More

    ನಗರಸಭೆಯಿಂದಲೇ ಕರೊನಾ ಪರೀಕ್ಷೆ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಕರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿತರನ್ನು ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಇದೀಗ ನಗರಸಭೆ ಆರೋಗ್ಯ ವಿಭಾಗ ಅಧಿಕಾರಿ, ಸಿಬ್ಬಂದಿಯಿಂದಲೂ ಕೋವಿಡ್ ಟೆಸ್ಟ್ ಮಾಡಿಸಲು ಜಿಲ್ಲಾಡಳಿತ ಮುಂದಾಗಿದೆ.

    ನಗರಸಭೆ ಕಟ್ಟಡದ ಕೊಠಡಿಯೊಂದರಲ್ಲಿ ರ್ಯಾಪಿಡ್ ಆಂಟಿಜನ್ ಟೆಸ್ಟ್ (ತಕ್ಷಣವೇ ಫಲಿತಾಂಶ ನೀಡುವ ಟೆಸ್ಟ್) ಮೂಲಕ ಕೋವಿಡ್-19 ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸೆ. 4ರಿಂದ ಕಾರ್ಯನಿರ್ವಹಣೆ ಆರಂಭವಾಗಲಿದೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನವೊಂದಕ್ಕೆ ನೂರರ ಗಟಿ ದಾಟುತ್ತಿದೆ. ಇದರಲ್ಲಿ ರಾಣೆಬೆನ್ನೂರಿನ ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ. ಸೋಂಕಿತರ ಪ್ರಥಮ, ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚಿ, ಪರೀಕ್ಷಿಸುವುದೇ ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಅಲ್ಲದೆ, ಪ್ರಥಮ, ದ್ವಿತೀಯ ಸಂರ್ಪತರು ಸ್ವಇಚ್ಛೆಯಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಕರೊನಾ ಬಂದು ಆರೋಗ್ಯ ಸಮಸ್ಯೆ ದೀರ್ಘಕ್ಕೆ ಹೋದಾಗ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಅಷ್ಟರಲ್ಲಿ ಕೋವಿಡ್ ಕೊನೇ ಹಂತಕ್ಕೆ ತಲುಪಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪುವ ಸಂದರ್ಭಗಳು ಹೆಚ್ಚಾಗುತ್ತಿವೆ. ಹೀಗಾಗಿ, ಜಿಲ್ಲೆಯಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಿದೆ. ರಾಣೆಬೆನ್ನೂರಲ್ಲಿ ಈವರೆಗೆ 1011 ಜನರಿಗೆ ಸೋಂಕು ದೃಢಪಟ್ಟಿದ್ದು, 29 ಮಂದಿ ಮೃತಪಟ್ಟಿದ್ದಾರೆ.

    ಹೀಗಾಗಿ, ಸೋಂಕಿತರ ಪ್ರಥಮ, ದ್ವಿತೀಯ ಸಂರ್ಪತರನ್ನು ಕೂಡಲೆ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸುವ ಹಾಗೂ ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಲು ನಗರಸಭೆ ಪರಿಸರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಕರೊನಾ ಟೆಸ್ಟ್​ನ ಜವಾಬ್ದಾರಿ ನೀಡಲಾಗಿದೆ.

    ಮನೆ ಮನೆಗೂ ಟೆಸ್ಟ್: ಸದ್ಯ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಕರೊನಾ ಸೋಂಕಿತರ ಪ್ರಥಮ, ದ್ವಿತೀಯ ಸಂರ್ಪತರ ಮನೆಗೆ ತೆರಳಿ ಅವರನ್ನು ನಗರಸಭೆಗೆ ಕರೆತಂದು ರ್ಯಾಪಿಡ್ ಆಂಟಿಜನ್ ಟೆಸ್ಟ್ ಮೂಲಕ ಕರೊನಾ ಪರೀಕ್ಷೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ಮನೆ, ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲೂ ಕರೊನಾ ಟೆಸ್ಟ್ ನಡೆಸಲಿದ್ದಾರೆ. ಇದಕ್ಕಾಗಿ ನಗರದ 35 ವಾರ್ಡ್ ಕಮಿಟಿ, 75 ಬೂತ್ ಮಟ್ಟದ ಕಮಿಟಿ ಸದಸ್ಯರನ್ನು ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಲಾ ಒಂದು ಕಮಿಟಿಯಲ್ಲಿ 10 ಸದಸ್ಯರಿದ್ದು, ಸೋಂಕಿತರ ಪತ್ತೆ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಜನತೆಗೆ ಢವ ಢವ: ನಮಗೆ ಕರೊನಾ ಬಂದರೂ ಏನೂ ಆಗಲ್ಲ. 14 ದಿನ ಕ್ವಾರಂಟೈನ್ ಮಾಡುತ್ತಾರೆ. ಫೀವರ್ ಕೇಂದ್ರದಲ್ಲಿರಬೇಕು. ಆಸ್ಪತ್ರೆಯಲ್ಲಿ ಇರಬೇಕು ಎನ್ನುವ ನಾನಾ ಕಾರಣಕ್ಕೆ ಕೆಲವರು ಕರೊನಾ ಪಾಸಿಟಿವ್ ವ್ಯಕ್ತಿಯ ಪ್ರಥಮ, ದ್ವಿತೀಯ ಸಂರ್ಪತರಿದ್ದರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಅಂಥವರಿಗೆ ಈಗ ಢವ ಢವ ಶುರುವಾಗಿದೆ. ನಗರಸಭೆಯ ವಾರ್ಡ್ ಕಮಿಟಿ, ಬೂತ್ ಕಮಿಟಿ ಸದಸ್ಯರು ಪ್ರತಿ ವಾರ್ಡ್, ಬಡಾವಣೆ, ಓಣಿ, ಎಲ್ಲರ ಮನೆಗಳನ್ನು ಬಲ್ಲವರಾಗಿರುವುದರಿಂದ ಯಾರೂ ರ್ಯಾಪಿಡ್ ಆಂಟಿಜನ್ ಟೆಸ್ಟ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಗರಸಭೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಜಿಲ್ಲಾಧಿಕಾರಿ ನಿರ್ದೇಶನದಂತೆ ಸೆ. 4ರಿಂದ ನಗರಸಭೆ ಪರಿಸರ, ಆರೋಗ್ಯ ವಿಭಾಗದ ಸಿಬ್ಬಂದಿಯಿಂದ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮೂಲಕ ಕರೊನಾ ಸೋಂಕಿತರ ಪತ್ತೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಜನರು ನಗರಸಭೆ ಅಧಿಕಾರಿಗಳ ತಂಡ ಬಂದಾಗ ಸಹಕಾರ ನೀಡಬೇಕು. ಟೆಸ್ಟ್ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದರೆ ಕೂಡಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕರೊನಾ ಹೋಗಲಾಡಿಸಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts