More

    ದೊಮ್ಮಸಂದ್ರದಲ್ಲಿ ಎತ್ತ ನೋಡಿದರೂ ಕಸ, ಸ್ವಚ್ಛಗೊಳಿಸುವವರು ಇಲ್ಲದೆ ರೋಗ-ರುಜಿನ ಭೀತಿ

    ಚಕ್ರವರ್ತಿ ವಿ. ಸರ್ಜಾಪುರ
    ಪಟ್ಟಣ ಸಮೀಪದ ದೊಮ್ಮಸಂದ್ರದಲ್ಲಿ ಎತ್ತ ನೋಡಿದರೂ ಕಸದ ರಾಶಿ. ಇದನ್ನು ತೆರವುಗೊಳಿಸುವಂತೆ ಆಗ್ರಹಿಸಬೇಕಾದ ಗ್ರಾಮಸ್ಥರೇ ರಸ್ತೆ ಬದಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.

    ಧರ್ಮಸಾಗರ ಶಾಲೆಯ ಮುಂದೆ ಐದಾರು ತಿಂಗಳಿನಿಂದ ಜನರು ಕಸ ಸುರಿಯುತ್ತಿದ್ದಾರೆ. ಸಮೀಪವೇ ಗ್ರಾಪಂ ಕಚೇರಿಯೂ ಇದೆ. ಪದವಿಪೂರ್ವ ಕಾಲೇಜು ಹಾಗೂ ಅದರ ಪಕ್ಕದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದನ್ನೂ ತೆರವುಗೊಳಿಸಿಲ್ಲ ಎಂದು ದೂರಿದ್ದಾರೆ.

    ಸಂತೆಗೆ ಬಂದವರಿಂದ ಗಲೀಜು: ಗ್ರಾಮದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ವ್ಯಾಪಾರಿಗಳು, ಗ್ರಾಹಕರು ಸೇರಿ ಐದಾರು ಸಾವಿರ ಜನರು ಇಲ್ಲಿ ನೆರೆಯುತ್ತಾರೆ. ವ್ಯಾಪಾರಿಗಳು, ಅಲ್ಲಿಯೇ ಕಸ ಬಿಸಾಡಿ ಹೋಗುತ್ತಾರೆ. ಜತೆಗೆ ಕಸದ ಬಳಿಯೇ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಇದರಿಂದ ದುರ್ವಾಸನೆಯೂ ಹಬ್ಬಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
    ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮದ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಮಾಡಲು ವಿಲರಾಗಿದ್ದಾರೆ. ಇದರಿಂದಾಗಿ ಗ್ರಾಮದೆಲ್ಲೆಡೆ ಕಸದ ರಾಶಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ದೊಮ್ಮಸಂದ್ರದಲ್ಲಿ ಕಸ ವಿಲೇವಾರಿಗೆ ಜಾಗದ ಕೊರತೆಯಿದೆ. ನಿತ್ಯ 1ರಿಂದ 2 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಪ್ರತಿದಿನ ಬೆಳಗ್ಗೆ ಮನೆ ಬಾಗಿಲಿಗೆ ಕಸದ ವಾಹನ ತೆರಳಿದರೂ, ಹೆಚ್ಚಿನವರು ಕಸ ಕೊಡುವುದಿಲ್ಲ. ವಲಸಿಗ ಕಾರ್ಮಿಕರು ಬೆಳ್ಳಗೆಯೇ ಕೆಲಸಗಳಿಗೆ ತೆರಳುವುದು ಇದಕ್ಕೆ ಕಾರಣ. ಕಸದ ವಾಹನದವರಿಗೆ ಕಸ ಕೊಡುವಂತೆ ಸಾಕಷ್ಟು ಬಾರಿ ಹೇಳಿದರೂ, ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ, ಅವರಿಗೆ ದಂಡ ವಿಧಿಸಲಾಗುವುದು.
    ಕವಿತಾ ಕವಿರಾಜು, ದೊಮ್ಮಸಂದ್ರ ಗ್ರಾಪಂ ಅಧ್ಯಕ್ಷೆ

    ಈಗಷ್ಟೇ ಮಳೆಗಾಲ ಆರಂಭವಾಗಿದೆ. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದರೆ, ಮಳೆ ನೀರು ತ್ಯಾಜ್ಯದ ಮೇಲೆ ಬಿದ್ದು ಇನ್ನಷ್ಟು ಗಬ್ಬು ನಾರುತ್ತದೆ. ಜತೆಗೆ ಸೊಳ್ಳೆಗಳು, ಕೀಟಾಣುಗಳು ನೊಣಗಳು ಉತ್ಪತ್ತಿಯಾಗಿ ಅನೇಕ ರೋಗ-ರುಜಿನ ಹರಡುತ್ತವೆ. ಆದ್ದರಿಂದ, ಕಸವನ್ನು ತಕ್ಷಣವೇ ಎತ್ತಿಸಬೇಕು.
    ಡಾ.ಜಯಭಾರತಿ, ದೊಮ್ಮಸಂದ್ರ ಪಿಎಚ್‌ಸಿ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts