More

    ನಗರದೊಳಗೂ ಸಂಚಾರಕ್ಕೆ ನಿರ್ಬಂಧ

    ಹಾವೇರಿ: ಕರೊನಾ ಭೀತಿ ದಿನದಿಂದ ದಿನಕ್ಕೆ ಜನರಲ್ಲಿ ಹೆಚ್ಚುತ್ತಿದೆ. ಇದುವರೆಗೆ ಹಳ್ಳಿಗಳಲ್ಲಿ ತಮ್ಮೂರಿಗೆ ಹೊರಗಿನವರು ಯಾರೂ ಬರದಂತೆ ತಡೆಯಲು ಬೇಲಿ ಹಾಕಿಕೊಳ್ಳುತ್ತಿದ್ದ ಪರಿ ಇದೀಗ ನಗರಕ್ಕೂ ಕಾಲಿಟ್ಟಿದೆ.

    ಹಳ್ಳಿಗಳಲ್ಲಿ ಜನರು ಕರೊನಾ ವೈರಸ್​ಗೆ ಹೆದರಿ ಗ್ರಾಮಗಳ ದಾರಿಗೆ ಮುಳ್ಳು, ಚಕ್ಕಡಿ ಸೇರಿ ವಿವಿಧ ಸಾಮಗ್ರಿಗಳನ್ನು ಅಡ್ಡಲಾಗಿಟ್ಟು ವಾಹನಗಳ ಪ್ರವೇಶ ನಿರ್ಬಂಧಿಸಿದ್ದರು. ಆದರೆ, ನಗರದಲ್ಲಿ ಅನವಶ್ಯಕ ಸಂಚಾರಕ್ಕೆ ನಿರ್ಬಂಧ ಹೇರಿದ್ದರೂ ಕೆಲವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಓಡಾಡುತ್ತಿದ್ದರು. ಇದಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿತ್ತು. ಆದರೂ, ನಗರದ ವಾರ್ಡ್​ಗಳ ವ್ಯಾಪ್ತಿಯಲ್ಲಿ ಬೈಕ್​ಗಳ ಸಂಚಾರ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದೀಗ ವಾರ್ಡ್​ವಾರು ಜನರೇ ತಮ್ಮ ವಾರ್ಡ್​ಗಳಿಗೆ ಪ್ರವೇಶ ಕಲ್ಪಿಸುವ ಮುಖ್ಯ ರಸ್ತೆಗೆ ಕಟ್ಟಿಗೆ, ಕಬ್ಬಿಣದ ರಾಡ್, ಕಲ್ಲುಗಳನ್ನು ಅಡ್ಡಲಾಗಿಟ್ಟು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಇದರಿಂದ ವಾರ್ಡ್​ಗಳ ಜನರೇ ಹೊರಗೆ ಹೋಗಬೇಕಾದರೆ ಕಾಲ್ನಡಿಗೆ ಅನಿವಾರ್ಯವಾಗಿದೆ.

    ನಾಗೇಂದ್ರನಮಟ್ಟಿ ರಸ್ತೆಯೂ ಬಂದ್: ಹಾವೇರಿಯ ಹೊರವಲಯದಲ್ಲಿರುವ ನಾಗೇಂದ್ರನಮಟ್ಟಿಗೆ ಸಿಂದಗಿ ಮಠದ ಮುಂಭಾಗದಿಂದ ರೈಲ್ವೆ ಕೆಳಸೇತುವೆ ಮೂಲಕ ಸಂಚಾರಕ್ಕೆ ರಸ್ತೆಯಿತ್ತು. ಈ ಕೆಳಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿದ್ದು, ನಾಗೇಂದ್ರನಮಟ್ಟಿಯವರು ಹಾವೇರಿ ನಗರದೊಳಗೆ, ಹಾವೇರಿ ನಗರದಿಂದ ನಾಗೇಂದ್ರನಮಟ್ಟಿಗೆ ಹೋಗಲು ರಸ್ತೆ ಇಲ್ಲದಂತಾಗಿದೆ. ಬಸವೇಶ್ವರ ನಗರ ಇಲ್ಲವೇ, ಗುತ್ತಲ ರಸ್ತೆಯಲ್ಲಿ ಸುತ್ತುಹೊಡೆದು ಹಾವೇರಿಗೆ ಬರುವ ಸ್ಥಿತಿ ನಿರ್ವಣವಾಗಿದೆ.

    ಪೇಪರ್, ತರಕಾರಿಯವರಿಗೂ ತೊಂದರೆ: ನಗರದೊಳಗೆ ರಸ್ತೆಗಳನ್ನು ಬಂದ್ ಮಾಡಿಕೊಳ್ಳುತ್ತಿರುವ ಪರಿಣಾಮ ಅಗತ್ಯ ವಸ್ತುಗಳ ಪೂರೈಕೆಗೆ ಬರುವವರಿಗೂ ತೊಂದರೆಯಾಗುತ್ತಿದೆ. ನಿತ್ಯ ಬೆಳಗ್ಗೆ ಪೇಪರ್ ಹಾಕುವವರು, ಹಾಲು, ತರಕಾರಿ ಮಾರಲು ಬರುವವರು ಸುತ್ತು ಹೊಡೆದು ವಾರ್ಡ್​ಗಳನ್ನು ಪ್ರವೇಶಿಸುವಂತಾಗಿದೆ.

    ಪೊಲೀಸರಿಗೆ ತಪ್ಪಿದ ತೊಂದರೆ: ದಿನನಿತ್ಯ ಮನೆಯಿಂದ ಹೊರಬರಬೇಡಿ ಎಂದು ಬೈಕ್ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಹೇಳಿ ಹೇಳಿ ಸುಸ್ತಾಗಿದ್ದ ಪೊಲೀಸರಿಗೆ ಇಂದು ಸ್ವಲ್ಪ ಕೆಲಸ ಕಮ್ಮಿಯಾಗಿತ್ತು. ಬೈಕ್​ಗಳು ಅವರ ಏರಿಯಾಗಳನ್ನು ದಾಟಿ ಬರಲು ದಾರಿಯಿಲ್ಲದ್ದರಿಂದ ಮುಖ್ಯರಸ್ತೆಗೆ ಬರುವವರ ಸಂಖ್ಯೆ ಕಮ್ಮಿಯಾಗಿತ್ತು. ಬ್ಯಾರಿಕೇಡ್ ನೋಡಿ ತಾವೇ ವಾಹನಗಳನ್ನು ತಿರುಗಿಸಿಕೊಂಡು ಮರಳಿ ಹೋಗುತ್ತಿದ್ದರು.

    ಎಪಿಎಂಸಿಯಲ್ಲಿ ಕಾಯಿಪಲ್ಲೆ ಹರಾಜು: ಶನಿವಾರ ಬೆಳಗ್ಗೆ ಎಪಿಎಂಸಿಯಲ್ಲಿ ರೈತರು ತಂದ ತರಕಾರಿಗಳ ಹರಾಜಿಗೆ ಅನುಮತಿ ಕಲ್ಪಿಸಲಾಗಿತ್ತು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬೇಗನೆ ತರಕಾರಿಗಳನ್ನು ಖರೀದಿಸಿ ವಾರ್ಡ್​ವಾರು ಮಾರಾಟಕ್ಕೆ ಹೋಗುವಂತೆ ಉಪವಿಭಾಗಾಧಿಕಾರಿ ದಿಲೀಪ ಶಶಿ, ತಹಸೀಲ್ದಾರ್ ಶಂಕರ ಜಿ.ಎಸ್., ಸೂಚಿಸಿದರು. ಕಳೆದೊಂದು ವಾರದಿಂದ ಎಪಿಎಂಸಿಯಲ್ಲಿ ತರಕಾರಿ ಹರಾಜು ಸ್ಥಗಿತಗೊಂಡಿತ್ತು. ಇದರಿಂದ ಚಿಲ್ಲರೆ ತರಕಾರಿ ಮಾರಾಟ ಮಾಡುವವರು ಹಾಗೂ ರೈತರಿಗೆ ತೊಂದರೆಯಾಗಿತ್ತು.

    ಕರೊನಾ ಲಕ್ಷಣ, 10 ಜನರ ತಪಾಸಣೆ

    ಶಂಕಿತ ಕರೊನಾ ಸೋಂಕಿನ ಲಕ್ಷಣದ ಆಧಾರದಲ್ಲಿ ಶನಿವಾರ ಜಿಲ್ಲೆಯಲ್ಲಿ 10 ಜನರನ್ನು ತಪಾಸಣೆ ಮಾಡಲಾಗಿದ್ದು, ಎಲ್ಲರನ್ನು ಅವರ ಮನೆಯಲ್ಲಿಯೇ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಯೋಗಾಲಯಕ್ಕೆ ಕಳುಹಿಸಿದ್ದ ಒಬ್ಬರ ರಕ್ತ, ಗಂಟಲು ದ್ರವ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

    ಈವರೆಗೆ ಶಂಕಿತ ಲಕ್ಷಣಗಳುಳ್ಳ ಒಟ್ಟು 174 ಜನರನ್ನು ಅವರ ಮನೆಯಲ್ಲಿಯೇ ನಿಗಾ ವಹಿಸಲಾಗಿದ್ದು, ಇವರಲ್ಲಿ ಇಬ್ಬರ 28 ದಿನಗಳ ಅವಧಿ ಪೂರ್ಣಗೊಂಡಿದ್ದು, ಉಳಿದ 172 ಜನರನ್ನು ಹೋಮ್ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಈವರೆಗೆ ಕಳುಹಿಸಿದ ಆರು ರಕ್ತ ಹಾಗೂ ಗಂಟಲು ದ್ರವ ಪರೀಕ್ಷೆ ವರದಿಯಲ್ಲಿ ಎಲ್ಲವೂ ನೆಗೆಟಿವ್ ಬಂದಿವೆ. ಈವರೆಗೆ ಯಾವ ಪ್ರಕರಣಗಳಲ್ಲಿಯೂ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts