More

    ನಗರದಲ್ಲಿ 27ಕ್ಕೆ ಶ್ರೀ ಜಗನ್ನಾಥ ರಥಯಾತ್ರೆ 

    ದಾವಣಗೆರೆ: ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ದಿಂದ ಜೂ. 27 ರಂದು ದಾವಣಗೆರೆ ನಗರದಲ್ಲಿ ಎರಡನೇ ಬಾರಿಗೆ ಪುರಿ ಕ್ಷೇತ್ರದ ಶ್ರೀ ಜಗನ್ನಾಥ ರಥಯಾತ್ರೆ ಆಯೋಜನೆಯಾಗಿದೆ.
    ದಾವಣಗೆರೆ ಭಾಗದ ಭಕ್ತರ ಹಿತಚಿಂತನೆ ದೃಷ್ಟಿಯಿಂದ ಹಿಂದಿನ ವರ್ಷದಿಂದ ಈ ಯಾತ್ರೆಯನ್ನು ಇಲ್ಲಿ ನಡೆಸಲಾಗುತ್ತಿದೆ ಎಂದು ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರದಾಸ ಪ್ರಭು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಅಂದು ಬೆಳಗ್ಗೆ 7 ಗಂಟೆಗೆ ನಗರದ ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಸ್ರೀ ನರಸಿಂಹ ಯಜ್ಞ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
    ಮಧ್ಯಾಹ್ನ 2 ಗಂಟೆಗೆ ರಥಯಾತ್ರೆಗೆ ಸಮಿತಿ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಚಾಲನೆ ನೀಡುವರು, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಮೇಯರ್ ಎಸ್.ಟಿ.ವೀರೇಶ್ ಇತರರು ಭಾಗವಹಿಸಲಿದ್ದಾರೆ ಎಂದರು.
    ದೇವಸ್ಥಾನ ಆವರಣದಿಂದ ಆರಂಭವಾಗುವ ಯಾತ್ರೆಯು ಚಾಮರಾಜಪೇಟೆ, ಹಾಸಬಾವಿ ವೃತ್ತ, ಚೌಕಿಪೇಟೆ, ವೀರಮದಕರಿನಾಯಕ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಆರ್.ಎಚ್.ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನ ಮೂಲಕ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಲಿದೆ.ಅಂದು ಸಂಜೆ 5 ಗಂಟೆಗೆ ಶ್ರೀ ಜಗನ್ನಾಥ ಮಹಾ ಮಂಗಳಾರತಿ, ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ, ಪ್ರಸಾದವಿದೆ ಎಂದು ತಿಳಿಸಿದರು.
    ರಥೋತ್ಸವಗಳಲ್ಲಿ ಉತ್ಸವ ಮೂರ್ತಿ ಇರಿಸುವುದು ವಾಡಿಕೆ. ಆದರೆ ಸಾವಿರಾರು ವರ್ಷಗಳಿಂದ ನಡೆಯುತ್ತ ಬಂದಿರುವ ಪುರಿ ಜಗನ್ನಾಥ ರಥದಲ್ಲಿ ಮೂಲ ವಿಗ್ರಹವನ್ನು ಇರಿಸಿ ನಡೆಸುವುದು ಒಂದು ವಿಶೇಷ.
    ವಿದೇಶಿಯರ ಆಡಳಿತದಲ್ಲಿ ಜಗನ್ನಾಥ ರಥಯಾತ್ರೆ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕರೊನಾ ಸಂದರ್ಭದಲ್ಲೂ ಈ ಯಾತ್ರೆ ಸುಗಮ ಹಾಗೂ ಶಿಸ್ತುಬದ್ಧವಾಗಿ ನಡೆದಿದ್ದು ರಥ ನಿಂತಿರುವ ನಿದರ್ಶನವಿಲ್ಲ ಎಂದು ಹೇಳಿದರು.
    ಭರತ ಖಂಡದ ಆಚೆಗೆ ಪ್ರಥಮ ಬಾರಿಗೆ ಇಸ್ಕಾನ್‌ನಿಂದ 1967 ರಲ್ಲಿ ಲಾಸ್ ಎಂಜಲೀಸ್‌ನಲ್ಲಿ ಈ ರಥಯಾತ್ರೆ ಆರಂಭವಾಗಿದ್ದು, ಜಗತ್ತಿನ ಎಲ್ಲಾ 7 ಖಂಡಗಳಲ್ಲಿ ಹಾಗೂ ಲಂಡನ್, ನ್ಯೂಯಾರ್ಕ್, ಆಸ್ಟ್ರೇಲಿಯಾ, ಆಫ್ರಿಕಾ ಸೇರಿ ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯಾತ್ರೆ ನಡೆಯುತ್ತ ಬಂದಿದೆ ಎಂದರು.
    ಮಾಜಿ ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ ರಥಯಾತ್ರೆಯಲ್ಲಿ ಆನೆ, ಒಂಟೆ, ಹಸು, ಎತ್ತುಗಳ ಜತೆಗೆ ಜಾನಪದ ಕಲಾ ತಂಡಗಳು, ಸಂಕೀರ್ತನೆ, ಭಜನಾ ತಂಡಗಳು ಭಾಗವಹಿಸಲಿವೆ ಎಂದರು.
    ಮತಾಂತರವನ್ನು ಕಾನೂನು ಒಂದರಿಂದಲೇ ನಿಷೇಧಿಸಲಾಗದು. ಎಲ್ಲರ ಮನಸ್ಸು ಪರಿವರ್ತನೆಯಾಗಿ ಒಗ್ಗೂಡಬೇಕು. ಜಾತಿ-ಮತ ಪಂಥ ಭೇದ ಕೈಬಿಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಸಲ್ ಬದರೀನಾಥ್, ಲಕ್ಷ್ಮೀನಾರಾಯಣ, ಬಿ.ಸತ್ಯನಾರಾಯಣ ಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts