More

    ನಗರದಲ್ಲಿ ಭರದ ಸ್ವಚ್ಛತಾ ಕಾರ್ಯ

    ಧಾರವಾಡ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಲ್ಲದೆ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

    ನಗರದ ಎತ್ತಿನಗುಡ್ಡ ಪ್ರದೇಶದಲ್ಲಿ ಗಟಾರು ಸ್ವಚ್ಛತೆ ಜತೆಗೆ ರಸ್ತೆ ಪಕ್ಕದಲ್ಲಿನ ಕಸ ವಿಲೇವಾರಿ ನಡೆಸಲಾಯಿತು. ಇದಲ್ಲದೆ ಮರಾಠಾ ಕಾಲನಿ, ಕಿಲ್ಲಾ, ಟಿಕಾರೆ ರಸ್ತೆ, ಲೈನ್ ಬಜಾರ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪಡಿಸಿದ್ದಲ್ಲದೆ, ಕಟ್ಟಡ ಕಾರ್ವಿುಕರು ವಾಸವಾಗಿರುವ ಸ್ಥಳಗಳಲ್ಲಿ ಜನತಾ ಕರ್ಫ್ಯೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

    ಸಂಜೆ ಹೊತ್ತಿಗೆ ಜಿಲ್ಲಾ ಆಸ್ಪತ್ರೆ, ಬಸ್ ನಿಲ್ದಾಣ, ಬಿಆರ್​ಟಿಎಸ್, ಹೊಸ ಬಸ್ ನಿಲ್ದಾಣ ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ ಡಿಟಿಡಿ ಪೌಡರ್ ಅನ್ನು ನೀರಿನಲ್ಲಿ ಬೆರೆಸಿ ಇಡೀ ಆವರಣ ಸ್ವಚ್ಛ ಮಾಡುವ ಕೆಲಸ ಮಾಡಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ವಿುಕರಿಗೆ ಮುಂಜಾಗ್ರತಾ ಕ್ರಮಗಳ ತಿಳಿವಳಿಕೆ ಜತೆಗೆ, ಮಾಸ್ಕ್ ಧರಿಸಿ ಕೆಲಸ ಮಾಡುವಂತೆ ತಿಳಿವಳಿಕೆ ನೀಡಲಾಯಿತು.

    ಸಂತೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು, ಜನರು ಹಾಗೂ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಿದರು. ಎಲ್ಲರೂ ಒಂದೇ ಕಡೆ ಸೇರಬೇಡಿ. ವ್ಯಾಪಾರಸ್ಥರು ದೂರ ದೂರ ಕೂತು ವ್ಯಾಪಾರ ನಡೆಸಬೇಕು. ಇದರಿಂದ ಯಾವುದೇ ತೊಂದರೆಗಳು ಎದುರುರಾಗುವುದಿಲ್ಲ ಎಂದು ಜಾಗೃತಿ ಮೂಡಿಸಿದರು.

    ಪಾಲಿಕೆ ಆಯುಕ್ತರ ಭೇಟಿ: ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಇಡೀ ನಗರ ಸುತ್ತು ಹಾಕಿ ಹೋಟೆಲ್​ಗಳು, ನಗರದ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದರು. ಕೆಲ ಹೋಟೆಲ್​ಗಳು ಕಾರ್ಯ ನಿರ್ವಹಿಸುತ್ತಿದ್ದನ್ನು ಗಮನಿಸಿದ ಆಯುಕ್ತರು ಹೋಟೆಲ್ ಮಾಲೀಕರನ್ನು ಭೇಟಿ ಮಾಡಿ ಹೋಟೆಲ್​ಗಳನ್ನು ಬಂದ್ ಮಾಡುವಂತೆ ಮನವಿ ಸಹ ಮಾಡಿದರು. ನಂತರದಲ್ಲಿ ಪಾಲಿಕೆ ಸಿಬ್ಬಂದಿಗೆ ಸಹ ಕೆಲ ಸಲಹೆ, ಸೂಚನೆಗಳನ್ನು ನೀಡಿದ ಆಯುಕ್ತರು, ಸಿಬ್ಬಂದಿ ಆರೋಗ್ಯದ ಮೇಲೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts