More

    ನಂಬರ್‌ 1 ಪಟ್ಟದಿಂದ ಜಾರಿ 21ನೇ ಸ್ಥಾನಕ್ಕೆ

    ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಬಾರಿ ಶೇ 96.80 ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದ ಕೋಟೆನಾಡು ಈ ಬಾರಿ ಶೇ 72.85 ಸರಾಸರಿಯೊಂದಿಗೆ 21ನೇ ಸ್ಥಾನಕ್ಕೆ ಕುಸಿದಿದೆ.

    ರಾಜ್ಯಕ್ಕೆ 2015ರಲ್ಲಿ 19ನೇ ಸ್ಥಾನದಲ್ಲಿದ್ದ ಚಿತ್ರದುರ್ಗ ಜಿಲ್ಲೆಯನ್ನು ಶಿಕ್ಷಣ ಇಲಾಖೆ ಹಂತ-ಹಂತವಾಗಿ ಮೇಲೆತ್ತುವ ಪ್ರಯತ್ನದಿಂದಾಗಿ 2020, 21 ಎರಡು ಅವಧಿಯಲ್ಲೂ 5ನೇ, ಶೇ 94.3 ಫಲಿತಾಂಶದೊಂದಿಗೆ 2022ರಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು. ಈಗ ಒಮ್ಮೆಗೆ 20 ಸ್ಥಾನಗಳಿಂದ ಕೆಳಗಿಳಿದಿದೆ.

    2022-23ನೇ ಸಾಲಿನಲ್ಲಿ 21,995 ವಿದ್ಯಾರ್ಥಿಗಳು ಹಾಜರಾಗಿ 21,300 ಮಂದಿ ಉತ್ತೀರ್ಣರಾಗಿದ್ದರು. ಪ್ರಸಕ್ತ ಬಾರಿ ಪರೀಕ್ಷೆಗೆ ಹಾಜರಾದ 22,275 ವಿದ್ಯಾರ್ಥಿಗಳ ಪೈಕಿ 16,227 ತೇರ್ಗಡೆ ಹೊಂದಿದ್ದಾರೆ. ಈ ಪೈಕಿ ಅನುತ್ತೀರ್ಣರಾದ 6,048 ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಜೂ. 7ರಿಂದ 14ರವರೆಗೂ ನಡೆಯಲಿರುವ ಎಸ್ಸೆಸ್ಸೆಲ್ಸಿ-2 ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವ ಗುರಿ ಇಲಾಖೆ ಹೊಂದಿದೆ.

    ನಾಲ್ವರು ಜಿಲ್ಲೆಗೆ ಪ್ರಥಮ: ವಿದ್ಯಾರ್ಥಿಗಳಾದ ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಸಿ.ಐ.ಅಭಯ್, ಹಿರಿಯೂರು ತಾಲೂಕಿನ ರಾಷ್ಟ್ರೀಯ ಅಕಾಡೆಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂ.ಎಸ್.ಹಿರನ್ಮಯಿ, ಟಿ.ತನುಶ್ರೀ, ಮೊಳಕಾಲ್ಮೂರಿನ ಸರ್.ಎಂ.ವಿ. ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂ.ಅಸ್ರಾ ಮಹೀನ್ 625ಕ್ಕೆ ತಲಾ 620 ಅಂಕಪಡೆಯುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ನಾಲ್ವರು ಪ್ರಥಮ ಸ್ಥಾನ ಗಳಿಸಿದ್ದು, ಕೀರ್ತಿ ತಂದಿದ್ದಾರೆ.

    ಜಿ.ಎಸ್.ಭುವನೇಶ್ವರಿ, ಎಸ್.ಪೂಜಿತಾ, ಎಸ್.ಪ್ರೀತಿ, ಸಿ.ಕೆ.ನಂದನ್ ತಲಾ 618, ಎಚ್.ಎಂ.ಭಾವನಾ, ಕೆ.ಆರ್.ಅಭಿನವ್, ಆರ್.ಕೆ.ಸೃಜನ್ ಸಾಗರ್, ಆರ್.ನವ್ಯಾಶ್ರೀ, ಎಸ್.ಸಂಜಯ್, ಜಿ.ಪಿ.ಮನೋಜ್ಞಾ ತಲಾ 616 ಅಂಕಗಳಿಸಿ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಹಾಜರಾದ 15,927 ವಿದ್ಯಾರ್ಥಿಗಳಲ್ಲಿ 11,900 ಮಂದಿ ಉತ್ತೀರ್ಣರಾಗಿ ಶೇ 74.71 ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ. ಅದೇ ರೀತಿ ನಗರ ಪ್ರದೇಶದಲ್ಲಿ 6,348 ವಿದ್ಯಾರ್ಥಿಗಳಲ್ಲಿ 4,327 ಮಂದಿ ತೇರ್ಗಡೆ ಹೊಂದಿ ಶೇ 68.16 ಫಲಿತಾಂಶ ದಾಖಲಿಸಿದ್ದಾರೆ.

    ಪ್ರವರ್ಗ ‘3’ಬಿ ಮೇಲುಗೈ: ಸಾಮಾಜಿಕ ಗುಂಪು, ಒಟ್ಟು ಹಾಜರಾದ ವಿದ್ಯಾರ್ಥಿಗಳು, ಉತ್ತೀರ್ಣ, ಶೇಕಡವಾರು ಫಲಿತಾಂಶದಲ್ಲಿ ಪ್ರವರ್ಗ ‘3’ಬಿ ವಿಭಾಗದ ವಿದ್ಯಾರ್ಥಿಗಳು ಶೇ 84.97 ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ. ಎಸ್ಸಿ ವಿಭಾಗ-5,852-4,048-69.17, ಎಸ್ಟಿ ವಿಭಾಗ-4,338-2,962-68.28, ಪ್ರವರ್ಗ ‘3’ಬಿ-2,641-2,244-84.97, ಇತರೆ-188-158-72.85.

    ಜಿಲ್ಲೆಯಲ್ಲಿನ ಈ ಬಾರಿಯ ಫಲಿತಾಂಶ ಅವಲೋಕಿಸಿದರೆ ನಗರ, ಪಟ್ಟಣ ಭಾಗದ ಜೂನಿಯರ್ ಕಾಲೇಜುಗಳ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಫಲಿತಾಂಶ ಕುಸಿದಿದೆ. ಅಲ್ಲದೆ, ಚಿತ್ರದುರ್ಗ ಮೆದೇಹಳ್ಳಿಯ ಸಿದ್ದೇಶ್ವರ ಶಾಲೆಯ 9 ವಿದ್ಯಾರ್ಥಿಗಳು ಅನುತ್ತೀರ್ಣರಾಗಿ ಸೊನ್ನೆ ಫಲಿತಾಂಶ ದಾಖಲಾಗಿದೆ.

    ಬಾಲಕಿಯರೇ ಮೇಲುಗೈ: ಪರೀಕ್ಷೆಗೆ ಹಾಜರಾದ 11,107 ಬಾಲಕರ ಪೈಕಿ 7,207 ಮಂದಿ ಉತ್ತೀರ್ಣರಾಗಿದ್ದು, ಶೇ 64.89 ಫಲಿತಾಂಶ ಲಭಿಸಿದೆ. ಅದೇ ರೀತಿ 11,168 ಬಾಲಕಿಯರಲ್ಲಿ 9,020 ಮಂದಿ ತೇರ್ಗಡೆ ಹೊಂದಿ ಶೇ 80.77ರಷ್ಟು ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ.

    ಹಿಂದಿನ ವರ್ಷ ನಡೆಸಿದ ವಿಶೇಷ ತರಬೇತಿ, ಕಾರ್ಯ ಚಟುವಟಿಕೆಯನ್ನೇ ಮುಂದುವರೆಸಿದ್ದೇವೆ. ಆದರೂ ಫಲಿತಾಂಶ ವ್ಯತಿರಿಕ್ತವಾಗಿದೆ. ಕೋವಿಡ್ ವೇಳೆ ಶಾಲೆಗಳು ಸಮರ್ಪಕವಾಗಿ ನಡೆಯಲಿಲ್ಲ. ಈ ಅವಧಿಯಲ್ಲಿ ಪ್ರೌಢಶಾಲೆಗೆ ಪಾದಾರ್ಪಣೆ ಮಾಡಿದ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲು ಸ್ವಲ್ಪ ಕಷ್ಟಕರವಾಗಿರಬಹುದು ಎಂದು ಪ್ರಭಾರ ಡಿಡಿಪಿಐ ಎಂ.ನಾಸಿರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.

    ಹೊಳಲ್ಕೆರೆ ಶೇ 81.21 ಫಲಿತಾಂಶ: ತಾಲೂಕುವಾರು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಖ್ಯೆ, ಒಟ್ಟು ಹಾಜರಾತಿ, ಉತ್ತೀರ್ಣ, ಶೇಕಡವಾರು ಫಲಿತಾಂಶ ಕ್ರಮವಾಗಿ ಇಂತಿದೆ. ಹೊಳಲ್ಕೆರೆ-1,210-1,344-2,554-2,074-81.21, ಹಿರಿಯೂರು-1,690-1,823-3,513-2,636-75.04, ಚಳ್ಳಕೆರೆ-2,539-2,389-4,928-3,685-74.78, ಮೊಳಕಾಲ್ಮುರು-1,076-1,017-2,093-1,505-71.91, ಹೊಸದುರ್ಗ-1,522-1,544-3,066-2,148-70.06, ಚಿತ್ರದುರ್ಗ-3,070-3,051-6,121-4,179-68.27.

    ಅನುದಾನ ರಹಿತ ಶೇ 83.11: ಜಿಲ್ಲೆಯಲ್ಲಿ ಶಾಲಾವಾರು, ಹಾಜರಾತಿ, ಉತ್ತೀರ್ಣ, ಶೇಕಡವಾರು, ಒಟ್ಟು ಫಲಿತಾಂಶ ಈ ಕೆಳಗಿನಂತಿದೆ. ಸರ್ಕಾರಿ-8,377-6,174-73.70, ಅನುದಾನಿತ-8,860-5,866-66.21, ಅನುದಾನರಹಿತ-5,038-4,187-83.11, ಒಟ್ಟು-22,275-16,227-72.85.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts