More

    ನಂ.1 ಸ್ಥಾನದಲ್ಲಿ ಹುಲಕೋಟಿ ಗ್ರಾ.ಪಂ

    ಗದಗ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಡೆಸಿದ ‘ಮಿಷನ್ ಅಂತ್ಯೋದಯ-2020’ ರಾಷ್ಟ್ರಮಟ್ಟದ ಸಮೀಕ್ಷೆಯಲ್ಲಿ ಗದಗ ತಾಲೂಕಿನ ಹುಲಕೋಟಿ ಸೇರಿ ಮೂರು ಗ್ರಾಮ ಪಂಚಾಯಿತಿಗಳು ಪ್ರಥಮ ಸ್ಥಾನ ಗಳಿಸಿವೆ. ಸ್ವಚ್ಛ ಹಾಗೂ ಸುಸಜ್ಜಿತ ಗ್ರಾಮ ಎಂದು ಹೆಸರಾಗಿದ್ದ ಹುಲಕೋಟಿ ಅಭಿವೃದ್ಧಿಯಲ್ಲೂ ನಂ.1 ಎನಿಸಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದೆ.

    ಗ್ರಾಮೀಣ ಜನರ ಆದಾಯ ಮತ್ತು ಬದುಕಿನ ಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ದೇಶದ ಗ್ರಾಮ ಪಂಚಾಯಿತಿಗಳು ಹಮ್ಮಿಕೊಂಡಿರುವ ಯೋಜನೆಗಳನ್ನು ಆಧಾರಿಸಿ ರ‍್ಯಾಂಕಿಂಗ್ ನೀಡಲಾಗುತ್ತಿದೆ. ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕುರಿತು ಕಳೆದ ಅ. 1ರಿಂದ ಡಿ. 31ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ ಹುಲಕೋಟಿ ಗ್ರಾಮ ಪಂಚಾಯಿತಿ 100ಕ್ಕೆ 90 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.

    ಗದಗ ತಾಲೂಕಿನ ಹುಲಕೋಟಿ, ತೆಲಂಗಾಣ ರಾಜ್ಯದ ಮೇಡಕ್ ಜಿಲ್ಲೆಯ ಎಲ್ಕುರ್ತಿ ಮತ್ತು ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಪುರ ಗ್ರಾಮ ಪಂಚಾಯಿತಿಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ. 5ನೇ ಮತ್ತು 6ನೇ ಸ್ಥಾನ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಮತ್ತು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯಿತಿಗಳಿಗೆ ಲಭಿಸಿದೆ. 2018 ಮತ್ತು 2019ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹುಲಕೋಟಿ 5ನೇ ಸ್ಥಾನದಲ್ಲಿತ್ತು. 2020ರಲ್ಲಿ ಪ್ರಥಮ ಸ್ಥಾನ ಗಳಿಸಿದ ಗ್ರಾಮ ಪಂಚಾಯಿತಿಗಳ ಪೈಕಿ ಒಂದಾಗಿದೆ.

    ಗ್ರಾಮದಲ್ಲಿದೆ ಇಂಜಿನಿಯರಿಂಗ್ ಕಾಲೇಜ್: ಗದಗ ತಾಲೂಕಿನ ಹುಲಕೋಟಿ ಗಾಮ ಪಂಚಾಯಿತಿ 28 ಜನ ಸದಸ್ಯ ಬಲ ಹೊಂದಿದೆ. ಒಟ್ಟು 11810 ಜನ ಸಂಖ್ಯೆ ಇದೆ. ಇಲ್ಲಿ ಒಂದು ಖಾಸಗಿ ಇಂಜಿನಿಯರಿಂಗ್ ಕಾಲೇಜ್, 1 ಡಿಪ್ಲೋಮಾ ಕಾಲೇಜ್, 1 ಪದವಿ ಕಾಲೇಜ್, 2 ಪದವಿಪೂರ್ವ ಕಾಲೇಜ್​ಗಳು, 2 ಪ್ರೌಢಶಾಲೆ, 3 ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ, 11 ಅಂಗನವಾಡಿಗಳು, ಕೃಷಿಗೆ ಸಂಬಂಧಿಸಿದಂತೆ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಹತ್ತಿ ಗಿರಣಿಗಳು, ಖಾಸಗಿ ಗ್ರಾಮೀಣ ವೈದ್ಯಕೀಯ ಸಂಶೋಧನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

    ಗ್ರಾಮದ ಹೆಗ್ಗಳಿಕೆ: ಒಳಚರಂಡಿ ವ್ಯವಸ್ಥೆ ಹೊಂದಿರುವ ರಾಜ್ಯದ ಮೊಟ್ಟ ಮೊದಲ ಗ್ರಾಮ ಎಂಬ ಹೆಗ್ಗಳಿಕೆಯನ್ನು ಹುಲಕೋಟಿ ಹೊಂದಿದ್ದು, 45 ಕಿಮೀ ಉದ್ದದ ಒಳಚರಂಡಿ ಮತ್ತು 1380 ಮ್ಯಾನ್​ಹೋಲ್ ನಿರ್ವಿುಸಲಾಗಿದೆ. ಜತೆಗೆ ಒಳಚರಂಡಿ ನೀರು ಸಂಸ್ಕರಿಸುವ ಘಟಕ ನಿರ್ವಿುಸಲಾಗಿದ್ದು, ಸಂಸ್ಕರಿತ ನೀರನ್ನು ಹಲವಾರು ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳಿಗೆ ಹರಿಸಲಾಗುತ್ತಿದೆ. ಗ್ರಾಮದಲ್ಲಿ 9 ಎಕರೆ ಪ್ರದೇಶದಲ್ಲಿ ಹೈಟೆಕ್ ಮುಕ್ತಿವನ (ಸ್ಮಶಾನ) ನಿರ್ವಿುಸಲಾಗಿದೆ. ಬಯಲು ಬಹಿರ್ದೆಸೆಯನ್ನು ಸಂಪೂರ್ಣವಾಗಿ ನಿಮೂಲನೆ ಮಾಡಲಾಗಿದೆ. ಗ್ರಾಮದ ಬಹುತೇಕ ಎಲ್ಲ ರಸ್ತೆಗಳು ಡಾಂಬರೀಕರಣವಾಗಿವೆ. ಹುಲಕೋಟಿ ಗ್ರಾಮದಲ್ಲಿ 2700 ಕುಟುಂಬಗಳಿವೆ. ಗ್ರಾಮ ಪಂಚಾಯಿತಿಯಿಂದ ನಿತ್ಯ 10 ದಶಲಕ್ಷ ಲೀಟರ್ ನೀರನ್ನು ಸಾರ್ವಜನಿಕರ ಬಳಕೆಗೆ ಪೂರೈಸಲಾಗುತ್ತದೆ. ಕೆ.ಎಚ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಸ್ಥಾಪಿಸಿರುವ ಶುದ್ಧ ನೀರು ಘಟಕಗಳಿಂದ ಶಾಲಾ-ಕಾಲೇಜ್​ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ಹುಲಕೋಟಿ ಗ್ರಾಮ ಪಂಚಾಯಿತಿಗೆ ನಂ.1 ಸ್ಥಾನ ಬಂದಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

    ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿಯ ಸಚಿವಾಲಯ ನಡೆಸಿದ ಮಿಷನ್ ಅಂತ್ಯೋದಯ ಸಮೀಕ್ಷೆಯಲ್ಲಿ ಗದಗ ತಾಲೂಕಿನ ಹುಲಕೋಟಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಗರಿ ಮೂಡಿದೆ. ಸಚಿವಾಲಯ ನಡೆಸಿದ ಸಮೀಕ್ಷೆಯಲ್ಲಿ ಹುಲಕೋಟಿ 100ಕ್ಕೆ 90 ಅಂಕ ಗಳಿಸಿದೆ.
    |ಡಾ. ಆನಂದ.ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts