More

    ನಂಬಿಕೆ, ನಿಷ್ಠೆ ಮೂಲಕ ಸಂವಿಧಾನಿಕ ಹುದ್ದೆಗೆ ನ್ಯಾಯ

    ಶಿವಮೊಗ್ಗ: ನಂಬಿಕೆ ತಾಯಿಯಿದ್ದಂತೆ. ನಿಷ್ಠೆ ನಾಯಿ ಇದ್ದಂತೆ. ನಂಬಿಕೆ ಮತ್ತು ನಿಷ್ಠೆಯ ಮೂಲಕ ಸಂವಿಧಾನಿಕ ಹುದ್ದೆಗೆ ನ್ಯಾಯ ಕಲ್ಪಿಸಬಹುದು ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ದ ನೂತನ ಸದಸ್ಯ ಡಾ.ರಂಗರಾಜ ವನದುರ್ಗ ಹೇಳಿದರು.

    ಕೆಪಿಎಸ್​ಸಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ವಿದ್ಯಾರ್ಥಿಗಳು ಹಾಗೂ ಆತ್ಮೀಯರು ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿವಂದನೆ ಸ್ವೀಕರಿಸಿ ಮಾತನಾಡಿದ ಅವರು, ಗೋಡೆ ಕಟ್ಟುವುದರಿಂದ ಪ್ರಯೋಜನವಿಲ್ಲ. ಸೇತುವೆ ಕಟ್ಟಬೇಕು. ಆಗ ಮಾತ್ರ ಇಡೀ ನಾಡು ನಮ್ಮ ಕಡೆ ನೋಡುತ್ತದೆ ಎಂದರು.

    ಅವಮಾನಗಳಾದಾಗ ನಾವು ಬೆಳೆಯಲು ಸಾಧ್ಯವಾಗುತ್ತದೆ. ಅವಮಾನವನ್ನು ಮೆಟ್ಟಿಲಾಗಿ ಸ್ವೀಕರಿಸಿದಾಗ ಎತ್ತರಕ್ಕೆ ಹೋಗಬಹುದು. ಎಲ್ಲ ಇದ್ದವರು ಏನೂ ಆಗುವುದಿಲ್ಲ. ಏನೂ ಇಲ್ಲದವರು ಎಲ್ಲ ಆಗುತ್ತಾರೆ ಎಂಬುದಕ್ಕೆ ನಾನೇ ನಿದರ್ಶನ. ಬಡವರ ಮಕ್ಕಳು ನಾವು. ನಮಗೆ ಧಿಮಾಕು ಇರಬಾರದು. ನಮ್ಮನ್ನು ಕಾಪಾಡಿಕೊಳ್ಳುವುದರ ಜತೆಗೆ ಶತ್ರುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಸಣ್ಣ ಸಮಾಜದಿಂದ ಬಂದ ನನಗೆ ಲೋಕಸೇವಾ ಆಯೋಗದಂತಹ ದೊಡ್ಡ ಹಾಗೂ ಅತ್ಯಂತ ಜವಾಬ್ದಾರಿಯುತ ಹುದ್ದೆ ಸರ್ಕಾರ ನೀಡಿದ್ದು ಇದಕ್ಕೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.

    ನಾವು ಸಮಾಜಕ್ಕೆ ನೀಡುವ ಸೇವೆಯ ಆಧಾರದಲ್ಲಿ ಸಮಾಜ ನಮ್ಮನ್ನು ಸ್ವೀಕರಿಸುತ್ತದೆ. ಇಲ್ಲದಿದ್ದರೆ ಬೇಡವಾದ ಫೋಟೋಗಳನ್ನು ಮೊಬೈಲ್​ನಿಂದ ಡಿಲಿಟ್ ಮಾಡಿದಂತೆ ಸಮಾಜ ನಮ್ಮನ್ನು ಡಿಲಿಟ್ ಮಾಡುತ್ತದೆ. ಅದಕ್ಕೆ ಆಸ್ಪದ ನೀಡದಂತೆ ಕೆಲಸ ಮಾಡಬೇಕೆಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.

    ಅಧಿಕಾರ, ಆಸ್ತಿ, ಅಂತಸ್ತು, ಸೌಂದರ್ಯ, ಹಣ ಯಾವುದೂ ಶಾಶ್ವತವಲ್ಲ. ಇವು ಶಾಶ್ವತವೆಂದು ಭಾವಿಸಿದರೆ ಮದವೇರುತ್ತದೆ. ಆ ಮದದ ಅಮಲಿನಲ್ಲಿ ಏನು ಮಾಡುತ್ತೇವೆಂಬುದೇ ಗೊತ್ತಾಗುವುದಿಲ್ಲ. ಜವಾಬ್ದಾರಿಯಿದ್ದಾಗ ಇಂತಹ ಮದಕ್ಕೆ ಒಳಗಾಗದೆ ಸಾಮಾಜಿಕ ನ್ಯಾಯದಡಿ ಕೆಲಸ ಮಾಡುವುದು ಅತೀ ಮುಖ್ಯವಾಗಿದೆ ಎಂದರು.

    ಕೃತಕತೆ ಇಲ್ಲದ ವ್ಯಕ್ತಿತ್ವ ಡಾ. ರಂಗರಾಜ: ಆತ್ಮೀಯತೆ, ಮುಗ್ಧತೆ, ಅಂತಃಕರಣ, ಪ್ರೀತಿ ವಿಶ್ವಾಸದ ಸರಳ, ಸಹಜತೆಯ, ನಿಷ್ಠೂರ ಬಂಡಾಯದ, ಮಾನವೀಯತೆಯ, ಅರಿವಿನ ವಿಸ್ತಾರದ, ಕೃತಕತೆ ಇಲ್ಲದ ವ್ಯಕ್ತಿತ್ವ ಡಾ.ರಂಗರಾಜ ಎಂದು ಪ್ರಾಧ್ಯಾಪಕ ಪ್ರೊ.ಎಚ್.ಎಸ್.ನಾಗಭೂಷಣ ಹೇಳಿದರು. ಈಗ ಲೋಕಸೇವಾ ಆಯೋಗದ ಸದಸ್ಯ ಸ್ಥಾನ ಸುಲಭವಲ್ಲ. ಒತ್ತಡ, ಆಮಿಷ, ಮುಲಾಜು, ಭ್ರಷ್ಟಾಚಾರ ಎಲ್ಲವೂ ಅಲ್ಲಿದೆ. ಹೀಗಾಗಿ ಅದು ಮುಳ್ಳಿನ ಕುರ್ಚಿ. ಅದರಲ್ಲಿ ನಡೆಯುವುದು ಅತ್ಯಂತ ಕಷ್ಟವೇ ಸರಿ. ಆದರೆ ರಂಗರಾಜ ವನದುರ್ಗ ಅವರು ಆಮಿಷಕ್ಕೆ ಒಳಗಾಗುವುದಿಲ್ಲ ಎಂಬ ನಂಬಿಕೆ ಅವರ ಸಾವಿರಾರು ವಿದ್ಯಾರ್ಥಿಗಳಲ್ಲಿದೆ. ದಮನಿತರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಅವರು ನ್ಯಾಯ ಕೊಡುವಂತಾಗಲಿ ಎಂದರು.

    ಪ್ರಾಧ್ಯಾಪಕ ಪ್ರೊ. ಎಚ್.ಎಸ್.ನಾಗಭೂಷಣ ಅಭಿನಂದನಾ ನುಡಿಗಳನ್ನಾಡಿದರು. ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ ರಂಗರಾಜ ವನದುರ್ಗ ಅವರ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ. ಎಚ್.ಎಸ್.ಭೋಜ್ಯಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎಂ.ಮುತ್ತಯ್ಯ, ಉಪನ್ಯಾಸಕರಾದ ಡಾ. ಎಸ್.ಮಾರುತಿ, ರಾಜಪ್ಪ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts