More

    ದೇಶದಲ್ಲಿ 85 ಲಕ್ಷ ರೈತರಿಂದ ರೇಷ್ಮೆ ಕೃಷಿ : ಡಾ. ಎಂ.ಬಿ. ಪಟ್ಟಣಶೆಟ್ಟಿ

    ವಿಜಯಪುರ : ರೇಷ್ಮೆ ಕೃಷಿ ಪ್ರಾಚೀನ ಕಾಲದಿಂದಲೂ ಮಹತ್ವವನ್ನು ಪಡೆದಿದ್ದು, ರೇಷ್ಮೆ ಬೆಳೆಗಾರರಿಂದ ಹಿಡಿದು ರೇಷ್ಮೆ ಬಟ್ಟೆಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಸೇರಿ ನಮ್ಮ ದೇಶದಲ್ಲಿ ಸುಮಾರು 85 ಲಕ್ಷ ಜನರು ರೇಷ್ಮೆ ಕೃಷಿ ಹಾಗೂ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಡಾ. ಎಂ.ಬಿ.ಪಟ್ಟಣಶೆಟ್ಟಿ ಹೇಳಿದರು.
    ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ರೇಷ್ಮೆ ಬೆಳೆಗಾರರಿಗೆ ಗೋ ಆಧಾರಿತ ಕೃಷಿ ಹಾಗೂ ರೇಷ್ಮೆ ತೋಟಗಳಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಈ ಮೊದಲು ದಕ್ಷಿಣ ಕರ್ನಾಟಕದಲ್ಲಿ ವ್ಯಾಪಕವಾಗಿ ಮಾಡುತ್ತಿದ್ದ ರೇಷ್ಮೆ ಕೃಷಿ ಇತ್ತೀಚಿನ ವರ್ಷಗಳಲ್ಲಿ ಉತ್ತರ ಕನಾಟಕದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ. ವಿಜಯಪುರ ಜಿಲ್ಲೆಯೊಂದರಲ್ಲೆ ಸುಮಾರು 1200 ಎಕರೆ ಪ್ರದೇಶದಲ್ಲಿ ರೈತರು ರೇಷ್ಮೆ ಕೃಷಿ ಕೈಗೊಂಡಿದ್ದಾರೆ. ಅದರಲ್ಲೂ, ಬಸವನ ಬಾಗೇವಾಡಿ ತಾಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ರೇಷ್ಮೆ ಕೃಷಿ ಕೈಗೊಳ್ಳಲಾಗುತ್ತಿದೆ. ಬೇರೆ ಬೆಳೆಗಳಿಗೆ ಹೋಲಿಸಿದಲ್ಲಿ ಮಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದು ರೇಷ್ಮೆ ಕೃಷಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು.
    ಆರೋಗ್ಯವಂತ ಮಣ್ಣಿನಲ್ಲಿ ಬೆಳೆದ ಹಿಪ್ಪನೇರಳೆ ಸೊಪ್ಪು ಸಹ ಉತ್ತಮ ಗುಣಮಟ್ಟದ್ದಾಗಿದ್ದು, ರೇಷ್ಮೆ ಹುಳುಗಳು ಆರೋಗ್ಯವಂತವಾಗಿ ಬೆಳೆಯುತ್ತವೆ. ಇದರಿಂದ ರೇಷ್ಮೆ ಗೂಡಿನ ಗುಣಮಟ್ಟವೂ ಸಹ ಉತ್ತಮವಾಗಿದ್ದು, ಗುಣಮಟ್ಟದ ರೇಷ್ಮೆ ನೂಲು ದೊರಕುತ್ತದೆ. ಇದರಿಂದ ರೈತರು ಬೆಳೆದ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರಕುತ್ತದೆ. ಆದ್ದರಿಂದ ರೈತರು ಮಣ್ಣಿನ ಅರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ರೇಷ್ಮೆ ಬೆಳೆಗಾರರು ಸದುಪಯೋಗಪಡಿಸಿಕೊಂಡು ಹೆಚ್ಚಿನ ಗುಣಮಟ್ಟದ ರೇಷ್ಮೆ ಗೂಡು ಉತ್ಪಾದಿಸುವತ್ತ ಆಸಕ್ತಿ ತೋರಬೇಕು ಎಂದು ಅಭಿಪ್ರಾಯಪಟ್ಟರು.
    ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿ ಪರ ರೇಷ್ಮೆ ಬೆಳೆಗಾರ ರಾಜೇಂದ್ರ ಪಾಟೀಲ, ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದಲ್ಲಿ ಬಸವನ ಬಾಗೇವಾಡಿ ತಾಲೂಕಿನಲ್ಲಿಯೇ ಹೆಚ್ಚಿನ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಇಲ್ಲಿಯ ಮಣ್ಣಿನ ಗುಣಧರ್ಮ ಮತ್ತು ಹವಾಮಾನ ರೇಷ್ಮೆ ಕೃಷಿಗೆ ಸೂಕ್ತವಾಗಿದೆ. ಗುಣಮಟ್ಟದ ರೇಷ್ಮೆ ಗೂಡಿನ ಉತ್ಪಾದನೆಗಾಗಿ ರೇಷ್ಮೆ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದು ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
    ಕನ್ಹೇರಿಯ ಕಾಡಸಿದ್ದೇಶ್ವರ ಮಠದ ತುಕಾರಾಮ ಪವಾರ, ರೇಷ್ಮೆ ಇಲಾಖೆ ಅಧಿಕಾರಿ ಸುರೇಶ ಗೋಳಗೊಂಡ, ಪ್ರಗತಿ ಪರ ರೇಷ್ಮೆ ಬೆಳೆಗಾರರಾದ ಶಂಕರಗೌಡ ಪಾಟೀಲ, ವೀರೇಶ ಗುಡ್ಲಮನಿ, ಅಖಂಡಪ್ಪ ಬೆನ್ನೂರ, ಸಿದ್ದಣ್ಣ ಕಲ್ಲೂರ, ಸೀತಾ ದೊಡಮನಿ, ಪುಷ್ಪಾ ಗುಡದಿನ್ನಿ ಹಾಗೂ ರೇಷ್ಮೆ ಬೆಳೆಗಾರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts