್​ನಿಂದ ಇಲ್ಲಿಯವರೆಗೆ 274 ಮಿಮೀ ಮಳೆ ಆಗಬೇಕಿತ್ತು. 329 ಮಿ.ಮೀ.ನಷ್ಟು ಮಳೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ.

    ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

    ನರಗುಂದ: ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿರುವ ತಾಲೂಕಿನ ಕುರ್ಲಗೇರಿ, ಯಾವಗಲ್ಲ ಗ್ರಾಮದ ಬಳಿಯ ಬೆಣ್ಣೆ ಹಳ್ಳಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಗುರುವಾರ ಭೇಟಿ ನೀಡಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಒಂದು ವಾರದಿಂದ ಜಿಲ್ಲಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ನರಗುಂದ ತಾಲೂಕಿನ ಬೆಣ್ಣೆಹಳ್ಳ, ಕಿರು ಹಳ್ಳಗಳು, ಕೊಣ್ಣೂರ ಬಳಿಯ ಮಲಪ್ರಭಾ ನದಿಯೂ ತುಂಬಿ ಹರಿಯುತ್ತಿವೆ. ಇವುಗಳಿಂದ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಪ್ರವಾಹದ ಪರಿಸ್ಥಿತಿ ಎದುರಿಸಲು ಮುಂಜಾಗ್ರತೆ ಕ್ರಮವಾಗಿ ತಾಲೂಕಾಡಳಿತದ ಎಲ್ಲ ಅಧಿಕಾರಿಗಳು ಸಕಲ ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.

    ಬೆಣ್ಣೆಹಳ್ಳದ ಪ್ರವಾಹಕ್ಕೆ ತುತ್ತಾಗುವ ತಾಲೂಕಿನ ಬನಹಟ್ಟಿ, ಮೂಗನೂರ, ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪೂರ, ಖಾನಾಪೂರ ಗ್ರಾಮಗಳು ಹಾಗೂ ಮಲಪ್ರಭಾ ಪ್ರವಾಹಕ್ಕೆ ತುತ್ತಾಗುವ ಲಖಮಾಪೂರ, ವಾಸನ, ಬೆಳ್ಳೇರಿ, ಕೊಣ್ಣೂರ, ಶಿರೋಳ, ಕಪಲಿ, ಕಲ್ಲಾಪೂರ, ಇತರ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಮುಂಜಾಗ್ರತೆ ಕ್ರಮವಾಗಿ ಜಾಗೃತಿ ಮೂಡಿಸಬೇಕು. ನಿರಾಶ್ರಿತರ ಕೇಂದ್ರಗಳನ್ನು ತೆರೆಯಲು ಸುಸಜ್ಜಿತ ಕಟ್ಟಡಗಳನ್ನು ಗುರುತಿಸಿಕೊಂಡಿರಬೇಕು. ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಗೃಹ ಸೇರಿ ವಿವಿಧ ಸೌಕರ್ಯ ಹೊಂದಿರುವಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.

    ಯಾವಗಲ್ಲ ಗ್ರಾಮದ ಬಳಿ ಬೆಣ್ಣೆ ಹಳ್ಳ ವೀಕ್ಷಿಸಿದ ಜಿಲ್ಲಾಧಿಕಾರಿ, ಮುಂಜಾಗ್ರತೆ ದೃಷ್ಟಿಯಿಂದ ನರಗುಂದದಿಂದ ಯಾವಗಲ್ಲ-ರೋಣ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸುವಂತೆ ಸೂಚಿಸಿದರು.

    ಸಿಇಒ ಕೆ. ಆನಂದ, ಎಸ್ಪಿ ಎನ್. ಯತೀಶ, ತಾಪಂ ಇಒ ಚಂದ್ರಶೇಖರ ಕುರ್ತಕೋಟಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಧ್ರುವರಾಜ ಪಾಟೀಲ, ಬನಹಟ್ಟಿ ಗ್ರಾಪಂ ಪಿಡಿಒ ಕೆ.ಎಸ್. ಹಾದಿಮನಿ, ಇತರರಿದ್ದರು.

    ತಹಸೀಲ್ದಾರ್ ಮಹೇಂದ್ರಗೆ ಸೂಚನೆ: ಒಂದು ವೇಳೆ ಭೀಕರ ಪ್ರವಾಹ ಸಂಭವಿಸಿದಲ್ಲಿ ನಿರಾಶ್ರಿತರ ಕೇಂದ್ರಕ್ಕೆ ದಾಖಲಾಗುವ ಜನಸಂಖ್ಯೆಗೆ ಅನುಗುಣವಾಗಿ ಊಟ, ಉಪಾಹಾರ, ಆರೋಗ್ಯದ ವ್ಯವಸ್ಥೆ ಕಲ್ಪಿಸಿಕೊಡಲು ತಾಲೂಕಾಡಳಿತ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿಯಾದ ಬೆಳೆಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪ್ರವಾಹ ಸಂಭವಿಸುವ ಬಗ್ಗೆ ನಿಖರ ಮಾಹಿತಿಯನ್ನು ತಾಲೂಕಾಡಳಿತ ಅಥವಾ ಗ್ರಾಪಂ, ತಾಪಂ ಅಧಿಕಾರಿಗಳಿಗೆ ಹೇಳಲು ಗ್ರಾಪಂ ಮಟ್ಟದಲ್ಲಿ ಒಬ್ಬ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಡಿಸಿ, ಎಸ್ಪಿ ಜತೆ ಸಚಿವ ಸಿ.ಸಿ. ಪಾಟೀಲ ಚರ್ಚೆ

    ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಸಂಭಾವ್ಯ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಹಾಗೂ ಎಸ್ಪಿ ಎನ್. ಯತೀಶ ಅವರೊಂದಿಗೆ ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ರ್ಚಚಿಸಿದರು. ಭೀಕರ ಮಳೆಯಿಂದಾಗಿ ಜಿಲ್ಲೆಯ ವಿವಿಧ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಮೇಲ್ಮೈಭಾಗದಲ್ಲಿ ಕಳೆದೊಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನವಿಲು ತೀರ್ಥ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣವು ಹೆಚ್ಚಾಗಿದೆ. ನಿರಂತರ ಮಳೆ ಮುಂದುವರಿದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ. ಆದ್ದರಿಂದ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ತೀರದ ಸಾರ್ವಜನಿಕರ ಸುರಕ್ಷತೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಸಲಹೆ-ಸೂಚನೆ ನೀಡಿದರು.

    ಬುಡ್ಡಿಯಲ್ಲೇ ಮೊಳಕೆಯೊಡೆದ ಹೆಸರು

    ಲಕ್ಷ್ಮೇಶ್ವರ: ರೈತರ ಮುಂಗಾರಿನ ವಾಣಿಜ್ಯ ಮತ್ತು ಆಶಾದಾಯಕ ಹೆಸರು ಬೆಳೆ ಈಗ ಸತತ ಮಳೆಯಿಂದ ಹಾನಿಗೀಡಾಗಿದೆ.

    ಲಕ್ಷ್ಮೇಶ್ವರ ಸೇರಿ ತಾಲೂಕಿನ ದೊಡ್ಡೂರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯತ್ತಿನಹಳ್ಳಿ, ಹರದಗಟ್ಟಿ, ಆದ್ರಳ್ಳಿ, ಅಕ್ಕಿಗುಂದ, ಸೂರಣಗಿ, ಬಾಲೆಹೊಸೂರ ಸೇರಿ ಒಟ್ಟು 5,515 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆ ಈಗ ಕೊಯ್ಲಿಗೆ ಬಂದಿದೆ. ಸತತ ಮಳೆಯಿಂದಾಗಿ ಗಿಡದಲ್ಲಿಯೇ ಹೆಸರುಕಾಳು ಮೊಳಕೆಯೊಡೆದು ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಮೇಲ್ನೋಟಕ್ಕೆ ಕಾಯಿ ಉತ್ತಮವಾಗಿ ಕಂಡರೂ ಒಳಗಡೆ ಕಾಳು ಹಸಿಯಾಗಿದ್ದು ಮೊಳಕೆಯೊಡೆಯುತ್ತಿವೆ.

    ಕೆಲವೆಡೆ ಈ ವರ್ಷ ಕಾಳು ಕಟ್ಟಿದ ಬೆಳೆ ಹಕ್ಕಿಗಳ ಪಾಲಾಗಿವೆ. ಈಗ ಮಳೆಯಿಂದ ಮತ್ತೇ ಭೂಮಿ ಪಾಲಾಗುವ ಸ್ಪಷ್ಟ ಚಿತ್ರಣ ಕಂಡು ಬರುತ್ತಿದೆ. ಹೆಸರು ಕಾಯಿ ಬಿಡಿಸಿ ಮನೆಗೆ ತರಲು ಅವಕಾಶವಿಲ್ಲದಂತಾಗಿದೆ. ಮೊಳಕೆಯೊಡೆದಿರುವ ಹೆಸರು ಬಿಡಿಸಿ ಕಾಳನ್ನು ಮಾರುಕಟ್ಟೆಗೆ ಒಯ್ದರೂ ಉತ್ತಮ ಬೆಲೆ ಸಿಗುವ ಭರವಸೆ ಇಲ್ಲದಂತಾಗಿದೆ.

    ಮುಂಗಾರು ಪ್ರಾರಂಭದಲ್ಲಿಯೇ ಹೆಸರಿಗೆ 7050 ರೂ. ಬೆಂಬಲ ಬೆಲೆ ಘೊಷಣೆಯಾಗಿದ್ದರಿಂದ ಈ ವರ್ಷ ಹೆಸರು ಬೆಳೆಯಿಂದ ಒಂದಿಷ್ಟು ಅನುಕೂಲವಾದೀತು ಎಂದು ಹೆಸರು ಬಿತ್ತನೆ ಮಾಡಿದ್ದೆವು. ಆದರೆ, ಗಿಡದಲ್ಲಿಯೇ ಹೆಸರು ಕಾಯಿ ಮೊಳಕೆಯೊಡೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆದ್ದರಿಂದ ಸರ್ಕಾರ ಅತಿವೃಷ್ಟಿ ಪರಿಹಾರ ಯೋಜನೆಯಡಿ ಹೆಸರು ಸೇರಿ ಮುಂಗಾರಿನಲ್ಲಿ ಹಾನಿಗೀಡಾದ ಬೆಳೆಗಳಿಗೆ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಹಾಳಾದ ಬೆಳೆಗೆ ಪರಿಹಾರ ನೀಡಲು ಮನವಿ

    ಶಿರಹಟ್ಟಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೆಸರು ಬೆಳೆ ನಾಶವಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಶಿರಹಟ್ಟಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಗುರುವಾರ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

    ಪಪಂ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ, ಶಿವು ಕಲ್ಯಾಣಿ ಮಾತನಾಡಿ, ಮುಂಗಾರು ಹಂಗಾಮಿನ ಹೆಸರು ಬೆಳೆ ಈ ಭಾಗದ ರೈತರ ಪಾಲಿಗೆ ವಾಣಿಜ್ಯ ಬೆಳೆಯಾಗಿ ಪರಿಣಮಿಸಿದೆ. ಇದರಿಂದ ರೈತರು ಸಾಲ ಸೋಲ ಮಾಡಿ ಕಷ್ಟುಪಟ್ಟು ಬೆಳೆಸಿದ ಹೆಸರು ಬೆಳೆ ಕಟಾವಿಗೆ ಬರುವಷ್ಟರಲ್ಲಿ ನಾಶವಾಗಿದೆ ಎಂದು ಅಳಲು ತೋಡಿಕೊಂಡರು.

    ಅತಿಯಾದ ಮಳೆಯಿಂದ ಹತ್ತಿ, ಗೋವಿನ ಜೋಳದ ಬೆಳೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಹೀಗಾಗಿ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಯ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಎನ್.ಡಿ. ದೊಡ್ಡಮನಿ ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಮಂಜುನಾಥ ತುಳಿ, ಕೆ.ಬಿ. ಬೆಳವಟಗಿ, ಲಕ್ಷ್ಮಣ ಇಂಗಳಗಿ, ಸಿದ್ದಲಿಂಗಪ್ಪ ತುಳಿ, ಚಂದ್ರು ಹಮ್ಮಿಗಿ, ಎಫ್.ಬಿ. ವರವಿ, ಅಶೋಕ ಚಿಕ್ಕತೋಟದ ಯಲ್ಲಪ್ಪ ಹಾಲಪ್ಪನವರ, ನಿಂಗಪ್ಪ ಸೋಗಿಹಾಳ, ಎಸ್.ಎಫ್. ಕಲ್ಯಾಣಿ, ಮಾದೇವಪ್ಪ ಹಮ್ಮಿಗಿ ನೀಲಪ್ಪ ಇಂಗಳಗಿ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.

    ಜನಜೀವನ ಅಸ್ತವ್ಯಸ್ತ

    ನರೇಗಲ್ಲ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲವೂ ಕೆಸರುಮಯವಾಗಿವೆ. ಬೀದಿ ಬದಿ ವ್ಯಾಪಾರಿಗಳು, ಸುತ್ತಲಿನ ಗ್ರಾಮಗಳಿಂದ ಬರುವ ಸಾರ್ವಜನಿಕರು ತೊಂದರೆ ಅನುಭವಿಸವಂತಾಗಿದೆ. ಡ.ಸ. ಹಡಗಲಿ-ಅಬ್ಬಿಗೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಪರ್ಕ ಕಡಿತಗೊಂಡಿದೆ. ಅಬ್ಬಿಗೇರಿ ಗ್ರಾಮದ ಸಿದ್ಧಾರೂಢ ನಗರದಲ್ಲಿನ ವಿದ್ಯುತ್ ಪರಿವರ್ತಕ (ಟಿ.ಸಿ.) ಹೊಂದಿರುವ ಕಂಬಗಳು ಬಾಗಿವೆ. ಜಿಟಿಜಿಟಿ ಮಳೆಯಿಂದಾಗಿ ಹೆಸರು ಬೆಳೆ ಕಟಾವು ಮಾಡಲಾಗದ ಪರಿಸ್ಥಿತಿ ನಿರ್ವಣವಾಗಿದೆ. ಜಮೀನುಗಳಲ್ಲಿ ಹೆಸರು ಹಾಳಾಗುವ ಹಂತ ತಲುಪಿದೆ. ಕಟಾವು ಮಾಡಿಕೊಂಡು ಬಂದ ಹೆಸರು ಬುಡ್ಡಿಗಳನ್ನು ರಕ್ಷಿಸಲು ರೈತರು ಸಾಹಸಪಡುತ್ತಿದ್ದಾರೆ. ಉಳ್ಳಾಗಡ್ಡಿ ಬಿತ್ತನೆ ಮಾಡಲಾದ ಜಮೀನುಗಳು ಕಳೆಯಿಂದ ತುಂಬಿವೆ. ಕಳೆ ತೆಗೆಯಲು ಮಳೆ ಬಿಡುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts