More

    ದ್ಯಾಮವ್ವದೇವಿ ಮೆರವಣಿಗೆ ಸಂಭ್ರಮ

    ಹಾವೇರಿ: 115 ವರ್ಷಗಳ ಬಳಿಕ ನಡೆಯುತ್ತಿರುವ ನಗರದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ಸಂಜೆ ಶ್ರೀದ್ಯಾಮವ್ವ ದೇವಿಯ ಮೆರವಣಿಗೆ ಸಹಸ್ರಾರು ಭಕ್ತರ ಜಯಘೊಷ, ವಿವಿಧ ವಾದ್ಯವೈಭವದೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿತು.

    ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 4ಗಂಟೆಗೆ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯುದ್ದಕ್ಕೂ ಭಕ್ತರು ದೇವಿಗೆ ಆರತಿ, ಪುಷ್ಪಾರ್ಚನೆ ಸಲ್ಲಿಸಿದರು. ಚಂಡೆಮೇಳ, ಕಂಸಾಳೆ, ಮಹಿಳಾ ಡೊಳ್ಳು, ಕೀಲುಕುದುರೆ, ಗೊಂಬೆ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು. ಕತ್ತಲಾಗುತ್ತಿದ್ದಂತೆ ಮೆರವಣಿಗೆಯುದ್ದಕ್ಕೂ ಬಣ್ಣಬಣ್ಣದ ಪಟಾಕಿಯ ಸದ್ದು ಆರ್ಭಟಿಸಿತು.

    ಮೆರವಣಿಗೆಯು ದ್ಯಾಮವ್ವನ ಗುಡಿ ಓಣಿಯಿಂದ ನಾಯ್ಕರ ಚಾಳ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ಓಣಿ, ಹಳೇ ಊರಿನ ಓಣಿ, ಶ್ರೀರಾಮ ದೇವರ ಗುಡಿ ಮೂಲಕ ರಾತ್ರಿ ಗಾಂಧಿ ವೃತ್ತ ತಲುಪಿತು. ನಂತರ ಗಾಂಧಿ ಸರ್ಕಲ್​ನಿಂದ ಕಲ್ಲು ಮಂಟಪ ರಸ್ತೆ, ಬಸ್ತಿ ಓಣಿ, ತರಕಾರಿ ಮಾರ್ಕೆಟ್, ಚೌಡೇಶ್ವರಿ ಸರ್ಕಲ್, ಅಂಬೇಡ್ಕರ ಸರ್ಕಲ್, ಸುಭಾಸ ಸರ್ಕಲ್, ಮೇಲಿನ ಪೇಟೆ, ಹಳೆಚಾವಡಿ ಮೂಲಕ ಬುಧವಾರ ನಸುಕಿನ ಜಾವ ಎಂಜಿ ರಸ್ತೆಯಲ್ಲಿರುವ ಚೌತಮನಿ ಕಟ್ಟೆಗೆ ತಲುಪಿ ಅಲ್ಲಿ ನಿರ್ವಿುಸಿರುವ ಭವ್ಯ ಮಂಟಪದಲ್ಲಿ ದೇವಿ ಪ್ರತಿಷ್ಠಾಪನೆಗೊಳ್ಳುವಳು.

    ಮೆರವಣಿಗೆಯಲ್ಲಿ ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ದೇವಸ್ಥಾನ ಸಮಿತಿಯ ಬಸವರಾಜ ಹೂಗಾರ, ಅಶೋಕ ಮುದಗಲ್ಲ, ಗಂಗಾಧರ ಹೂಗಾರ, ಎಸ್​ಎಫ್​ಎನ್ ಗಾಜಿಗೌಡರ, ಸಂಜೀವಕುಮಾರ ನೀರಲಗಿ, ಎಂ.ಎಸ್. ಕೋರಿಶೆಟ್ಟರ, ಸಚಿನ್ ಡಂಬಳ, ಉಡಚಪ್ಪ ಮಾಳಗಿ, ರಮೇಶ ಆನವಟ್ಟಿ, ಹನುಮಂತ ನಾಯ್ಕಬದಾಮಿ, ಕಿರಣ ಕೊಳ್ಳಿ, ಬಸಪ್ಪ ಮುಗದೂರ, ಅರ್ಚಕರಾದ ದೊಡ್ಡ ದ್ಯಾಮಣ್ಣ ಬಡಿಗೇರ, ಕೊಟೆಪ್ಪ ಕಮ್ಮಾರ, ಪ್ರದೀಪ ದೊಡ್ಡಗೌಡರ, ಬೆಟ್ಟಪ್ಪ ಕುಳೇನೂರ, ಪರಮೇಶ್ವರ ಪಾಟೀಲ ಇತರರಿದ್ದರು.

    ಮುಂಜಾಗ್ರತೆ ಹಾಗೂ ಶಾಂತಿ ಸುವ್ಯವಸ್ಥೆಗಾಗಿ ದ್ಯಾಮವ್ವ ದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ದೇವಿ ಮೆರವಣಿಗೆ ಸಂಚರಿಸುವ ಮಾರ್ಗದಲ್ಲಿ 63 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಪೂಜಾ ವಿಧಿವಿಧಾನ ವೀಕ್ಷಣೆಗೆ ಚೌತಮನಿ ಕಟ್ಟೆ ಹೊರಗೆ ಎರಡು ಬೃಹತ್ ಎಲ್​ಇಡಿ ಟಿವಿ ಪರದೆ ವ್ಯವಸ್ಥೆ ಮಾಡಲಾಗಿದೆ. ಶತಮಾನದ ಬಳಿಕ ಜಾತ್ರೆ ನಡೆಯುತ್ತಿರುವುದರಿಂದ ನಗರದಲ್ಲೆಲ್ಲ ಸಂಭ್ರಮ ಮನೆಮಾಡಿದೆ.

    ಎರಡು ದಿನ ದರ್ಶನ: ಗುರುವಾರ ಸಂಜೆ 4 ಗಂಟೆವರೆಗೆ ದೇವಿ ದರ್ಶನ ಪಡೆಯಬಹುದು. ದರ್ಶನಕ್ಕಾಗಿ ಭಕ್ತರು ಬಸ್ತಿ ಓಣಿಯ ಮುಖಾಂತರ ಚೌತಮನಿ ಕಟ್ಟೆ ಸ್ಥಳಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಶಿವಬಸವ ಕಲ್ಯಾಣ ಮಂಟಪದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿ ಕಾರ್ಯದರ್ಶಿ ಅಶೋಕ ಮುದಗಲ್ಲ ತಿಳಿಸಿದ್ದಾರೆ.

    ಜಾತ್ರಾ ಕಾರ್ಯಕ್ರಮಗಳು: ಫೆ. 26ರಂದು ಬೆಳಗ್ಗೆ 5ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣುಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿಕೆ ಸಮರ್ಪಣೆ. ಫೆ. 27ರಂದು ದೇವಿಗೆ ಸೇವೆ ಮುಂದುವರಿಯಲಿದ್ದು ಸಂಜೆ 5ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಅಂದು ಸಂಜೆ ಹುಕ್ಕೇರಿಮಠ ರಸ್ತೆಯಲ್ಲಿ ಕುಂಕುಮ, ಭಂಡಾರದ ಓಕಳಿ ಸಂಭ್ರಮ ನಡೆಯಲಿದೆ. ಫೆ. 28ರಂದು ಬೆಳಗ್ಗೆ 10ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸುವುದು, ಶ್ರೀದೇವಿಗೆ ಕ್ಷೀರಾಭಿಷೇಕ, ಚಂಡಿಪಾರಾಯಣ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts