More

    ದೇವರ ಪೂಜೆಯಿಂದ ಶಾಂತಿ, ನೆಮ್ಮದಿ

    ಬಾಳೆಹೊನ್ನೂರು: ಮನುಷ್ಯನ ಮಾನಸಿಕ ಶಾಂತಿ, ನೆಮ್ಮದಿಗೆ ಭಗವಂತನ ಪೂಜೆ, ಧ್ಯಾನ ಮತ್ತು ಆರಾಧನೆ ಮುಖ್ಯ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು. ಶನಿವಾರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಶ್ರಾವಣ ತಪೋನುಷ್ಠಾನ ಮಹಾಪೂಜೆಯೊಂದಿಗೆ ಮಂಗಲ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಹಣ-ಅಧಿಕಾರ-ಅಂತಸ್ತು ಬಯಸುವ ಮನುಷ್ಯನ ಉಜ್ವಲ ಭವಿಷ್ಯಕ್ಕೆ ಆಧ್ಯಾತ್ಮಿಕ ಚಿಂತನೆಗಳು ಅವಶ್ಯಕ. ಮನುಷ್ಯನಲ್ಲಿ ವೈಚಾರಿಕ ಭಾವನೆ ಬೆಳೆದುಬಂದರೂ ನಾಸ್ತಿಕ ಭಾವನೆಗಳು ಬೆಳೆಯಬಾರದು. ದೇವರು, ಧರ್ಮ ಮತ್ತು ಗುರುವಿನಲ್ಲಿ ಎಂದಿಗೂ ನಂಬಿಕೆ, ವಿಶ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.

    ಹಿಂದುಗಳಿಗೆ ಅದರಲ್ಲೂ ವಿಶೇಷವಾಗಿ ವೀರಶೈವ ಧರ್ಮದಲ್ಲಿ ಶ್ರಾವಣಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಜೀವಾತ್ಮ ಪರಮಾತ್ಮನತ್ತ ಮುನ್ನಡೆಯಲು ಬೇಕಾದ ಅಮೂಲ್ಯ ವಿಚಾರ ಧಾರೆಗಳನ್ನು ಬೋಧಿಸಿದ್ದಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ ಮನುಷ್ಯ ಕೇವಲ ಸಂಪತ್ತು ಮತ್ತು ಅದರಿಂದ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವ ಭಾವನೆ ಹೊಂದಿದ್ದಾನೆ. ಆದರೆ ಇವೆರಡೂ ಪ್ರಾಪ್ತವಾಗಬೇಕಾದರೆ ಧರ್ಮವೇ ಮೂಲ ಎಂಬುದನ್ನು ಮರೆಯುತ್ತಿದ್ದಾನೆ. ಬದುಕಿನಲ್ಲಿ ಸಂತೃಪ್ತಿ ಕಾಣಬೇಕಾದರೆ ದೇವರ ಅನುಗ್ರಹ ಬಹಳ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಲೋಕ ಕಲ್ಯಾಣಕ್ಕಾಗಿ ಅವತರಿಸಿ ಜನಜಾಗೃತಿ ಮೂಡಿಸಿದ್ದಾರೆ ಎಂದರು.

    ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಮಾರ್ಗದಲ್ಲಿ ಮುನ್ನಡೆದಾಗ ಸಾಧನೆಯಲ್ಲಿ ಯಶಸ್ಸು ದೊರೆಯುತ್ತದೆ ಎಂದರು. ಒಂದು ತಿಂಗಳು ನಡೆಸಿಕೊಂಡು ಬಂದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣವನ್ನು ಗಂವ್ಹಾರ ಹಿರೇಮಠದ ವಿರೂಪಾಕ್ಷೇಶ್ವರ ಶ್ರೀಗಳು ಪೂಜೆ ಸಲ್ಲಿಸಿ ಮಂಗಲಗೊಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts