More

    ನನ್ನ ಸೋಲಿಸುವ ಚರ್ಚೆ, ಪ್ರಯತ್ನ ನಿರಂತರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

    ಸಾಗರ: ನಮ್ಮ ಸಿದ್ಧಾಂತ, ಚಳವಳಿಗಳು ಮುರುಟಿ ಹೋಗುತ್ತಿವೆ. ಇಷ್ಟೆಲ್ಲ ಕೆಲಸ ಮಾಡಿದ ನನ್ನನ್ನು ಹೇಗೆ ಸೋಲಿಸುವುದು ಎನ್ನುವ ಬಗ್ಗೆಯೇ ಪ್ರಯತ್ನ ಮತ್ತು ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
    ನಗರದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಾಬ್ದಿ ಅಂಗವಾಗಿ ರೂಪಿಸಬೇಕಾದ ಕಾರ್ಯಕ್ರಮಗಳ ಕುರಿತು ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜಕೀಯದ ಹಾದಿಯಲ್ಲಿ ಚುನಾವಣೆ ಗೆಲ್ಲುವುದೊಂದೇ ಮುಖ್ಯವಲ್ಲ ಸದಾ ಜನರ ಪರವಾಗಿದ್ದು ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಪ್ರಯತ್ನ, ಜವಾಬ್ದಾರಿಗಳು ಇರಲೇಬೇಕು ಎಂದರು.
    ಹೋರಾಟಕ್ಕೆ ನಮಗೆ ಗೋಪಾಲಗೌಡರು, ರಾಮಮನೋಹರ ಲೋಹಿಯಾ ಅಂತಹವರೇ ಆದರ್ಶ. ನಾನು 1972ರಲ್ಲಿ ಪ್ರಥಮವಾಗಿ ಸಮಾಜವಾದಿ ಪಕ್ಷದಿಂದ ಶಾಸಕನಾದ ಸಂದರ್ಭದಲ್ಲಿ ಭೂ ಸುಧಾರಣೆ ಕಾನೂನು ಜಾರಿಗೆ ತರುವಂತಹ ವಿಚಾರದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದೆವು. ಅಂದಿನ ಭೂ ಒಡೆಯರು ನಮ್ಮನ್ನು ಕುಗ್ಗಿಸುವ ಪ್ರಯತ್ನಗಳೂ ಮಾಡಿದರು. ಆಗ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಕೈಗೊಂಡ ದಿಟ್ಟ ನಿರ್ಧಾರ ಇಂದು ಏನು ಹಿಡುವಳಿದಾರರಾಗಿರುವವರು ಅದರ ಫಲವನ್ನು ಉಣ್ಣುತ್ತಿದ್ದಾರೆ. ಗೇಣಿ ರೈತರ ಭೂಮಿ, ಬದುಕಿನ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ನಿರಂತರ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡೆವು, ಗೋಪಾಲಗೌಡರ ವಿಚಾರಧಾರೆಗಳು ನಮ್ಮನ್ನು ಸೈದ್ಧಾಂತಿಕವಾಗಿ ಚಳವಳಿಯಲ್ಲಿ ತೊಡಗಿಸಿತು. ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ವರ್ಷವನ್ನು ಅತ್ಯಂತ ಅರ್ಥಪೂರ್ಣವಾಗಿ ವರ್ಷವಿಡೀ ಆಚರಿಸೋಣ, ನಾನು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು.
    ಶಾಂತವೇರಿ ಗೋಪಾಲಗೌಡರ ಪುತ್ರ ರಾಮಮನೋಹರ ಶಾಂತವೇರಿ ಮಾತನಾಡಿ, ಗೋಪಾಲಗೌಡರ ಆದರ್ಶ ಮತ್ತು ತತ್ವಗಳನ್ನು ಯುವಜನರಿಗೆ ತಲುಪಿಸುವ ಕೆಲಸ ಆಗಬೇಕಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಬಗ್ಗೆ ಬರೆದಿರುವ ಬಿಡಿ ಲೇಖನಗಳನ್ನು ಮಾಲಿಕೆಗಳನ್ನಾಗಿ ಸಾಮಾಜಿಕ ಜಾಲತಾಣದಲ್ಲಿ ಅಳವಡಿಸಲಾಗುತ್ತಿದೆ, ಆಕಾಶವಾಣಿಯಲ್ಲಿಯೂ ಹತ್ತು ಮಾಲಿಕೆಗಳು ಈಗಾಗಲೇ ಬಿತ್ತರಗೊಂಡಿದೆ. ಗೋಪಾಲಗೌಡರ ಹೋರಾಟ, ಭಾಷಣ ಎಲ್ಲವನ್ನು ಲೇಖಕರು ಕಿರುಹೊತ್ತಿಗೆಯಲ್ಲಿ ತಂದಿದ್ದು, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಮಾಡುವ ಮೂಲಕ ಅವರಿಗೆ ಗೋಪಾಗೌಡರ ವಿಚಾರಧಾರೆಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದೇನೆ. ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕಾಗಿ 1 ಕೋಟಿ ರೂ. ಹಣವನ್ನು ಘೋಷಿಸಿದ್ದು ಇನ್ನು ಬಿಡುಗಡೆಗೊಂಡಿಲ್ಲ, ಶೀಘ್ರ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts