More

    ದೇವಸೇನ ಮುನಿಮಹಾರಾಜರ ಸಮಾಧಿ ಮರಣ

    ಕಾಗವಾಡ: ಆಚಾರ್ಯ 108 ಸುಬಲಸಾಗರ ಮುನಿಮಹಾರಾಜರ ಪರಮಶಿಷ್ಯ ಶಾಂತಮೂರ್ತಿ ಆಚಾರ್ಯ ಶ್ರೀ 108 ದೇವಸೇನ ಮುನಿಮಹಾರಾಜರು ಶೇಡಬಾಳ ಗ್ರಾಮದ ಶಾಂತಿಸಾಗರ ಆಶ್ರಮದಲ್ಲಿ ಶುಕ್ರವಾರ ಮಧ್ಯಾಹ್ನ 2.45 ಗಂಟೆಗೆ ಯಮಸಲ್ಲೇಖನ ವೃತ ಪೂರ್ವಕವಾಗಿ ಸಮಾಧಿ ಮರಣ ಸಾಧಿಸಿದರು. ಅವರ ಅಂತ್ಯಕ್ರಿಯೆಯು ಪೂಜ್ಯರು, ಭಟ್ಟಾರಕರು, ಮುನಿಗಳು, ಮಾತಾಜಿ ಹಾಗೂ ಅಪಾರ ಭಕ್ತರ ಉಪಸ್ಥಿತಿಯಲ್ಲಿ ಸಂಜೆ ಜರುಗಿತು. ನಾಂದಣಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ರಾಜಸ್ಥಾನ ತಿಜೋರಾದ ಸ್ವಸ್ತಿಶ್ರೀ ಪ.ಪೂ. ಸೌರಭಸೇನ ಮುನಿಮಹಾರಾಜರು ಹಾಗೂ ಮಾತಾಜಿ ನೇತೃತ್ವದಲ್ಲಿ ಅಂತ್ಯಕ್ರಿಯೆ, ಪೂಜಾ ವಿಧಿ-ವಿಧಾನಗಳು ಜರುಗಿದವು.

    ಶ್ರೀಗಂಧ ಕಟ್ಟಿಗೆ, ಕೊಬ್ಬರಿ, ಹಾಲು, ತುಪ್ಪ, ಕರ್ಪೂರ, ಚಂದನ ಮೊದಲಾದ ಪದಾರ್ಥಗಳಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆ ಪೂರ್ವದಲ್ಲಿ ಪ್ರತಿಷ್ಠಾಚಾರ್ಯ ಶಾಂತಿನಾಥ ಉಪಾಧ್ಯೆ ಪೂಜೆ ನೆರವೇರಿಸಿದರು. ನಂತರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಅಜಿತ ಕುಚನೂರೆ, ಆಶ್ರಮದ ಸಂಚಾಲಕ ರಾಜು ನಾಂದ್ರೆ, ಮಾಜಿ ಶಾಸಕ ಕೆ.ಪಿ.ಮಗೆಣ್ಣವರ, ಅರುಣಕುಮಾರ ಯಲಗುದ್ರಿ ಸೇರಿ ಬೆಳಗಾವಿ, ಸಾಂಗಲಿ, ಕೊಲ್ಲಾಪುರ, ಜಮಖಂಡಿ, ಬಾಗಲಕೋಟೆ ಜಿಲ್ಲೆಗಳಿಂದ ಸಾವಿರಾರು ಶ್ರಾವಕ-ಶ್ರಾವಕಿಯರು ಇದ್ದರು.

    ಮುನಿಮಹಾರಾಜರ ಪರಿಚಯ: ಆಚಾರ್ಯ 108 ದೇವಸೇನ ಮುನಿಮಹಾರಾಜರು 17-02-1938 ರಂದು ಮುತ್ತೂರು ಗ್ರಾಮದಲ್ಲಿ ಜನಿಸಿದರು. 1992 ರಲ್ಲಿ ಕ್ಷುಲ್ಲಕ ದೀಕ್ಷೆ ಪಡೆದುಕೊಂಡರು. 1996 ರಲ್ಲಿ ಶೇಡಬಾಳದಲ್ಲಿ ಮುನಿದೀಕ್ಷೆ ಹೊಂದಿದರು. 2004 ರಲ್ಲಿ ಆಚಾರ್ಯ ಪದವಿ ಪಡೆದುಕೊಂಡ ಅವರು ಹಲವು ಸಲ ಕಾಲ್ನಡಿಗೆಯ ಮೂಲಕ ಜೈನ ತೀರ್ಥ ಕ್ಷೇತ್ರಗಳ ದರ್ಶನ ಪಡೆದು ಆತ್ಮಕಲ್ಯಾಣದ ಜತೆಗೆ ಧರ್ಮ ಪ್ರಭಾವನೆ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts