More

    ನಮ್ಮಲ್ಲಿದೆ ಚಾರಿತ್ರಿಕ ಪುರುಷರ ಪೂಜಿಸುವ ಪಂಥ

    ಮೈಸೂರು: ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರೆಲ್ಲಾ ಚಾರಿತ್ರಿಕ ಪುರುಷರಾದರೂ ಅದಕ್ಕೆ ಪುರಾಣದ ಪರಿಕಲ್ಪನೆ ನೀಡಿ ಅವರನ್ನು ದೇವರನ್ನಾಗಿ ಪೂಜಿಸುವ ಭಕ್ತಪಂಥವೇ ನಮ್ಮಲ್ಲಿದೆ ಎಂದು ಸಾಹಿತಿ ಡಾ.ಬಂಜೆಗೆರೆ ಜಯಪ್ರಕಾಶ್ ತಿಳಿಸಿದರು.

    ಹೊನ್ನಾರು ಜನಪದ ಗಾಯಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅವರು ಸಂಪಾದಿಸಿರುವ ಜನಪದ ಮಹಾಕಾವ್ಯ ‘ಧರೆಗೆ ದೊಡ್ಡೋರು ಮಂಟೇಸ್ವಾಮಿ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು.

    ನೀಲಗಾರರಾಗಿದ್ದ ಬೆಟ್ಟದಬೀಡು ಸಿದ್ದಶೆಟ್ಟಿ ಹಾಡಿದ ಮಹಾಕಾವ್ಯವನ್ನು ಬರೆದುಕೊಂಡು ಅತ್ಯಂತ ಕಾಳಜಿಯಿಂದ ರಾಜಶೇಖರ್ ಅವರು ಈ ಮಹಾಕಾವ್ಯ ರಚಿಸಿದ್ದಾರೆ. ಮಹದೇಶ್ವರ ಹಾಗೂ ಮಂಟೇಸ್ವಾಮಿ ಅವರ ಬಗ್ಗೆ ಅಪಾರ ಗೌರವ, ಪ್ರೀತಿಯ ಜತೆಗೆ ಅತ್ಯಂತ ಭಕ್ತಿಯಿಂದ ಈ ಕೃತಿ ರಚಿಸಿದ್ದಾರೆ ಎಂದು ಹೇಳಿದರು.

    ರಾಜಶೇಖರ್ ಅವರ ಸಂಶೋಧನೆ ವಿಶಿಷ್ಟವಾದದ್ದು, ಹಲವಾರು ವರ್ಷಗಳ ಪರಿಶ್ರಮ ಹಾಕಿದ್ದು, ಜನಪದ ಪರಂಪರೆಯನ್ನು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಿದ್ದಾರೆ ಎಂದರು.

    ಜನಪದದಲ್ಲಿ ಸಮಾಜದ ಮೇಲು ಕೀಳು, ಭಕ್ತಿಯನ್ನು ಕಥನದ ಮೂಲಕ ಅತ್ಯಂತ ರೋಚಕವಾಗಿ ತಿಳಿಸಲಾಗಿದೆ. ಮಂಟೇಸ್ವಾಮಿ, ಮಹದೇಶ್ವರರು ಶ್ರಮಿಕರ ಪ್ರತಿನಿಧಿಯಾಗಿ ಇದ್ದರು. ಹಾಗಾಗಿ ಅವರು ಬಹುಬೇಗ ಜನರ ಜೀವನದ ಭಾಗವಾದರು ಎಂದು ಹೇಳಿದರು.
    ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಧರೆಗೆ ದೊಡ್ಡೋರು ಮಂಟೇಸ್ವಾಮಿ’ ಕೃತಿ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ‘ಜನಪದ ಗಾಯಕರತ್ನ’ ಕೃತಿಯನ್ನೂ ಬಿಡುಗಡೆಗೊಳಿಸಲಾಯಿತು.

    ಕೃತಿಯ ಕರ್ತೃ ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ಮಹದೇಶ್ವರ ಮಹಾಕಾವ್ಯದ ಸಮಯದಲ್ಲಿಯೇ ಈ ಮಂಟೇಸ್ವಾಮಿ ಕಾವ್ಯದ ಪರಿಕಲ್ಪನೆ ಮೂಡಿ ಅದನ್ನು ಸಂಗ್ರಹಿಸಲಾಗಿತ್ತು. ಅದನ್ನು ಸುಮಾರು 40 ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದು, 5 ವರ್ಷಗಳ ಕಾಲ ಅದನ್ನು ಪರಿಷ್ಕರಿಸಲಾಗಿದೆ. ಇನ್ನು ಹಲವಾರು ಕೃತಿಗಳು ನನ್ನ ಬಳಿ ಇದ್ದು, ಅವುಗಳನ್ನು ಪ್ರಕಟಿಸುವುದು ಈಗ ಕಷ್ಟಕರವಾಗುತ್ತಿದೆ. ಹಾಗಾಗಿ ಮುಂದೆ ಸಹಕಾರ ದೊರೆತರೆ ಜಾನಪದ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಉದ್ದೇಶವಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಹೊನ್ನಾಯಕನಹಳ್ಳಿ ಮಠದ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್, ಜಾನಪದ ವಿದ್ವಾಂಸ ಪ್ರೊ.ರಾಮೇಗೌಡ (ರಾಗೌ), ಪ್ರೊ.ಹನೂರು ಕೃಷ್ಣಮೂರ್ತಿ, ಪ್ರೊ.ಎನ್.ಎಸ್.ತಾರಾನಾಥ್ ಇತರರು ಇದ್ದರು.

    ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ಹಲವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts