More

    ನಕಲಿ ಕಾರ್ಡ್ ತಡೆಗಟ್ಟಲು ಆಗ್ರಹ  -ಸಿಐಟಿಯು ಪ್ರತಿಭಟನೆ

    ದಾವಣಗೆರೆ: ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ತಕ್ಷಣ ಹಣ ವರ್ಗಾವಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
    ನಗರದ ದೇವರಾಜ ಅರಸು ಬಡಾವಣೆಯ ಕಾರ್ಮಿಕರ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
    ಕಾರ್ಮಿಕರ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯಗೊಳಿಸಿರುವ ಆದೇಶ ಹಿಂಪಡೆಯಬೇಕು. ಬೋಗಸ್ ಕಾರ್ಡ್ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಂಜೀವಿನಿ ಜಾರಿಗೊಳಿಸಿ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ಫೆಡರೇಷನ್ ಜಿಲ್ಲಾಧ್ಯಕ್ಷ ಕೆ.ಎಚ್.ಆನಂದರಾಜು ಒತ್ತಾಯಿಸಿದರು.
    ಕಟ್ಟಡ ಕಾರ್ಮಿಕರ ನೋಂದಣಿಗೆ ಹೊಸ ತಂತ್ರಾಂಶ ಆರಂಭಿಸಿ ಸರ್ವರ್ ಸಮಸ್ಯೆ ಹಾಗೂ ಇತರೆ ಇಲಾಖೆಯ ಮೇಲಿನ ಅವಲಂಬನೆ ತಪ್ಪಿಸಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸಲು ಇರುವ ಸಮಸ್ಯೆ ಬಗೆಹರಿಸಬೇಕು. ಅರ್ಜಿಗಳ ವಿಲೇವಾರಿ ವಿಳಂಬ ತಪ್ಪಿಸಲು ಪ್ರತಿ ಅರ್ಜಿಗೂ ಸಂಖ್ಯೆ ನೀಡಿ ಹಿರಿತನದ ಆಧಾರದಲ್ಲಿ ವಿಲೇವಾರಿ ಮಾಡಬೇಕು ಎಂದರು.
    ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ನೀಡಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿ ಮಾಡಬೇಕು ಹಾಗೂ ಸಂಕಷ್ಟದಲ್ಲಿರುವ ಕಾರ್ಮಿಕರ ಸರ್ಕಾರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿದರು.
    ಮುಖಂಡರಾದ ಶ್ರೀನಿವಾಸಮೂರ್ತಿ, ಗಜೇಂದ್ರ, ನೇತ್ರಾವತಿ, ರಕ್ಷಿತಾ,ಜಬೀಉಲ್ಲಾ, ಮುಜೀಬ್, ರತ್ನಮ್ಮ, ಮಂಗಳಮ್ಮ, ಬಾತಿ ಶಿವಪ್ಪ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts