More

    ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ- ದಿನೇಶ್ ಶೆಟ್ಟಿ ಆರೋಪಕ್ಕೆ ಯಶವಂತರಾವ್ ಸೆಡ್ಡು

    ದಾವಣಗೆರೆ: ಜಿಲ್ಲೆಯಲ್ಲಿ ನಾವು ಭ್ರಷ್ಟಾಚಾರ ಮಾಡಿಲ್ಲ. ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸಂಸದ ಸಿದ್ದೇಶ್ವರ ಹಾಗೂ ನಾನು ಪ್ರಮಾಣ ಮಾಡಲು ಸಿದ್ಧರಿದ್ದು, ಕಾಂಗ್ರೆಸ್‌ನವರೇ ದಿನಾಂಕ ನಿರ್ಧರಿಸಲಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.
    ಕಾಂಗ್ರೆಸ್ ಮುಖಂಡ ದಿನೇಶ್ ಕೆ ಶೆಟ್ಟಿ ಮಾಡಿದ ಆರೋಪವನ್ನು ನಾವು ಗಂಭೀರವಾಗಿ ಸ್ವೀಕರಿಸಿದ್ದೇವೆ. ಮೊದಲು ನಾವೇ ದೇವಸ್ಥಾನದಲ್ಲಿ ಗಂಟೆ ಹೊಡೆಯುತ್ತೇವೆ. ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ಜಿಲ್ಲೆಯಲ್ಲಿ ಅಕ್ರಮ ನಡೆಸಿಲ್ಲ ಎಂಬುದಾಗಿ ಅವರನ್ನು ದೇವಸ್ಥಾನಕ್ಕೆ ಕರೆತಂದು ಪ್ರಮಾಣ ಮಾಡಿಸಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿ ಸವಾಲು ಹಾಕಿದರು.
    ಐದು ವರ್ಷದ ಹಿಂದೆ ದಿನೇಶ್ ಕೆ ಶೆಟ್ಟಿ ವಿರುದ್ಧ ಬಹಿರಂಗ ಸವಾಲು ಹಾಕಿ ನಗರಪಾಲಿಕೆ ಬಯಲುರಂಗಮಂದಿರದಲ್ಲಿ ಕಾಂಗ್ರೆಸ್‌ನವರ ಅಕ್ರಮಗಳ ದಾಖಲಾತಿ ಕಡತಗಳೊಂದಿಗೆ ಅರ್ಧ ದಿನ ಕೂತರೂ ಶಾಮನೂರು ಕುಟುಂಬದವರಿರಲಿ, ಕಾಂಗ್ರೆಸ್ಸಿನ ಒಬ್ಬ ಪಾಲಿಕೆ ಸದಸ್ಯರೂ ಬರಲಿಲ್ಲ. ಆಗ ಉತ್ತರಿಸಬೇಕಿದ್ದ ದಿನೇಶ್ ಶೆಟ್ಟಿ ಬರಲಿಲ್ಲವೇಕೆ ಎಂದು ಪ್ರಶ್ನಿಸಿದರು.
    ದಿನೇಶ್ ಶೆಟ್ಟಿ ಪಾಲಿಕೆ ಸದಸ್ಯನಾಗಿದ್ದಾಗ ಪಿಜೆ ಬಡಾವಣೆಯ ಗೂಡಂಗಡಿಗಳಿಂದ ಚಂದಾ ವಸೂಲಿ ಮಾಡಿರಲಿಲ್ಲವೆ. ಚಂದಾ ಹಣ ಕೊಟ್ಟವರು ಈಗಲೂ ಬಹಿರಂಗ ಹೇಳಿಕೆ ನೀಡಲು ಸಿದ್ಧರಿದ್ದಾರೆ. ಈ ಆರೋಪ ನಿರಾಕರಿಸಿ ಶೆಟ್ಟಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧರಿದ್ದಾರಾ ಎಂದು ಪ್ರಶ್ನೆ ಹಾಕಿದರು.
    ಬಾಪೂಜಿ ಸಂಸ್ಥೆ ಕಟ್ಟಿದವರು ಯಾರು. ಸಂಸ್ಥೆ ಕಟ್ಟಿ ಬೆಳೆಸಿದವರ ಸ್ಥಿತಿ ಏನಾಗಿದೆ. ಶಾಮನೂರು ಕುಟುಂಬದ ರೈಸ್‌ಮಿಲ್‌ನಲ್ಲಿ ವಿದ್ಯುತ್ ಕದ್ದಿದ್ದಕ್ಕೆ ದಂಡ ತೆರಲಿಲ್ಲವೆ. ಎಸ್‌ಎಸ್ ಮಾಲ್ ಕಟ್ಟಲು ರಾಜಕಾರಣಿ ಗಾಂಜಿವೀರಪ್ಪನವರ ಸಮಾಧಿ ಸಹಿತ ಜಾಗ ಕಬಳಿಕೆಯಾಗಿಲ್ಲವೆ. ಮಾಲ್ ಒತ್ತುವರಿ ವಿರುದ್ಧ ಹೋರಾಟ ಮಾಡಿದ ಮಹದೇವ್ ನಿಗೂಢ ಸಾವಿಗೆ ಕಾರಣರಾರು.
    ದೂಡಾದಿಂದ 40 ಮೂಲೆ ನಿವೇಶನಗಳನ್ನು ತುಂಡು ನಿವೇಶನಗಳನ್ನಾಗಿ ಪರಿವರ್ತನೆ ಮಾಡಿ ತಮ್ಮ ಹಿಂಬಾಲಕರಿಗೆ ಹಂಚಿಕೆ ಮಾಡಲಾಗಿತ್ತು. ಟಿವಿ ಸ್ಟೇಷನ್ ಕೆರೆ ಪಕ್ಕದಲ್ಲಿ 2 ಲಕ್ಷ ಲೀ. ಸಾಮರ್ಥ್ಯದ ಸಂಪು ನಿರ್ಮಿಸಿ ಖಾಸಗಿ ಆಸ್ಪತ್ರೆಗೆ ನೀರು ಹರಿಸಿಕೊಂಡಿಲ್ಲವೆ. ನಗರಕ್ಕೆ ಅಗತ್ಯವಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಬಾರದಂತೆ ತಡೆಯುತ್ತಿರುವವರು ಯಾರು ಎಂಬುದಕ್ಕೆ ದೇವಸ್ಥಾನದಲ್ಲಿ ಪ್ರಮಾಣ ಮಾಡಿಸಲಿ. ಆಪಾದನೆಗಳೆಲ್ಲ ಸುಳ್ಳು ಎಂದು ಸಾಬೀತು ಮಾಡಲಿ ಎಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಲೋಕಿಕೆರೆ ನಾಗರಾಜ್, ಕೊಂಡಜ್ಜಿ ಜಯಪ್ರಕಾಶ್, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ್, ಕಿರಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts