More

    ದೊಡ್ಡಕೆರೆ ಸೇರುತ್ತಿರುವ ಕಲುಷಿತ ನೀರು

    ಸಕಲೇಶಪುರ: ಪಟ್ಟಣದ ದೊಡ್ಡಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ನೀರು ಮುಟ್ಟಿದರೆ ಚರ್ಮರೋಗ ಗ್ಯಾರಂಟಿ ಎಂಬ ಸ್ಥಿತಿ ತಲುಪಿದೆ.

    ಲಕ್ಷ್ಮೀಪುರಂ ಬಡಾವಣೆಯಲ್ಲಿನ ಹೊಸ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿಂತೆ ಇರುವ ಸುಮಾರು ನಾಲ್ಕು ಎಕೆರೆ ಪ್ರದೇಶದಲ್ಲಿರುವ ದೊಡ್ಡಕೆರೆಯನ್ನು ದಶಕದ ಹಿಂದೆ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇಡೀ ಬಡಾವಣೆಯ ಕೊಳಚೆ ನೀರು ಕೆರೆ ಸೇರುತ್ತಿದೆ.

    ಇದಲ್ಲದೆ ಬಸ್ ನಿಲ್ದಾಣದಲ್ಲಿನ ಶೌಚತೊಟ್ಟಿ ಕೆರೆಗೆ ಹೊಂದಿಕೊಂಡಿದ್ದು ನಿತ್ಯ ಶೌಚ ಕೆರೆ ನೀರನ್ನು ಸೇರುತಿರುವ ಪರಿಣಾಮ ಕೆರೆಯ ನೀರು ಮುಟ್ಟಿದರೆ ಚರ್ಮರೋಗ ಗ್ಯಾರಂಟಿ ಎಂಬ ಸ್ಥಿತಿ ತಲುಪಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣದ ಶೌಚನೀರು ಕೆರೆಗೆ ಹರಿಯದಂತೆ ತಡೆಯುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಉಪಯೋಗವಾಗಿಲ್ಲ. ಈ ಸಂಬಂಧ ಜನರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕಾಲು ತೊಳೆಯಲೂ ಆಗದ ಸ್ಥಿತಿ
    ಲಕ್ಷ್ಮಿಪುರಂ ಬಡಾವಣೆ ಹಾಗೂ ಚಂಪಕನಗರದಿಂದ ಹರಿದು ಬರುವ ಕೊಳಚೆ ನೀರು ಕೆರೆ ಸೇರುತ್ತಿದೆ. ಪರಿಣಾಮ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಕೆರೆಯಲ್ಲಿ ಕಾಲು ತೊಳೆಯಲೂ ಅಸಹ್ಯಪಡುವಂತ ಸ್ಥಿತಿ ನಿರ್ಮಾಣವಾಗಿದೆ.
    ಕ್ಯಾಂಟೀನ್ ಮಂಜುನಾಥ್ ಸ್ಥಳೀಯ ನಿವಾಸಿ

    ದೂರು ನೀಡಿದ್ದರೂ ಪ್ರಯೋಜನವಿಲ್ಲ
    ಸೋರುತ್ತಿರುವ ಶೌಚ ಟ್ಯಾಂಕ್ ಅನ್ನು ದುರಸ್ತಿಪಡಿಸಿ ಅಥಾವ ಬೇರೆಡೆ ನಿರ್ಮಿಸಿ ಎಂದು ಹಲವು ಬಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆ ನೀರು ಶುದ್ಧಗೊಳ್ಳಬೇಕಾದರೆ ಶೌಚ ನೀರು ಕೆರೆ ಸೇರದಂತೆ ತಡೆಯುವ ಅಗತ್ಯವಿದೆ.
    ಆಶಿಕ್ ಲಕ್ಷ್ಮಿಪುರಂ

    ಈಗ ಹೋರಾಟ ಅನಿವಾರ್ಯ
    ಕೆರೆ ಸಮೀಪ ಅಯ್ಯಪ್ಪಸ್ವಾಮಿ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ತೆರಳುವ ಮುನ್ನ ಕಾಲು ತೊಳೆಯಲು ಹಿಂದು-ಮುಂದು ನೋಡುವಂತ ಪರಿಸ್ಥಿತಿ ಇದೆ. ದೇವಸ್ಥಾನ ಸಮೀಪದಲ್ಲಿನ ಕೊಳಗಳು ಪವಿತ್ರ ಎನ್ನುತ್ತಾರೆ. ಆದರೆ ಈ ಕೆರೆ ಇದಕ್ಕೆ ಅಪವಾದವಾಗಿದೆ. ಕೊಳಚೆ ನೀರು ಕೆರೆ ಸೇರುವುದನ್ನು ತಡೆಯಲು ಹೋರಾಟ ನಡೆಸುವ ಅನಿವಾರ್ಯತೆ ಇದೆ.
    ಮಂಜುನಾಥ್ ಚಂಪಕನಗರ

    ಒಳ್ಳೆಯ ಮಾತಿಗೆ ಬಗ್ಗದ ಅಧಿಕಾರಿ ವರ್ಗ
    ಸಾರಿಗೆ ಅಧಿಕಾರಿಗಳು ಒಳ್ಳೆಯ ಮಾತಿಗೆ ಬಗ್ಗುವುದಿಲ್ಲ. ಆದ್ದರಿಂದ ಸಾರಿಗೆ ಕಚೇರಿ ಮುಂಬಾಗ ಬೃಹತ್ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ. ಕೆರೆಗೆ ಶೌಚನೀರು ಸೇರುತ್ತಿದ್ದರೂ ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ನಮ್ಮ ಧಿಕ್ಕಾರ.
    ದೀಪಕ್ ಲಕ್ಷ್ಮಿಪುರಂ

    ಪ್ರವಾಸಿ ಸ್ಥಳವಾಗುವ ಅವಕಾಶ
    ಕೊಳಚೆ ನೀರು ಕೆರೆ ಸೇರುವುದನ್ನು ತಪ್ಪಿಸಿದಲ್ಲಿ ದೊಡ್ಡಕೆರೆ ಒಂದು ಪ್ರವಾಸಿ ಸ್ಥಳವಾಗಿ ರೂಪುಗೊಳ್ಳುವ ಅವಕಾಶವಿದೆ. ಪುರಸಭೆ ಅಧಿಕಾರಿಗಳು ಕೊಳಚೆ ನೀರು ಕೆರೆ ಸೇರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳ ಬೇಕು.
    ಗುರುಮೂರ್ತಿ ಗಾಣದಹೊಳೆ

    ಸಾಂಕ್ರಾಮಿಕ ರೋಗದ ಭೀತಿ
    ಬೇಸಿಗೆ ಕಾಲವಾಗಿರುವುದರಿಂದ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು, ಕೊಳಚೆ ನೀರಿನ ಪ್ರಮಾಣ ಹೆಚ್ಚಿದೆ. ಸೊಳ್ಳೆಗಳು ಹೆಚ್ಚಿದ್ದು ಕೆರೆಯ ಅಸುಪಾಸಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭಯ ಕಾಡುತ್ತಿದೆ.
    ವಿನೋದ್ ಕೆರೆಯ ಅಚ್ಚುಕಟ್ಟು ಪ್ರದೇಶದ ನಿವಾಸಿ

    ಹೂಳು ತೆಗೆಯುವ ಕೆಲಸವಾಗಲಿ
    ಕೆರೆ ಅಭಿವೃದ್ಧಿಗೊಂಡು ದಶಕಗಳು ಕಳೆಯುತ್ತಿದ್ದು, ಮತ್ತೊಮ್ಮೆ ಕೆರೆಯಲ್ಲಿನ ಹೂಳು ತೆಗೆಯುವ ಮೂಲಕ ಅಭಿವೃದ್ಧಿಗೊಳಿಸ ಬೇಕಿದೆ. ಅಲ್ಲದೆ ಪ್ರವಾಸಿ ಸ್ಥಳವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಪುರಸಭೆ ಮುಂದಾಗ ಬೇಕು.
    ಕೀರ್ತಿ ಚಂಪಕನಗರ.

    ವಾಕಿಂಗ್ ಪ್ರದೇಶವಾಗಿ ಮಾರ್ಪಾಡು
    ಕೆರೆ ದಂಡೆ ಈಗ ಪಟ್ಟಣ ಜನರ ವಾಕಿಂಗ್ ಪ್ರದೇಶವಾಗಿದೆ. ಆದರೆ, ಹೊಸಬಸ್ ನಿಲ್ದಾಣ ಭಾಗದಲ್ಲಿ ಶೌಚದ ವಾಸನೆ ರಾಚುವುದರಿಂದ ಮೂಗು ಹಿಡಿದು ವಾಕಿಂಗ್ ಮಾಡುವ ಸ್ಥಿತಿ ಇದೆ. ಅಲ್ಲದೆ ಸೊಳ್ಳೆಗಳ ಹಾವಳಿಯನ್ನು ತಪ್ಪಿಸಲು ಪುರಸಭೆ ಕನಿಷ್ಠ ಕ್ರಮ ಜರುಗಿಸುವ ಅಗತ್ಯವಿದೆ.
    ಸುಬ್ಬಣ್ಣ ರೈ ಲಕ್ಷ್ಮಿಪುರಂ

    ಮೀನು ಹಿಡಿಯುವುದನ್ನು ತಡೆಯಲಿ
    ಕೊಳಚೆಯಿಂದಾಗಿ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಕೆಲವು ವ್ಯಕ್ತಿಗಳು ಈ ಕಲುಷಿತ ನೀರಿನಲ್ಲಿರುವ ಮೀನು ಹಿಡಿದು ತಿನ್ನುವುದರ ಜತೆಗೆ ಮಾರಾಟ ಮಾಡುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮೀನು ಹಿಡಿಯುವುದನ್ನು ತಡೆಯವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಗಮನಹರಿಸಬೇಕು.
    ಶಿವಕುಮಾರ್ ಲಕ್ಷ್ಮಿಪುರಂ ನಿವಾಸಿ

    ಕುರುಚಲು ಕಾಡನ್ನು ಸ್ವಚ್ಛ ಮಾಡಲಿ
    ಕೆರೆ ದಂಡೆ ಸುತ್ತಮುತ್ತ ಕುರುಚಲು ಕಾಡು ದೊಡ್ಡದಾಗಿ ಬೆಳೆದಿದ್ದು, ನಾಗರ ಹಾವು ಸೇರಿದಂತೆ ಹಲವು ವಿಷಕಾರಿ ಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಜನರು ವಾಕಿಂಗ್ ಮಾಡಲು ಭಯಪಡುವಂತಹ ಸ್ಥಿತಿ ಇದ್ದು, ಕುರುಚಲು ಕಾಡನ್ನು ತೆರವು ಮಾಡುವ ಅಗತ್ಯವಿದೆ.
    ಯಶೋದಾ ಲಕ್ಷ್ಮಿಪುರಂ ನಿವಾಸಿ

    ಸ್ಥಳೀಯರ ಸಹಕಾರ ಅಗತ್ಯ
    ಕೆರೆ ದಂಡೆಯನ್ನು ಪುರಸಭೆ ಸಿಬ್ಬಂದಿ ಕಾಲ ಕಾಲಕ್ಕೆ ಸ್ವಚ್ಛ ಮಾಡುತ್ತಿದ್ದಾರೆ. ಕೆರೆಯ ಅಸುಪಾಸಿನ ಆಸ್ತಿಗಳನ್ನು ಸಂಬಂಧಪಟ್ಟವರು ಸ್ವಚ್ಛಗೊಳಿಸಿದರೆ ಕೆರೆಯ ಸುತ್ತಲಿನ ಪರಿಸರ ಸ್ವಚ್ಛವಾಗಿರಲಿದೆ.
    ಪ್ರಜ್ವಲ್ ಪುರಸಭೆ ಸದಸ್ಯ

    ಸೂಚಿಸಿದ್ದರೂ ಅಧಿಕಾರಿಗಳ ನಿರ್ಲಕ್ಷೃ
    ಶೌಚತೊಟ್ಟಿ ದುರಸ್ತಿ ಮಾಡುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ತೊರುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು.
    ಎಚ್.ಕೆ. ಕುಮಾರಸ್ವಾಮಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts