More

    ನಮ್ಮೂರಿಗೆ ತೆರಳಲು ಅವಕಾಶ ನೀಡಿ

    ಗದಗ: ಕರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್ ಆಗಿದ್ದರಿಂದ ಕೆಲಸದ ನಿಮಿತ್ತ ಬಿಹಾರ, ದೆಹಲಿ ಸೇರಿ ಬೇರೆ ರಾಜ್ಯಗಳಿಂದ ಬಂದಿರುವ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಖಾಸಗಿ ಲಾಡ್ಜ್​ನಲ್ಲಿ ತಂಗಿರುವ ಅವರು ಸ್ವಗ್ರಾಮಗಳಿಗೆ ತೆರಳಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

    ಕೈಮುಗಿದು ಕೇಳಿಕೊಳ್ಳುತ್ತವೆ, ನಮ್ಮ ಸ್ವಂತ ಊರಿಗೆ ತೆರಳಲು ನಮಗೆ ಅನುವು ಮಾಡಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ದೆಹಲಿಯಿಂದ ಮಕ್ಕಳ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡಲು ಬಂದವರಂತೂ ಗೋಳಾಡುತ್ತಿದ್ದಾರೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದೇವೆ. ಸದ್ಯ ಇಲ್ಲಿ ಆಟಿಕೆ ಸಾಮಾನುಗಳ ವ್ಯಾಪಾರವೂ ಬಂದ್ ಆಗಿದ್ದು ಊಟಕ್ಕೂ ತೊಂದರೆ ಅನುಭವಿಸಬೇಕಾಗಿದೆ. ಆದ್ದರಿಂದ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಅವರು ಗೋಗರೆಯುತ್ತಿದ್ದಾರೆ.

    ತಾತ್ಕಾಲಿಕ ವ್ಯವಸ್ಥೆ : ಗದಗ-ಬೆಟಗೇರಿಯಲ್ಲಿರುವ ಸರ್ಕಾರಿ ವಸತಿ ನಿಲಯಗಳಲ್ಲಿ ಬಿಹಾರ ಸೇರಿ ಮತ್ತಿತರ ರಾಜ್ಯಗಳಿಂದ ನಗರಕ್ಕೆ ಆಗಮಿಸಿರುವ ಕಾರ್ವಿುಕರಿಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ನರಸಾಪೂರ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಪ್ರದೇಶ ಕಾರ್ವಿುಕರು ಇದ್ದಾರೆ ಎಂದು ಜಿಲ್ಲಾ ಕಾರ್ವಿುಕ ಅಧಿಕಾರಿ ಸುಧಾ ಗರಗ ತಿಳಿಸಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಕಾರ್ವಿುಕರಿಗೆ ಆಹಾರ ಸಾಮಗ್ರಿ, ಸಾಬೂನು, ಸ್ಯಾನಿಟೈಸರ್ ಮುಂತಾದ ಅವಶ್ಯಕ ವಸ್ತುಗಳನ್ನು ವಿತರಿಸಲಾಯಿತು. ಕರೊನಾ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಅನುಸರಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಲಾಯಿತು. ಜಿಲ್ಲಾ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎಂ.ಡಿ. ಸಾಮುದ್ರಿ, ಡಾ. ಅನಂತ ಶಿವಪುರ ಮತ್ತಿತರರು ಇದ್ದರು.

    ಬರಬೇಕಿದೆ ಮೂವರ ವರದಿ

    ಗದಗ: ಜಿಲ್ಲೆಯ ಕರೊನಾ ಪಿಡುಗು ಪ್ರಕರಣಗಳ ಕುರಿತಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 195 ಜನರು ನಿಗಾಕ್ಕೆ ಒಳಗಾಗಿದ್ದಾರೆ. 12 ಜನರು 28 ದಿನಗಳ ನಿಗಾ ಅವಧಿಯನ್ನು ಪೂರೈಸಿದ್ದಾರೆ. 173 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 10 ಜನರನ್ನು ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಪರೀಕ್ಷೆಗಾಗಿ ಈವರೆಗೂ 50 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 47 ಮಾದರಿಗಳು ನಕಾರಾತ್ಮಕವಾಗಿವೆ. 3 ಮಾದರಿಗಳ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಸೋಂಕಿತರು ಇಲ್ಲ.

    ಎಕ್ಕಾ, ರಾಜಾ, ರಾಣಿ ಅಂದವರಿಗೆ ಬಿತ್ತು ಕೇಸ್!

    ಗದಗ: ಕೆಲವರಿಗೆ ಮಜಾ ಮಾಡುವ ಸಮಯವಾಗಿದೆ. ಲಾಕ್​ಡೌನ್​ನಿಂದ ಇಸ್ಪೀಟ್ ಆಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಜಿಲ್ಲಾದ್ಯಂತ 23 ಜನರ ಮೇಲೆ ಪ್ರಕರಣ ದಾಖಲಾಗಿದೆ.

    ಕರೊನಾ ಸಾಂಕ್ರಾಮಿಕ ರೋಗವಾಗಿದ್ದು, ಜನರು ಮನೆಯಿಂದ ಹೊರಬರಬಾರದು ಎಂದು ಸರ್ಕಾರ ಮನವಿ ಮಾಡಿದರೂ ಜನರು ಕಿಮ್ಮತ್ತು ನೀಡುತ್ತಿಲ್ಲ. ತಮಗೆ ತಿಳಿದಂತೆ ವರ್ತಿಸುತ್ತಿದ್ದಾರೆ. ನಗರದ ಹೊರವಲಯಕ್ಕೆ ತೆರಳಿ ಇಸ್ಪೀಟ್ ಆಡುತ್ತಿದ್ದಾರೆ. ಮುಖ್ಯಕ್ಕೆ ಮಾಸ್ಕ್ ಧರಿಸಲ್ಲ. ನಿಯಮಿತವಾಗಿ ಕೈಗಳನ್ನು ತೊಳೆಯುವುದಿಲ್ಲ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಗಜೇಂದ್ರಗಡದಲ್ಲಿ ನಾಲ್ವರು, ನರಗುಂದದಲ್ಲಿ ಏಳು ಜನರು, ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಐವರು, ಮುಂಡರಗಿಯಲ್ಲಿ ಇಬ್ಬರು ಮತ್ತು ಲಕ್ಷೆ್ಮೕಶ್ವರದಲ್ಲಿ ಐವರ ಮೇಲೆ ಪ್ರಕರಣ ದಾಖಲಾಗಿದೆ.

    ನಿರ್ಬಂಧ ವಿನಾಯಿತಿ

    ಗದಗ: ಸರ್ಕಾರದ ಆದೇಶದನ್ವಯ ಅಗತ್ಯ ವಸ್ತುಗಳ ಸಾಗಾಣಿಕೆಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ಪಶು ವೈದ್ಯಕೀಯ ಸೇವಾ ಚಿಕಿತ್ಸಾಲಯ ಹಾಗೂ ಪಶು ಔಷಧ ಹಾಗೂ ಪಶು ಆಹಾರ ಅಂಗಡಿ, ರೇಷ್ಮೆ ಗೂಡು ಮಾರುಕಟ್ಟೆ, ಕೃಷಿ ಮಾರುಕಟ್ಟೆ ಇಲಾಖೆಯ ಮೇಲ್ವಿಚಾರಣೆಯಲ್ಲಿ ಹಣ್ಣು, ತರಕಾರಿ ಸೇರಿದಂತೆ ಆಹಾರ ಸಗಟು ವ್ಯಾಪಾರಕ್ಕೆ ವಿನಾಯಿತಿ ನೀಡಲಾಗಿದೆ.

    ಕೃಷಿ ಉತ್ಪಾದಿತ ತರಕಾರಿ, ಹಣ್ಣು ಹಂಪಲಗಳ ಸಾಗಾಣಿಕೆ ನಿರ್ಬಂಧವನ್ನು ವಿನಾಯಿತಿಸಿದ್ದರಿಂದ ರೈತರು ತರಕಾರಿ, ಹಣ್ಣು ಹಂಪಲುಗಳನ್ನು ಜಿಲ್ಲೆಯಲ್ಲಿ ಅಥವಾ ಬೇರೆ ಜಿಲ್ಲೆಗೆ ಸಾಗಾಣಿಕೆ ಮಾಡಲು ಯಾವುದೇ ಅಡೆತಡೆ ಇಲ್ಲ. ರೈತರು ಯಾವುದೇ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬಹುದು. ತರಕಾರಿಗಳನ್ನು ತಳ್ಳುವ ಕೈಗಾಡಿಗಳಲ್ಲಿ ಸಂಚರಿಸಿ ವ್ಯಾಪಾರ ಮಾಡಬಹುದು. ಒಂದೇ ಕಡೆ ಸಾರ್ವಜನಿಕರು ಗುಂಪು ಕೂಡುವ ಹಾಗೆ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಪ್ರಾಣಿಗಳಿಗೂ ತಟ್ಟಿದ ಲಾಕ್​ಡೌನ್ ಬಿಸಿ!

    ಗದಗ: ಲಾಕ್​ಡೌನ್​ನ ಬಿಸಿ ಕೇವಲ ಮನುಷ್ಯರಿಗಲ್ಲ. ಪ್ರಾಣಿಗಳ ಮೇಲೂ ಭಾರಿ ಪರಿಣಾಮ ಬೀರಿದೆ. ಗೋವುಗಳು ಆಹಾರ ಮತ್ತು ಕುಡಿಯುವ ನೀರಿಗಾಗಿ ಹಪಹಪಿಸುತ್ತಿವೆ. ಗದಗದಲ್ಲಿ ಆಹಾರ ಅರಸಿ ಬಂದಿದ್ದ ಕರುವೊಂದು ಬಾಯಾರಿಕೆಯಿಂದ ಬಕೆಟ್​ನಲ್ಲಿದ್ದ ನೀರು ಕುಡಿಯಲು ಮನೆಯ ಕಾಂಪೌಂಡ್ ಒಳಗೆ ಬಂದಿದೆ. ಬಾಯಾರಿಕೆ ನೀಗಿಸಿಕೊಂಡು ಹೊರಗೆ ಬರುವಷ್ಟರಲ್ಲಿಯೇ ತಾಯಿ ಆಕಳು ಆಹಾರಕ್ಕಾಗಿ ಮುಂದೆ ಸಾಗಿದೆ. ಇದರಿಂದ ಕಕ್ಕಾಬಿಕ್ಕಿಯಾದ ಕರು ತಾಯಿಗಾಗಿ ಓಡಾಟ ಶುರು ಮಾಡಿತು. ಅಂಬಾ ಅಂಬಾ… ಎಂದು ಒದರುತ್ತ ತಾಯಿಯನ್ನು ಹುಡುಕತೊಡಗಿತು. ಗಂಟೆ ಕಾಲ ಕರು ಅತ್ತಿಂದಿತ್ತ ಅಲೆದರೂ ತಾಯಿ ಸಿಗಲಿಲ್ಲ. ಕೊನೆಗೆ ಆಹಾರಕ್ಕಾಗಿ ತೆರಳಿದ್ದ ಆಕಳು ಬೇರೊಂದು ಮನೆ ಕಾಂಪೌಂಡ್​ನಿಂದ ಹೊರಗೆ ಬಂದ ನಂತರ ಕರು ತನ್ನ ತಾಯಿಯನ್ನು ಸೇರಿಕೊಂಡಿತು. ಮನೆ ಮಾಲೀಕರು ತಾಯಿಗಾಗಿ ಹುಡುಕಾಟ ನಡೆಸಿದ್ದ ಕರುವಿನ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗಿದೆ.

    ಪಾಲನೆಯಾಗದ ಸರ್ಕಾರಿ ಆದೇಶ

    ಮುಂಡರಗಿ: ಪಟ್ಟಣದಲ್ಲಿ ಅಗತ್ಯ ವಸ್ತು ಹಾಗೂ ತರಕಾರಿ ಖರೀದಿಸಲು ಜನರು ಗುಂಪುಗುಂಪಾಗಿ ಸೇರುವುದು ಮಾತ್ರ ತಪ್ಪಿಲ್ಲ. ತಾಲೂಕಾಡಳಿತವು ದಿನಸಿ, ತರಕಾರಿ, ಹಾಲು ಮೊದಲಾದ ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸಮಯ ನಿಗದಿಪಡಿಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿತ್ತು. ಆದರೆ, ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪರಿಣಾಮ ಆಯಾ ವಾರ್ಡ್​ಗಳಿಗೆ ತಳ್ಳುವ ಗಾಡಿಗಳ ಮೂಲಕ ತರಕಾರಿ ಪೂರೈಕೆಗೆ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಕ್ರಮ ಕೈಗೊಂಡರು. ಆದರೆ, ದಿನಸಿ ಮೊದಲಾದ ಅಗತ್ಯ ವಸ್ತುಗಳ ಖರೀದಿಗೆ ಮುಖ್ಯಬಜಾರ್​ನಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಒಂದೆಡೆ ಸೇರುತ್ತಿದ್ದಾರೆ. ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸುವಾಗ ಮತ್ತು ಮುಖ್ಯಬಜಾರ್​ನಲ್ಲಿ ಸಂಚರಿಸುವಾಗ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸಂಜೆ ಸಮಯದಲ್ಲಿ ಬೈಕ್​ನಲ್ಲಿ, ಕಾಲ್ನಡಿಗೆಯಲ್ಲಿ ಜನರು ಓಡಾಡುತ್ತಿದ್ದಾರೆ. ತಾಲೂಕಾಡಳಿತವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಕುರಿತು ಸಾರ್ವಜನಿಕರಿಗೆ ಮತ್ತೊಮ್ಮೆ ತಿಳಿವಳಿಕೆ ನೀಡಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚು ಸಮಯ ಒಂದೆಡೆ ಸೇರದಂತೆ ಕ್ರಮ ವಹಿಸಬೇಕಿದೆ.

    ಮುರಾರ್ಜಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ವ್ಯವಸ್ಥೆ

    ನರಗುಂದ: ಪರ ಊರುಗಳಿಂದ ಬಂದ ಕರೊನಾ ಶಂಕಿತರ ಹೋಂ ಕ್ವಾರಂಟೈನ್​ಗಾಗಿ ತಾಲೂಕಿನ ಬೆನಕನಕೊಪ್ಪ ಮುರಾರ್ಜಿ ವಸತಿ ಶಾಲೆಯ ಕೊಠಡಿಗಳನ್ನು ಪ್ರತ್ಯೇಕ ವಾರ್ಡ್​ಗಳನ್ನಾಗಿ ತಾಲೂಕು ಆಡಳಿತ ಮಾರ್ಪಾಡು ಮಾಡಿಕೊಂಡಿದೆ.

    ಗೋವಾ, ಮಹಾರಾಷ್ಟ್ರ, ಕೇರಳ, ಕಾಸರಗೋಡು ಸೇರಿ ಇತರೆಡೆ ಹೊಟ್ಟೆ ಪಾಡಿಗಾಗಿ ದುಡಿಯಲು ತೆರಳಿದ್ದ ಸಾವಿರಾರು ಸಂಖ್ಯೆಯ ವಿವಿಧ ಗ್ರಾಮಗಳ ಜನರೀಗ ಮರಳಿ ತಮ್ಮ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ. ಅವರಿಗಾಗಿ ತಾಲೂಕಾಡಳಿತ ಈ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದೆ. ಮಂಗಳವಾರ ಒಂದೇ ದಿನಕ್ಕೆ ತಾಲೂಕಿನ ಲಖಮಾಪೂರ ಗ್ರಾಮದ 20 ಜನರನ್ನು ಈ ವಾರ್ಡ್​ಗಳಿಗೆ ಸ್ಥಳಾಂತರ ಮಾಡಲಾಗಿದ್ದು, ವಿಶೇಷ ನಿಗಾ ವಹಿಸಲಾಗಿದೆ.

    ಮಂಗಳವಾರ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಸೀಲ್ದಾರ್ ಎ.ಎಚ್. ಮಹೇಂದ್ರ ಮಾತನಾಡಿ, ನರಗುಂದ ತಾಲೂಕಿನಲ್ಲಿ ಒಟ್ಟು 1300 ಜನರು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಇದರಲ್ಲಿ 125 ಜನರು ಹೊರ ದೇಶಗಳಿಂದ ಹಾಗೂ 1200 ಜನರು ಬೇರೆ ಬೇರೆ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಕಾಸರಗೋಡಿಗೆ ಕೂಲಿ ಕೆಲಸಕ್ಕೆಂದು ತೆರಳಿದ್ದ ತಾಲೂಕಿನ ಲಖಮಾಪೂರ ಗ್ರಾಮದ 30 ಹೆಚ್ಚು ಜನರು ಮರಳಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಆದರೂ ಕೂಡ ಅಲ್ಲಿನ ಗ್ರಾಮಸ್ಥರು ಅವರನ್ನು ಗ್ರಾಮದಲ್ಲಿರಲು ಬಿಡುತ್ತಿರಲಿಲ್ಲ.

    ಹೀಗಾಗಿ, ಅವರನ್ನು ಇದೀಗ ಈ ಮುರಾರ್ಜಿ ವಸತಿ ಶಾಲೆಯಲ್ಲಿ 14 ದಿನಗಳವರೆಗೆ ಇಟ್ಟು ಉಪಚರಿಸಲಾಗುತ್ತದೆ. ಪ್ರತಿನಿತ್ಯ ಊಟ, ತಿಂಡಿ ನೀಡಿ, ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕಾಸರಗೋಡಿನಿಂದ ಬನಹಟ್ಟಿ ಗ್ರಾಮಕ್ಕೆ ಮತ್ತೆ ಐವರು ಆಗಮಿಸಿರುವ ಮಾಹಿತಿ ಲಭ್ಯವಿದ್ದು, ಅವರನ್ನು ಕೂಡ ಇಲ್ಲಿ ಇರಿಸಲಾಗುವುದು. ಇವರೆಲ್ಲರಿಗೂ 14 ದಿನಗಳ ಕಾಲ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ತಾಲೂಕಾಡಳಿತದಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts