More

    ಧಾರವಾಡ ಜಿಲ್ಲೆಯಲ್ಲಿ 34 ಶಂಕಿತರು ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಯಾವುದೇ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಜನರು ಕೊಂಚ ನಿರಾಳರಾಗಿದ್ದರು. ಆದರೆ ಶುಕ್ರವಾರ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗುತ್ತಿದ್ದಂತೆ ಜನರು ಮತ್ತೆ ಆತಂಕಕ್ಕೀಡಾಗುವಂತಾಗಿದೆ.

    ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 34 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಗುರುವಾರ ಇದ್ದ 3180 ಶಂಕಿತರ ಸಂಖ್ಯೆ ಶುಕ್ರವಾರ 3236 ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 2680 ಶಂಕಿತ ವ್ಯಕ್ತಿಗಳ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 2410 ಜನರ ವರದಿ ನೆಗೆಟಿವ್ ಬಂದಿವೆ. 10 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 8 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 262 ವರದಿಗಳು ಬರಬೇಕಿದೆ.

    ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 3236 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 2442 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡಗಳಲ್ಲಿ 8 ಜನ ದಾಖಲಾಗಿದ್ದಾರೆ. 81 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 705 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಡ್ರೋನ್ ಚಿತ್ರೀಕರಣಕ್ಕೆ ಸೂಚನೆ

    ಧಾರವಾಡ: ಕರೊನಾ ವೈರಸ್ ಹರಡುವಿಕೆ ಪ್ರಮಾಣ ಕಡಿಮೆ ಮಾಡಲು ಎಲ್ಲ ಸಮಯದಲ್ಲೂ ಸಾರ್ವಜನಿಕರ ಅಂತರ ನಿರ್ವಹಣೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ತಡೆಗಟ್ಟಬೇಕು. ವಿಶೇಷವಾಗಿ ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳು ಹಾಗೂ ಹಾಲಿನ ಬೂತ್​ಗಳು ಸೇರಿ ಆಹಾರ ಪದಾರ್ಥಗಳ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳ ದೈನಂದಿನ ವಿಡಿಯೋಗ್ರಾಫಿ ಅಥವಾ ಡ್ರೋನ್ ಚಿತ್ರೀಕರಣ ಪ್ರಾರಂಭಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳೇ ಮುಖ್ಯ. ಜನರು ಅಗತ್ಯ ವಸ್ತುಗಳನ್ನು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ನಿಗಾ ವಹಿಸಲು ಪ್ರತಿದಿನ ವಿಡಿಯೋ, ಸಿಸಿ ಟಿವಿ ಕ್ಯಾಮೆರಾ ಅಥವಾ ಡ್ರೋನ್ ಮೂಲಕ ಚಿತ್ರೀಕರಣ ಮಾಡಿ ನಿರಂತರ ನಿಗಾವಹಿಸಬೇಕು. ಹು-ಧಾ ಮಹಾನಗರ ಪಾಲಿಕೆ ಆಯುಕ್ತರು, ಎಪಿಎಂಸಿ ಕಾರ್ಯದರ್ಶಿ, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ಉಪ ನಿರ್ದೇಶಕರು ಈ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಲು ಸೂಚಿಸಿದರು.

    ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಇತರರು ಇದ್ದರು.

    ಕರೊನಾ ತಿಳಿವಳಿಕೆ ಪತ್ರ ವಿತರಣೆ

    ಹುಬ್ಬಳ್ಳಿ: ಇಲ್ಲಿಯ ನವನಗರದ ಹೆಸ್ಕಾಂ ವಲಯ ಕಚೇರಿ ಉಪವಿಭಾಗ 4ರಲ್ಲಿ ರೆಡ್​ಕ್ರಾಸ್ ಸಂಸ್ಥೆ ವತಿಯಿಂದ ಕರೊನಾ ಸೋಂಕು ಕುರಿತು ತಿಳಿವಳಿಕೆ ಪತ್ರ ನೀಡಲಾಯಿತು.

    ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಶ್ವನಾಥ ಶಿರಹಟ್ಟಿಮಠ ಅವರಿಗೆ ರೆಡ್ ಕ್ರಾಸ್ ವತಿಯಿಂದ ಡಾ. ವಿ.ಡಿ. ಕರ್ಪರಮಠ ಅವರು ಸೋಂಕಿನ ಬಗ್ಗೆ ತಿಳಿವಳಿಕೆ ನೀಡುವ ಕರಪತ್ರಗಳನ್ನು ನೀಡಿದರು.

    ಈ ಸೋಂಕು ಇಡೀ ಜಗತ್ತನ್ನು ಕಾಮೋಡದಂತೆ ಕವಿದಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಹಾಗೂ ಪರಿಣಿತರ ಸಲಹೆ ಪ್ರಕಾರ ಪರಸ್ಪರ ಜನರು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧಾರಣೆ, ವೈಯಕ್ತಿಕ ಸ್ವಚ್ಛತೆ ಹಾಗೂ ಮನೆಯಲ್ಲೇ ಇರುವದನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಲಾಯಿತು.

    ನಿವೃತ್ತ ಅಧಿಕ್ಷಕ ಇಂಜಿನಿಯರ್ ನಾಗರಾಜ, ಪ್ರೊ. ಕೊಪ್ಪಳ ಇತರರು ಉಪಸ್ಥಿತರಿದ್ದರು.

    ಬಾಂಡ್ ಮೇಲೆ 865 ವಾಹನ ಬಿಡುಗಡೆ

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಶುಕ್ರವಾರ ವಾಹನಗಳ ಮಾಲೀಕರಿಂದ 100 ರೂ. ಬಾಂಡ್ ಪಡೆದು 865 ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಜಪ್ತಿಯಾದ ಬೈಕ್, ಕಾರು, ಆಟೋ ಬಿಡಿಸಿಕೊಳ್ಳಲು ವಾಹನಗಳ ಮಾಲೀಕರು ಠಾಣೆಗಳ ಮುಂದೆ ಜಮಾಯಿಸಿದ್ದರು. 100 ರೂ. ಬಾಂಡ್ ಪಡೆದು ಪೊಲೀಸರು ಷರತ್ತಿನ ಮೇಲೆ ವಾಹನ ಬಿಡುಗಡೆ ಮಾಡಿದರು.

    ಬಾಂಡ್ ಪಡೆದ ವಾಹನಗಳ ಮಾಲೀಕರು ನ್ಯಾಯಾಲಯ ಆರಂಭವಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರು ಸೂಚಿಸುವ ದಂಡ ಕಟ್ಟಬೇಕು. ಈ ಕುರಿತು ಬಾಂಡ್​ನಲ್ಲಿ ಉಲ್ಲೇಖಿಸಲಾಗಿದೆ. ಶನಿವಾರವೂ ಬಾಂಡ್ ನೀಡಿ ವಾಹನ ಬಿಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ತಿಳಿಸಿದ್ದಾರೆ.

    ಸ್ವಂತ ಊರಿಗೆ ತೆರಳಲು ಅವಕಾಶ

    ಧಾರವಾಡ: ಲಾಕ್​ಡೌನ್ ಜಾರಿಗೊಳಿಸಿದ ಪರಿಣಾಮ ಅವರ ಕೆಲಸದ ಸ್ಥಳಗಳಲ್ಲೇ ಸ್ಥಗಿತವಾಗಿರುವ ಹೊರ ರಾಜ್ಯಗಳ ವಲಸೆ ಕಾರ್ವಿುಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ. ಹೊರ ರಾಜ್ಯಗಳಿಗೆ ತೆರಳಲು ಬಯಸುವವರ ನೋಂದಣಿ ಕಾರ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಹತ್ತಿರದ ಗ್ರಾಮ ಪಂಚಾಯಿತಿ, ತಹಸೀಲ್ದಾರ ಕಚೇರಿ, ಪೊಲೀಸ್ ಠಾಣೆ, ಮಹಾನಗರ ಪಾಲಿಕೆ ವಲಯ ಕಚೇರಿಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖುದ್ದಾಗಿ ಅಥವಾ ಸಹಾಯವಾಣಿ, ವಾಟ್ಸಪ್ ಸಂಖ್ಯೆಗಳ ಮೂಲಕ ಕೂಡಲೇ ಹೆಸರು, ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.

    ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಸಂಖ್ಯೆ 1077, ಮೊಬೈಲ್ ಸಂಖ್ಯೆಗಳಾದ 9449847646/ 9449847641 ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹೊರ ರಾಜ್ಯಗಳಿಗೆ ತೆರಳ ಬಯಸುವವರಿಗೆ ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಲಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಆಯಾ ಪ್ರಯಾಣಿಕರೇ ಭರಿಸಬೇಕು. ಕಡಿಮೆ ಸಂಖ್ಯೆ ಪ್ರಯಾಣಿಕರಿದ್ದರೆ ಪ್ರತ್ಯೇಕ ಕಾರು, ಮಿನಿ ವಾಹನಗಳ ಮೂಲಕ ಹೋಗಲು ಅನುಮತಿ ನೀಡಲಾಗುವುದು.

    ಸರ್ಕಾರದ ಮಾರ್ಗಸೂಚಿಗಳು ಬಂದ ಕೂಡಲೇ ಹೊರ ರಾಜ್ಯದ ವಲಸೆ ಕಾರ್ವಿುಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts