More

    ದೇಶಪಾಂಡೆ ಫೌಂಡೇಷನ್​ನಿಂದ 2ದಿನ ಅಭಿವೃದ್ಧಿ ಸಂವಾದ, ಫೆ. 4ರಂದು ದಿಗ್ಗಜರ ಜತೆ ಸಂಜೆ

    ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬಿವಿಬಿ ಕ್ಯಾಂಪಸ್​ನಲ್ಲಿರುವ ದೇಶಪಾಂಡೆ ಫೌಂಡೇಷನ್ ವತಿಯಿಂದ 14ನೇ ಆವೃತ್ತಿಯ ಅಭಿವೃದ್ಧಿ ಸಂವಾದವನ್ನು ಫೆಬ್ರವರಿ 3 ಹಾಗೂ 4ರಂದು ಆಯೋಜಿಸಲಾಗಿದೆ ಎಂದು ಫೌಂಡೇಷನ್ ಸಹ ಸಂಸ್ಥಾಪಕ ಗುರುರಾಜ ದೇಶಪಾಂಡೆ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ವಲಯಗಳಲ್ಲಿ ಸುಸ್ಥಿರ ಅಭಿವೃದ್ಧಿ ಹಾಗೂ ಪರಿಹಾರಕ್ಕಾಗಿ ಇರುವ ಸಮಾನ ಅವಕಾಶಗಳನ್ನು ಪರಸ್ಪರ ಹಂಚಿಕೊಳ್ಳುವ ಜನರನ್ನು ಒಂದೆಡೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾಮಾಜಿಕ ವಾಣಿಜ್ಯೋದ್ಯಮಿಗಳು, ಸಂಘ- ಸಂಸ್ಥೆಗಳ ಮುಖ್ಯಸ್ಥರು, ಸರ್ಕಾರಿ ಅಧಿಕಾರಿಗಳು, ತರಬೇತಿದಾರರು, ಹೂಡಿಕೆದಾರರು ಭಾಗವಹಿಸುವ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಇದಾಗಿದೆ. ‘ಟೆಕ್ನಾಲಜಿ ಫಾರ್ ಇಂಪ್ಯಾಕ್ಟ್ ಹಾಗೂ ಸ್ಕೇಲ್’ ವಿಷಯದ ಮೇಲೆ ಸಂವಾದ ನಡೆಯಲಿದೆ. ಸುಮಾರು 400 ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

    ತಾಂತ್ರಿಕ ಕೌಶಲಗಳ ಬಳಕೆ ಕುರಿತು ಈಗಾಗಲೇ ಫೌಂಡೇಷನ್ ತರಬೇತಿ ನೀಡುತ್ತಿದೆ. ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗುತ್ತಿದೆ. ಬೇರೆ ಬೇರೆ ಕಂಪನಿಗಳ ಅವಶ್ಯಕತೆಗೆ ತಕ್ಕಂತೆ ತರಬೇತಿ ನೀಡಿ ಕಳಿಸಲಾಗುತ್ತಿದೆ. ಜತೆಗೆ ರೈತರಿಗೆ ಅಗತ್ಯವಾದ ಕೆರೆ ನಿರ್ವಣಕ್ಕೆ ಸಹಯೋಗ ನೀಡಲಾಗಿದ್ದು, ಲಕ್ಷ ಕೃಷಿ ಹೊಂಡ ನಿರ್ವಿುಸುವ ಗುರಿ ಹೊಂದಿದ್ದೇವೆ ಎಂದರು.

    ಸಾಮಾಜಿಕ ಸವಾಲುಗಳ ಪರಿಹಾರಕ್ಕೆ ತಂತ್ರಜ್ಞಾನ ಮುಖ್ಯ ಸಾಧನವಾಗಿದ್ದು, ಈ ವಿಷಯದ ಮೇಲೆ ಚರ್ಚೆಗಳು ನಡೆಯಲಿವೆ. ಫೆ. 3ರಂದು ದೇಶಪಾಂಡೆ ಫೌಂಡೇಷನ್​ನ ಘಟಕಗಳಿಗೆ ಕ್ಷೇತ್ರ ಭೇಟಿ ಇರಲಿದೆ. ಫೆ. 4ರಂದು ಸಂವಾದ ನಡೆಯಲಿದೆ.

    ಕಾರ್ಯಕ್ರಮ ವಿವರ: ವಿದ್ಯಾನಗರದ ದೇಶಪಾಂಡೆ ಫೌಂಡೇಷನ್ ಕಟ್ಟಡದಲ್ಲಿ ಫೆ. 4ರಂದು ಬೆಳಗ್ಗೆ 9ಕ್ಕೆ ಸಂವಾದ ಉದ್ಘಾಟನೆ ನಡೆಯಲಿದ್ದು, ನಂತರದಲ್ಲಿ ಐದು ಗೋಷ್ಠಿಗಳು ನಡೆಯಲಿವೆ.

    ಗ್ರಾಮೀಣ ಭಾರತದ ಅಭಿವೃದ್ಧಿಗೆ ಬೇಕಾದ ತಂತ್ರಜ್ಞಾನ, ಕಡಿಮೆ ವೆಚ್ಚದಲ್ಲಿ ಹೆಚ್ಚು ವೇಗ ಹಾಗೂ ಉತ್ತಮ ಸೇವೆ ನೀಡುವ ತಾಂತ್ರಿಕತೆಯ ಕಡೆಗೆ ಗಮನ ಹರಿಸಲಾಗುತ್ತದೆ. ಇನ್ಪೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಐಮೆರಿಟ್​ನ ಸಿಇಒ ಡಾ. ರಾಧಾ ಬಸು, ಖೋಸ್ಲಾ ಲ್ಯಾಬ್ಸ್ ಸಿಇಒ ಶ್ರೀಕಾಂತ ನಾದಮುನಿ, ದೇಶಪಾಂಡೆ ಫೌಂಡೇಷನ್ ಗ್ಲೋಬಲ್ ಸಿಟಿಒ ಶುಭೋ ಬಿಸ್ವಾಸ್ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು. ಹೊಸ ಯುಗದ ಉದ್ಯಮಶೀಲತೆ, ಟೆಕ್ ಸ್ಟಾರ್ಟ್​ಅಪ್ ಮುಂತಾದ ವಿಷಯಗಳು ಚರ್ಚೆಯಾಗಲಿವೆ ಎಂದರು.

    ಸಂಜೆ 7ಕ್ಕೆ ಗೋಕುಲರಸ್ತೆ ಇನ್ಪೋಸಿಸ್ ಕ್ಯಾಂಪಸ್​ನಲ್ಲಿ ದಿಗ್ಗಜರ ಜತೆ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಎನ್.ಆರ್. ನಾರಾಯಣಮೂರ್ತಿ, ಗುರುರಾಜ ದೇಶಪಾಂಡೆ ಭಾಗವಹಿಸುವರು. ಪ್ರತಿನಿಧಿಗಳು, ಭಾಷಣಕಾರರು, ಸಾರ್ವಜನಿಕರು ಸೇರಿ 2500 ಜನ ಸೇರುವ ನಿರೀಕ್ಷೆ ಇದೆ.

    ಫೌಂಡೇಷನ್ ಸದಸ್ಯ ರಾಜ ಮೆಲವಲ್, ಸಿಒಒ ಸುನೀಲ ಚಕ್ರವರ್ತಿ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts