More

    ದೇವಿಗೆ ಮೊರೆ ಹೋಗಿದ್ದಾರೆ ಗ್ರಾಮಸ್ಥರು

    ಧಾರವಾಡ: ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ನರೇಂದ್ರದಲ್ಲಿ ಕೆಲ ದಿನಗಳಿಂದ ಸಾವು- ನೋವಿನ ಸಂಖ್ಯೆ ಹೆಚ್ಚಳವಾಗಿತ್ತು. ಹಲವರು ಕರೊನಾ ಪೀಡಿತರಾಗಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಜನ ಕೋವಿಡ್​ಗೆ ಬಲಿಯಾಗಿದ್ದಾರೆ. ಆದರೆ, ಕರೊನಾದ ಭೀತಿ ಮಾತ್ರ ಗ್ರಾಮಸ್ಥರ ನಿದ್ದೆಗೆಡಿಸಿದೆ. ಇದರ ಪರಿಹಾರಕ್ಕಾಗಿ ಗ್ರಾಮಸ್ಥರು ಗ್ರಾಮದೇವಿಯರ ಮೊರೆಹೋಗಿದ್ದಾರೆ.

    ಗ್ರಾಮದ ಹಲವರಲ್ಲಿ ಕರೊನಾ ಸೋಂಕು ದೃಢಪಟ್ಟು, ಚಿಕಿತ್ಸೆ ಪಡೆದು ಗುಣಮುಖ ಕೂಡ ಆಗಿದ್ದಾರೆ. ಕಳೆದ 15 ದಿನಗಳಲ್ಲಿ ಗ್ರಾಮದ ಸುಮಾರು 30 ಜನ ಮೃತಪಟ್ಟಿದ್ದಾರೆ. ಕೆಲವರು ವಯೋಸಹಜ ಕಾಯಿಲೆ, ಹೃದಯಾಘಾತ ಹಾಗೂ ಇತರ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಅಧಿಕೃತ ಮಾಹಿತಿಯಂತೆ ಕರೊನಾದಿಂದ ಮೃತಪಟ್ಟವರು ಮೂವರು ಮಾತ್ರ. ಆದರೆ, ಸತ್ತವರೆಲ್ಲ ಕರೊನಾದಿಂದ ಎಂಬ ಸುದ್ದಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿಸಿದೆ.

    ದೇವಿಯ ಆರಾಧನೆ: ಗ್ರಾಮಸ್ಥರು ಈ ವರ್ಷ ದ್ಯಾಮವ್ವ ಮತ್ತು ದುರ್ಗಾ ದೇವಿ ಜಾತ್ರೆ ಮಾಡಲು ಮುಂದಾಗಿದ್ದರು. ಆದರೆ, ಜನತಾ ಕರ್ಫ್ಯೂನಿಂದಾಗಿ ಅದು ಮುಂದೂಡಿಕೆಯಾಗಿತ್ತು. ಹೀಗಾಗಿಯೇ ಗ್ರಾಮದಲ್ಲಿ ಸಾವು- ನೋವು ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಸ್ವಾಮೀಜಿಯೊಬ್ಬರಿಂದ ಸಲಹೆ ಪಡೆದ ಹಿರಿಯರು ದೇವಿಯರ ಆರಾಧನೆ ಮಾಡಿದ್ದಾರೆ. ದೇವಸ್ಥಾನ ಟ್ರಸ್ಟ್ ಕಮಿಟಿ, ಗ್ರಾ.ಪಂ. ಚುನಾಯಿತ ಸದಸ್ಯರು ಹಾಗೂ ಮುಖಂಡರು ವಾರಾಚರಣೆ ಮಾಡಲು ನಿರ್ಧರಿಸಿದ್ದಾರೆ.

    ಐದು ವಾರಾಚರಣೆ: ಹಿರಿಯರ ನಿರ್ಧಾರದಂತೆ ಗ್ರಾಮದಲ್ಲಿ ವಾರಾಚರಣೆ ಮಾಡಲಾಗುತ್ತಿದೆ. 3 ಮಂಗಳವಾರ ಹಾಗೂ 2 ಶುಕ್ರವಾರ ಕೃಷಿ ಚಟುವಟಿಕೆ ಮಾಡುವಂತಿಲ್ಲ. ಮನೆಯಲ್ಲಿ ರೊಟ್ಟಿ, ಚಪಾತಿ ತಟ್ಟುವಂತಿಲ್ಲ. ಗ್ರಾಮದ ಎಲ್ಲ ಸಣ್ಣಪುಟ್ಟ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ‘ಮುಂದಿನ ಮಂಗಳವಾರ ಹೋಮ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸಾವು- ನೋವಿನ ಸಂಖ್ಯೆ ಕಡಿಮೆಯಾಗುವುದರ ಜತೆಗೆ ಕರೊನಾ ಭೀತಿಯೂ ಕೊಂಚ ಕರಗಿದೆ’ ಎನ್ನುತ್ತಾರೆ ಹಿರಿಯರು.

    ಗ್ರಾಪಂನಿಂದ ಜಾಗೃತಿ

    ಕರೊನಾ 2ನೇ ಅಲೆ ಆರಂಭವಾದಾಗಿನಿಂದ ಗ್ರಾಪಂನಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ನರೇಂದ್ರ ಮತ್ತು ಅದರ ವ್ಯಾಪ್ತಿಯ ದಾಸನಕೊಪ್ಪ ಗ್ರಾಮಗಳಲ್ಲಿ ಸ್ಯಾನಿಟೈಜೇಶನ್ ಮಾಡಲಾಗಿದೆ. ನೆಗಡಿ, ಕೆಮ್ಮು, ಜ್ವರ, ಇತರ ಲಕ್ಷಣ ಕಂಡುಬಂದವರ ಮನೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸೂಚಿಸಲಾಗುತ್ತಿದೆ.

    ಗ್ರಾಮದಲ್ಲಿ ಈ ರೀತಿಯ ಸರಣಿ ಸಾವುಗಳು ಸಂಭವಿಸಿರಲಿಲ್ಲ. ಮೃತಪಟ್ಟವರೆಲ್ಲ ಕರೊನಾದಿಂದ ಎಂಬ ಸುದ್ದಿ ಹರಡಿ ಜನ ಭಯಭೀತರಾಗಿದ್ದರು. ಗ್ರಾಮದ ಹಿರಿಯರ ನಿರ್ಧಾರದಂತೆ ದ್ಯಾಮವ್ವ ದೇವಿಯ ಆರಾಧನೆ ಮಾಡಲಾಗುತ್ತಿದೆ. ಇದರಿಂದ ಹಿಂದೆ ಇದ್ದ ಭಯ ದೂರವಾಗಿದೆ. ಗ್ರಾಪಂನಿಂದ ಕರೊನಾ ಹರಡುವಿಕೆ ತಡೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.

    | ಗಂಗಮ್ಮ ನಿರಂಜನ ನರೇಂದ್ರ ಗ್ರಾ.ಪಂ. ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts