More

    ದೇಸಿ ತಳಿ ಹಸು ಸಾಕಣೆಯಿಂದ ಹೆಚ್ಚಿನ ಲಾಭ, ಬಮುಲ್ ನಿರ್ದೇಶಕ ಭಾಸ್ಕರ್ ಅಭಿಮತ ದೇಗನಹಳ್ಳಿಯಲ್ಲಿ ಹಾಲು ಸಂಗ್ರಹಕ್ಕೆ ಚಾಲನೆ

    ನೆಲಮಂಗಲ: ಕಡಿಮೆ ಖರ್ಚು ಮತ್ತು ಅಧಿಕ ಲಾಭ ಪಡೆಯಲು ದೇಸಿ ತಳಿ ಹಸುಗಳು ಸಹಕಾರಿ ಎಂದು ಬಮುಲ್ ನಿರ್ದೇಶಕ ಜಿ.ಆರ್. ಭಾಸ್ಕರ್ ತಿಳಿಸಿದರು.

    ತಾಲೂಕಿನ ದೇಗನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ದೇಸಿ ತಳಿ ಹಸುಗಳ ಹಾಲು ಸಂಗ್ರಹಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

    ಹೈನುಗಾರಿಕೆ ಗ್ರಾಮೀಣ ಭಾಗದ ಜನರ ಮುಖ್ಯ ಕಸುಬು. ಇದರಿಂದ ಜನರು ಅರ್ಥಿಕವಾಗಿ ಸಬಲರಾಗಿದ್ದಾರೆ. ದೇಸಿ ಹಸುವಿನ ಹಾಲಿನಲ್ಲಿ ಅತಿಹೆಚ್ಚು ಪೌಷ್ಟಿಕಾಂಶ ಗುಣಗಳಿವೆ. ನಗರ ಪ್ರದೇಶದಲ್ಲಿ ದೇಸಿ ಹಸುವಿನ ಹಾಲಿಗೆ ಬಹಳ ಬೇಡಿಕೆ ಇದೆ. ಹಾಗಾಗಿ ಈ ತಳಿ ಹಸುಗಳ ಹಾಲನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

    ತಾಲೂಕಿನಾದ್ಯಂತ 350 ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 1.5 ಸಾವಿರ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ನಗರ ಪ್ರದೇಶದಲ್ಲಿ ನಾಲ್ಕೈದು ಸಾವಿರ ಲೀಟರ್ ಹಾಲಿಗೆ ಬೇಡಿಕೆ ಇದೆ. ಆ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಪಂಜಾಬ್‌ನ ಸಾಯಿವಾಲ್ ತಳಿಯ 65ಕ್ಕೂ ಹೆಚ್ಚು ಹಸುಗಳನ್ನು ತಾಲೂಕಿನಾದ್ಯಂತ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರ, ಬಮುಲ್ ಹಾಗೂ ಕೆಎಂಎಫ್ ವತಿಯಿಂದ ಕಡಿಮೆ ಬೆಲೆಯಲ್ಲಿ ಕೊಡಲಾಗುತ್ತಿದೆ ಎಂದು ವಿವರಿಸಿದರು.

    ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಅತಿಹೆಚ್ಚು ದೇಸಿ ತಳಿ ಹಸುಗಳ ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದಕ್ಕೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಬಮುಲ್ ಟ್ರಸ್ಟ್ ಉಪವ್ಯವಸ್ಥಾಪಕ ಎ.ಆರ್. ಗೋಪಾಲ್‌ಗೌಡ ಮಾತನಾಡಿ, ಮೊದಲನೇ ಮಾರ್ಗವಾಗಿ 1 ವರ್ಷದ ಹಿಂದೆ ತಾಲೂಕಿನ ಗುರುವನಹಳ್ಳಿ, ಸೋಲದೇವಹಳ್ಳಿ ಸೇರಿ 8 ಹಾಲು ಉತ್ಪಾದಕ ಸಹಕಾರ ಸಂಘದಿಂದ ನಿತ್ಯ 150ಕ್ಕೂ ಹೆಚ್ಚು ದೇಸಿ ತಳಿ ಹಸುಗಳ ಹಾಲು ಶೇಖರಣೆಯಾಗುತ್ತಿದೆ. 2ನೇ ಮಾರ್ಗವಾಗಿ ದೇಗನಹಳ್ಳಿ ಕಾಚನಹಳ್ಳಿ ಸೇರಿ 10 ಸಂಘಗಳಿಂದ 250ಕ್ಕೂ ಹೆಚ್ಚು ಲೀಟರ್ ಶೇಖರಣೆಯಾಗುತ್ತಿದೆ. ರೈತರು ಅತಿಹೆಚ್ಚು ದೇಸಿ ಹಸುವಿನ ಹಾಲು ಉತ್ಪಾದನೆಗೆ ಒತ್ತು ನೀಡಿದರೆ ಆರ್ಥಿಕವಾಗಿ ಮತಷ್ಟು ಸಬಲರಾಗಬಹುದು ಎಂದರು.

    ಬಮುಲ್ ವತಿಯಿಂದ ದೇಸಿ ಹಸುವಿನ ಪ್ರತಿ ಲೀಟರ್ ಹಾಲಿಗೆ 50 ರೂ. ಹಾಗೂ ಸರ್ಕಾರದಿಂದ 5 ರೂ. ಸಹಾಯಧನ ಸೇರಿ ಒಟ್ಟು 55 ರೂ. ಕೊಡಲಾಗುತ್ತಿದೆ. ಸಾಯಿವಾಲ್ ಹಸು ಖರೀದಿಸಲು ಸರ್ಕಾರ ಹಾಗೂ ಒಕ್ಕೂಟದಿಂದ ಶೇ.50 ವೆಚ್ಚ ನೀಡಲಾಗುತ್ತಿದೆ ಎಂದರು.

    ಬಮುಲ್ ಟ್ರಸ್ಟ್ ವಿಸ್ತರಣಾಧಿಕಾರಿ ಎಚ್.ಎನ್. ಶ್ರುತಿ, ಗ್ರಾಮದ ಡೇರಿ ಅಧ್ಯಕ್ಷ ಡಿ.ಎಚ್. ಧನಂಜಯ್ಯ, ಉಪಾಧ್ಯಕ್ಷ ಸಿದ್ಧಗಂಗಯ್ಯ, ನಿರ್ದೇಶಕ ಮುದ್ದಮಾರಯ್ಯ, ಕಾರ್ಯನಿರ್ವಾಹಕ ಎಂ. ಹನುಮಬೈರೇಗೌಡ, ಗುರುವನಹಳ್ಳಿ ಸಂಘದ ಕಾರ್ಯನಿರ್ವಾಹಕ ರಾಜಗೋಪಾಲ್, ಕಾಚನಹಳ್ಳಿ ಸಂಘದ ಕಾರ್ಯನಿರ್ವಾಹಕ ಕೆ. ವಸಂತ್‌ಕುಮಾರ್, ಮುಖಂಡ ಸುರೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts