More

    ದೇಶದೊಳಗೆ ರೈತ ಸಂಘಟನೆ ಬಲಗೊಳ್ಳಬೇಕು

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡಿದರೂ ಅಚ್ಚರಿಯಿಲ್ಲ. ಇದನ್ನು ತಡೆಯಲು ದೇಶದೊಳಗಿರುವ ರೈತ ಸಂಘಟನೆ ಬಲಗೊಳ್ಳಬೇಕು ಎಂದು ಕಿಸಾನ್‌ಸಭಾ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಸಲಹೆ ನೀಡಿದರು.

    ರಾಜ್ಯ ರೈತಸಂಘ, ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ತರಾಸು ರಂಗಮಂದಿರದಲ್ಲಿ ಶನಿವಾರ ನಡೆದ ಹೋರಾಟಗಾರ ಟಿ.ನುಲೇನೂರು ದಿ. ಎಂ.ಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರೈತರ, ದಲಿತರ, ಕಾರ್ಮಿಕರ ಹಕ್ಕುಗಳನ್ನು ಆಳುವ ಸರ್ಕಾರಗಳು ದಮನ ಮಾಡುತ್ತಿವೆ. ಇದರ ವಿರುದ್ಧ ಬಹುದೊಡ್ಡ ಚಳವಳಿ ಅಗತ್ಯವಿದೆ. ಶಂಕರಣ್ಣನ ಆಸೆ ಈಡೇರಲು ಬಯಲುಸೀಮೆಯ ಅನ್ನದಾತರು ಒಗ್ಗೂಡಿ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.

    ರೈತರ ಸಮಸ್ಯೆಗಳ ಕುರಿತು ಸದಾ ಚಿಂತಿಸುತ್ತಿದ್ದ ಶಂಕರಪ್ಪ ಹೋರಾಟ ಬದ್ಧತೆಯಿಂದ ಕೂಡಿತ್ತು. ರೈತ ಸಂಘಗಳೆಲ್ಲವೂ ಒಂದಾಗಬೇಕೆಂಬ ಕನಸು ಕಂಡಿದ್ದರು. ಅವರ ಚಿಂತನೆ, ಆಶಯ ಈಗಿನ ರೈತ ಹೋರಾಟಗಾರರು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟರು.

    ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಶಂಕರಪ್ಪ ರೈತ ಸಂಘಟನೆಗಳ ಒಡಕಿನ ಕುರಿತು ನನ್ನೊಂದಿಗೆ ಸದಾ ವ್ಯಥೆ ಪಡುತ್ತಿದ್ದರು. ಒಗ್ಗೂಡಿಸುವ ಹುಮ್ಮಸ್ಸಿತ್ತು. ಉತ್ತಮ ಹೋರಾಟಗಾರನನ್ನು ಕಳೆದುಕೊಂಡ ನೋವು ಕಾಡುತ್ತಿದೆ. ಆದರೂ ಆದರ್ಶಗಳ ಮೂಲಕ ನಮ್ಮೊಂದಿಗೆ ಜೀವಂತವಾಗಿ ಉಳಿದಿದ್ದಾರೆ ಎಂದು ಸ್ಮರಿಸಿದರು.

    ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹೋರಾಟದ ರುವಾರಿಯಾಗಿದ್ದ ಶಂಕರಪ್ಪ ರೈತ ಸಮುದಾಯ ಮತ್ತು ಚಳವಳಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಬರದ ನಾಡು ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಜಾರಿಗಾಗಿ ಹೋರಾಡಿದವರಲ್ಲಿ ಅವರೂ ಪ್ರಮುಖರು ಎಂದು ನೆನಪು ಮಾಡಿಕೊಂಡರು.

    ರೈತಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಒಬ್ಬೊಬ್ಬರೆ ಹೋರಾಟಗಾರರನ್ನು ಕಳೆದುಕೊಳ್ಳುತ್ತಿರುವುದು ರೈತ ಸಮುದಾಯಕ್ಕೆ ಆಗುತ್ತಿರುವ ಬಹುದೊಡ್ಡ ನಷ್ಟ. ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸುವುದರ ಕುರಿತು ನಮ್ಮ ವಿರೋಧವಿಲ್ಲ. ಒಗ್ಗಟ್ಟಿನಿಂದ ಸರ್ಕಾರದ ಕಣ್ಣು ತೆರೆಸಬೇಕು. ರೈತರ, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಎಪಿಎಂಸಿ, ಭೂ ಸುಧಾರಣಾ, ಜಾನುವಾರು ಹತ್ಯೆ ಕಾಯ್ದೆ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಎಲ್ಲಾ ಸಂಘಟನೆಗಳೊಂದಿಗೂ ಉತ್ತಮ ಒಡನಾಡಿಯಾಗಿದ್ದರು. ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ. ರೈತರ ಬದುಕು ಹಸನಾಗಲು ಶಂಕರಪ್ಪ ಅವರಂತೆ ಹೋರಾಟಕ್ಕೆ ಧುಮುಕಬೇಕು ಎಂದು ಸಲಹೆ ನೀಡಿದರು.

    ಇದೇ ವೇಳೆ ಡಿ.ಓ.ಮುರಾರ್ಜಿ ರೈತ ಗೀತೆ ಹಾಡಿದರು. ಶಂಕರಪ್ಪ ಹಾಗೂ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಲಾಯಿತು. ಭದ್ರಾ ಮೇಲ್ದಂಡೆ ಯೋಜನೆಯ ನಿವೃತ್ತ ಮುಖ್ಯ ಇಂಜಿನಿಯರ್ ಆರ್.ಚೆಲುವರಾಜ್, ಚಿಂತಕ ಜೆ.ಯಾದವರೆಡ್ಡಿ, ಶಂಕರಪ್ಪ ಪತ್ನಿ ಕಮಲಮ್ಮ, ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಅಹೋಬಲಪತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts