More

    ನಗರದಲ್ಲಿ ನಾಳೆ ವಚನ ನೃತ್ಯರೂಪಕ – ‘ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ಅಭಿಯಾನದ 48ನೇ ಪ್ರದರ್ಶನ 

    ದಾವಣಗೆರೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ನಗರದಲ್ಲಿ ಆ.27ರಂದು ‘ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ವಚನ ನೃತ್ಯರೂಪಕದ 48ನೇ ಪ್ರದರ್ಶನ ನೀಡುವರು.
    ಬಸವಣ್ಣನವರ 44 ವಚನಗಳನ್ನು ಹಿಂದಿಗೆ ಅನುವಾದಿಸಲ್ಪಟ್ಟ ಈ ರೂಪಕವನ್ನು ದೇಶದ 14 ರಾಜ್ಯಗಳಲ್ಲಿ ಇದುವರೆಗೆ 47 ಪ್ರದರ್ಶನ ನೀಡಲಾಗಿದೆ. 11000 ಕಿಮೀ ಕ್ರಮಿಸಲಾಗಿದೆ. ನಗರದ ಎಸ್‌ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ 27ರ ಸಂಜೆ 6 ಗಂಟೆಗೆ ಕನ್ನಡ ಭಾಷೆಯ ಪ್ರದರ್ಶನ ನೀಡುವರು ಎಂದು ಉದ್ಯಮಿ ಅಣಬೇರು ರಾಜಣ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ದೇಶದ ಮೊದಲ ವಚನ ಸಂಸ್ಕೃತಿ ಅಭಿಯಾನ ಎಂಬ ಹೆಗ್ಗಳಿಕೆ ಪಡೆದಿರುವ ಈ ನೃತ್ಯರೂಪಕ ಪ್ರದರ್ಶನವು ಜುಲೈ 2ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿತ್ತು. ಈಗಾಗಲೆ ದೆಹಲಿ, ಕೋಲ್ಕತ್ತಾ, ಮುಂಬೈ, ಪೂನಾ ಇತರೆಡೆ ಪ್ರದರ್ಶನಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇದನ್ನು ಮೆಚ್ಚಿ ಶ್ರೀಗಳಿಗೆ ಅಭಿನಂದನಾ ಪತ್ರ ಬರೆದಿದ್ದಾರೆ. ಸೆ. 2ರಂದು ಸಾಣೇಹಳ್ಳಿಯಲ್ಲಿ ನೃತ್ಯರೂಪಕ ಪ್ರದರ್ಶನದ ಸಮಾರೋಪ ನಡೆಯಲಿದೆ ಎಂದರು.
    ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಾಟಕೋತ್ಸವದ ಆಯೋಜನೆ ಹಾಗೂ ಪುಸ್ತಕಗಳ ಪ್ರಕಟಣೆಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡುತ್ತಿದ್ದಾರೆ. ಶಿವಕುಮಾರ ಕಲಾಸಂಘ ಹಾಗೂ ದಾವಣಗೆರೆಯ ಸಮಸ್ತ ಭಕ್ತವೃಂದದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
    ಜಾನಪದ ವಿದ್ವಾಂಸ ಡಾ. ಎಂ.ಜಿ.ಈಶ್ವರಪ ಮಾತನಾಡಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆ.27ರ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಉದ್ಯಮಿಗಳಾದ ಎಸ್.ಎಸ್.ಗಣೇಶ್, ಅಣಬೇರು ರಾಜಣ್ಣ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸಹಕಾರಿ ಧುರೀಣ ಜೆ.ಆರ್.ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ರವಿಚಂದ್ರ ಭಾಗವಹಿಸುವರು ಎಂದು ತಿಳಿಸಿದರು.
    ಸಾಣೇಹಳ್ಳಿ ಶ್ರೀಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಮೂರೂ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ರಾಜ್ಯದ ವಿವಿಧೆಡೆ ನಡೆಸಿದ್ದ ಶ್ರೀಗಳು, ಇದೀಗ ಬಸವಣ್ಣನವರ ಕಲ್ಪನೆಯ ಕಲ್ಯಾಣ ರಾಜ್ಯ ಹಾಗೂ ಸಮ ಸಮಾಜ ಸೃಷ್ಟಿಯ ಸಂದೇಶ ಹೊತ್ತ ವಚನ ನೃತ್ಯರೂಪಕವನ್ನು ಶಿವಕುಮಾರ ಕಲಾ ಸಂಘದ 24 ಕಲಾವಿದರು ಪ್ರದರ್ಶಿಸುತ್ತಿದ್ದಾರೆ.
    ಇದು ಒಂದು ಗಂಟೆ 8 ನಿಮಿಷ ಅವಧಿಯ ರೂಪಕವಾಗಿದೆ. ಶ್ರೀನಿವಾಸ ಜಿ ಕಪ್ಪಣ್ಣ ಕಾರ್ಯಕ್ರಮದ ವಿನ್ಯಾಸ, ಪುತ್ರಿ ಸ್ನೇಹಾ ಕಪ್ಪಣ್ಣ ನೃತ್ಯ ಸಂಯೋಜನೆ ಹಾಗೂ ನಿರ್ದೇಶನ ಮಾಡಿದ್ದಾರೆ. ವೈ.ಡಿ.ಬದಾಮಿ ಬೆಳಕಿನ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದು ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಐಗೂರು ಚಂದ್ರಶೇಖರಪ್ಪ, ಶಸಾಪ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಜಿಪಂ ಮಾಜಿ ಸದಸ್ಯ ಶಾಮನೂರು ಬಸಣ್ಣ, ಕೆ.ಬಿ. ಬಸವಲಿಂಗಪ್ಪ, ಪಲ್ಲಾಗಟ್ಟೆ ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts