More

    ದೇವಾಲಯಗಳ ವ್ಯಾಪ್ತಿಯಲ್ಲಿ ವನೀಕರಣ ಹೆಚ್ಚಲಿ

    ಶಿರಸಿ: ಮುಜರಾಯಿ ಇಲಾಖೆಯಡಿ ಇರುವ ರಾಜ್ಯದ ದೇವಾಲಯಗಳ ವ್ಯಾಪ್ತಿಯಲ್ಲಿ ವನೀಕರಣ ಪ್ರಕ್ರಿಯೆ ಹೆಚ್ಚಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

    ತಾಲೂಕಿನ ಸ್ವರ್ಣವಲ್ಲೀ ಮಠದ ಸಸ್ಯಲೋಕದ 20ನೇ ವರ್ಷದ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜೀವ ವೈವಿಧ್ಯ ಸಂರಕ್ಷಣೆ ಕಾರ್ಯಾಗಾರ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

    ಜೀವ ವೈವಿಧ್ಯತೆ ಪ್ರಕೃತಿಯಾದರೆ ಅವನ್ನು ಏಕರೂಪಗೊಳಿಸುವ ಕ್ರಿಯೆಯೇ ವಿಕೃತಿ. ಹಾಗಾಗಿ ಸಹಜ ಜೀವ ವೈವಿಧ್ಯತೆ ರಕ್ಷಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಅನೇಕ ಜೀವ ಪ್ರಕಾರಗಳು ನಾಶವಾಗಿವೆ. ಕೆಲವು ವಿನಾಶದ ಅಂಚಿನಲ್ಲಿವೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ಪರಿಸರ ಉಳಿವು ಸಾಧಿಸಬೇಕು. ಮುಜರಾಯಿ ಇಲಾಖೆಯಡಿ 34 ಸಾವಿರ ದೇವಾಲಯಗಳಿದ್ದು, ಅಲ್ಲಿ ವನೀಕರಣ ಮಾಡಿದರೆ ಹಸಿರೀಕರಣ ಸಾಧ್ಯವಾಗುತ್ತದೆ ಎಂದರು.

    ರಾಜ್ಯದ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿನ ಜೀವ ವೈವಿಧ್ಯ ಸಮಿತಿಗಳ ಕಾರ್ಯಚಟುವಟಿಕೆಗೆ ಚುರುಕು ಮುಟ್ಟಿಸುವ ಕಾರ್ಯ ಜೀವ ವೈವಿಧ್ಯ ಮಂಡಳಿಯಿಂದ ಆಗಬೇಕು. ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದರು.

    ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ದಶಕದೊಳಗೆ ಪರಿಸರ ಉಳಿಸದಿದ್ದರೆ ಎಲ್ಲೆಡೆ ಆಕ್ಸಿಜನ್ ಕ್ಲಬ್ ಆರಂಭಿಸುವ ಅನಿವಾರ್ಯತೆ ಎದುರಾಗಲಿದೆ. ಮನುಷ್ಯ ಪ್ರವೇಶ ಆಗದಿದ್ದರೆ ಪರಿಸರ ತನ್ನಿಂದ ತಾನೇ ಬೆಳೆಯುತ್ತದೆ ಎಂದರು.

    ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಳಿಯ ಹಿರಿಯ ಅಧಿಕಾರಿ ಡಾ. ಪುರುಷೋತ್ತಮ, ಮಾದರಿ ಜೀವ ವೈವಿಧ್ಯ ನಿರ್ವಹಣೆ ಸಮಿತಿಗಳ ಕುರಿತು ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಸಿಎಫ್ ಯತೀಶಕುಮಾರ, ಉದಯ ನಾಯಕ, ಜಿಪಂ ಸದಸ್ಯ ಜಿ.ಎನ್. ಹೆಗಡೆ, ನಾಗೇಶ ರಾಯ್ಕರ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಸೋಂದಾ ಗ್ರಾಪಂ ಅಧ್ಯಕ್ಷ ಮಂಜುನಾಥ ಭಂಡಾರಿ ಇದ್ದರು. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ಕಾರ್ಯಾಗಾರದ ನಿರ್ಣಯ ಮಂಡಿಸಿದರು. ಡಾ. ಕೇಶವ ಕೊರ್ಸೆ, ಗಣಪತಿ ಕೆ. ಹಾಗೂ ಎಸ್. ಜಿ. ಹೆಗಡೆ ನಿರ್ವಹಿಸಿದರು.

    · ಕಾರ್ಯಾಗಾರದ ನಿರ್ಣಯಗಳು: *ರಾಜ್ಯದ ಎಲ್ಲ ಜಿಲ್ಲೆ, ಗ್ರಾಪಂ, ತಾಪಂಗಳಲ್ಲಿ ಕಾನೂನಿನನ್ವಯ ಜೀವ ವೈವಿಧ್ಯ ನಿರ್ವಹಣೆ ಸಮಿತಿಗಳನ್ನು ಸಬಲೀಕರಣ ಮಾಡಬೇಕು. * ಗ್ರಾಮೀಣ ಜನರ ಉರುವಲು, ಗೊಬ್ಬರ, ಮರಮಟ್ಟು ಇತ್ಯಾದಿ ಅಗತ್ಯತೆ ಪೂರೈಸುವ ಯೋಜನೆ ಜಾರಿಗೆ ತರಬೇಕು. *ಜೀವ ವೈವಿಧ್ಯ ಸಂರಕ್ಷಣೆಗೆ ಗ್ರಾಮ ಪಂಚಾಯಿತಿಗಳು ಶೇ. 5ರಷ್ಟು ಅನುದಾನ ಸರಿಯಾಗಿ ಬಳಸಬೇಕು. * ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಎಲ್ಲ ಗ್ರಾಮ ಅರಣ್ಯ ಸಮಿತಿಗಳಿಗೆ ಸಲ್ಲಬೇಕಾದ ಲಾಭಾಂಶವನ್ನು ಶೀಘ್ರ ವಿತರಿಸಿ, ಅರಣ್ಯ ಕರಾವಳಿ ಸಮಗ್ರ ರಕ್ಷಣೆ ಹಾಗೂ ಜನಸಮುದಾಯಗಳ ಜೀವನ ಭದ್ರತೆ ದೃಷ್ಟಿಯಿಂದ ಕರಾವಳಿಗುಂಟ ಕೃಷಿಕರು ಹಾಗೂ ಮೀನುಗಾರರ ಸ್ನೇಹಿಯಾದ ಅಭಿವೃದ್ಧಿ ಮಾದರಿ ರೂಪಿಸಬೇಕು. ಕಡಲುಕೊರೆತ ತಡೆಯಲು ಪರಿಣಾಮಕಾರಿಯೆಂದು ರೂಪಿಸಿರುವ ಕರಾವಳಿ ಹಸಿರು ಕವಚ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು.

    ರಾಜ್ಯದಲ್ಲಿ 3 ಸಾವಿರದಷ್ಟು ಜೀವ ವೈವಿಧ್ಯ ದಾಖಲಾತಿ ಮಾಡಲಾಗಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕಿದೆ. ಗ್ರಾಪಂ ಮಟ್ಟದ ಜೀವ ವೈವಿಧ್ಯ ಸಮಿತಿಗಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಅರಿವು ಮೂಡಿಸಬೇಕು. ಜೀವ ವೈವಿಧ್ಯ ತಾಣಗಳ ಗುರುತಿಸುವಿಕೆ ಹೆಚ್ಚಬೇಕು. ಕಾಡಿನ ಜೇನು ಸಂತತಿಗಳ ರಕ್ಷಣೆ ಮಾಡಬೇಕು. | ಅನಂತ ಅಶೀಸರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts