More

    ದೇಶದ್ರೋಹಿ ಸಂಘಟನೆಗಳ ನಿಷೇಧಿಸಿ

    ಬೆಳಗಾವಿ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಪರೋಕ್ಷವಾಗಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಹತ್ಯೆಯ ಹಿಂದೆ ಯಾವುದೇ ಪ್ರಭಾವಿಗಳಿದ್ದರೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಎಸ್‌ಡಿಪಿಐ, ಪಿಎಫ್‌ಐ, ಸಿಎಫ್‌ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಅಲ್ಲದೆ, ಈ ಸಂಘಟನೆಗಳಿಗೆ ಆರ್ಥಿಕ ಸಹಾಯ ಕಲ್ಪಿಸುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಪದೇಪದೇ ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿರುವುದು ನೋವಿನ ಸಂಗತಿ. ಹಿಂದುತ್ವ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳಿಂದ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು. ಕೇವಲ ಭರವಸೆ ಕೊಟ್ಟು ಪ್ರಕರಣ ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಂತಹ ಸಂದರ್ಭದಲ್ಲಿ ಕಠಿಣ ಕ್ರಮ ಕೊಳ್ಳುತ್ತಾರೆ. ಆದರೆ, ಕರ್ನಾಟಕದ ಮುಖ್ಯಮಂತ್ರಿಗೆ ಅದೇ ನಿಲುವು ತೆಗೆದುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಮುಂಬರುವ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸರ್ಕಾರ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ರುದ್ರಕೇಸರಿ ಮಠದ ಹರಿಗುರು ಮಹಾರಾಜ, ನಾಗನಾಥ ಸ್ವಾಮೀಜಿ, ವಿಶ್ವ ಹಿಂದು ಪರಿಷತ್‌ನ ಕೃಷ್ಣ ಭಟ್, ವಿಜಯ ಜಾಧವ, ಹೇಮಂತ ಹಾವಳ, ಶ್ರದ್ಧಾ ಶೆಟ್ಟರ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts