More

    ದೇವರಗುಡ್ಡ ಗಢಗಢ!

    ರಾಣೆಬೆನ್ನೂರ: ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಸುತ್ತಲೂ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಗ್ರಾಮಸ್ಥರು ಹಾಗೂ ಶ್ರೀ ಮಾಲತೇಶ ಸ್ವಾಮಿ ದೇವರ ದರ್ಶನಕ್ಕೆ ಬರುವ ಭಕ್ತರು ಬೇಸತ್ತು ಹೋಗಿದ್ದಾರೆ.

    ಗಣಿಗಾರಿಕೆ ಹೊಡೆತಕ್ಕೆ ಸಿಲುಕಿರುವ ದೇವರಗುಡ್ಡದ ಬಳಿಯ ಕರಿಯಾಲದ ಅಕ್ಕಪಕ್ಕದ ಗುಡ್ಡ ಹಾಗೂ ಭೂಮಿ ಕರಗಿ ಹೋಗಿವೆ. ಕಲ್ಲು ಗಣಿಗಾರಿಕೆ ಅರ್ಥಿಕವಾಗಿ ಮೇಲ್ನೋಟಕ್ಕೆ ಲಾಭದಾಯಕ ಅನಿಸಿದರೂ, ಅಸುರಕ್ಷಿತ ಗಣಿಗಾರಿಕೆಯಿಂದ ಆಗಿರುವ ಪರಿಸರ, ಕೃಷಿ ಭೂಮಿಗಾಗಿರುವ ಹಾನಿ, ಸಾಮಾಜಿಕ ನಷ್ಟ ಅಪಾರವಾಗಿದೆ. ಆದರೆ, ಅಕ್ರಮ ಕಲ್ಲು ಗಣಿಗಾರಿಕೆಯನ್ನು ಈವರೆಗೂ ಯಾರೊಬ್ಬರೂ ತಡೆಯದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಬೇಸತ್ತು ಹೋದ ಜನತೆ: ಬಹುತೇಕ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್​ಗಳು ಗ್ರಾಮಗಳಿಗೆ ಪಕ್ಕದಲ್ಲಿಯೇ ನಡೆದಿವೆ. ಕ್ರಷರ್ ಘಟಕಗಳ ಧೂಳು ನೇರವಾಗಿ ಗ್ರಾಮಗಳಿಗೆ ಹರಡತೊಡಗಿದೆ. ಸ್ಪೋಟಕಕ್ಕೆ ಹಲವು ಬಗೆಯ ರಾಸಾಯನಿಕ ಬಳಸುತ್ತಿರುವ ಕಾರಣ ದುರ್ವಾಸನೆ ಬರುತ್ತಿದೆ. ಜತೆಗೆ, ಧೂಳು ತಡೆಗಟ್ಟುವ ವ್ಯವಸ್ಥೆ ಇಲ್ಲದ ಕಾರಣ ಇದರ ಪರಿಣಾಮ ನೇರವಾಗಿ ಗ್ರಾಮಸ್ಥರ ಮೇಲೆ ಆಗುತ್ತಿದೆ. ಈ ಕುರಿತು ಆರೋಗ್ಯ ಇಲಾಖೆ ಸಮೀಕ್ಷೆಯನ್ನೂ ಮಾಡಿಲ್ಲ ಎಂಬುದು ದೇವರಗುಡ್ಡ ಗ್ರಾಮಸ್ಥರ ಆರೋಪವಾಗಿದೆ.

    ನಿರಂತರ ಸ್ಪೋಟದಿಂದ ಆತಂಕ: ಗ್ರಾಮಗಳಿಗೆ ಹೊಂದಿಕೊಂಡಿರುವ ಕಲ್ಲು ಗುಡ್ಡದಲ್ಲಿ ನಿರಂತರವಾಗಿ ನಡೆಯುತ್ತಿರುವ ಸ್ಪೋಟದಿಂದ ಗ್ರಾಮಸ್ಥರು ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಗುಡ್ಡದ ಸುತ್ತಲೂ ಇರುವ ನೀರಾವರಿ ಕೃಷಿ ಜಮೀನು ಹಾಳಾಗುತ್ತಿವೆ. ಕೊಳವೆಬಾವಿಯ ನೀರಿನ ಮೂಲಕ್ಕೆ ಧಕ್ಕೆಯಾಗುತ್ತಿದೆ. ವಿವಿಧ ಬೆಳೆಗಳ ಮೇಲೆ ಧೂಳು ಶೇಖರಣೆಯಾಗುತ್ತಿದೆ. ಅನೇಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಕ್ಕಪಕ್ಕದಲ್ಲಿರುವ ಶಾಲೆ ಹಾಗೂ ದೇವಸ್ಥಾನಗಳಿಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಘಟಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಅಥವಾ ದೂರದಲ್ಲಿ ಸ್ಥಳಾಂತರಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅವರೂ ಅಕ್ರಮ ಗಣಿಗಾರಿಕೆ ಕುಳಗಳ ಜತೆ ಕೈಜೋಡಿಸಿರಬಹುದು ಎಂದು ದೇವರಗುಡ್ಡ ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಿದ್ದಾರೆ.

    ಭಯದ ಸ್ಥಳ: ಕಲ್ಲು ಗಣಿಗಾರಿಕೆಯನ್ನು ನಿಯಮ ಮೀರಿ ಮಾಡಿದ ಪರಿಣಾಮವಾಗಿ ಇದೀಗ ಅವು ಭಯದ ಸ್ಥಳಗಳಾಗಿವೆ. ಭೂಮಿಯನ್ನು ಅಳವಾಗಿ ಕೊರೆದ ಪರಿಣಾಮ ನೀರು ಉಕ್ಕಿ ಹರಿದು ಇದೀಗ ಆಗ ಸ್ಥಳಗಳು ಬಾವಿಯಂತಾಗಿವೆ. ಹೀಗಾಗಿ, ಜನ- ಜಾನುವಾರುಗಳು ಈ ಪ್ರದೇಶಗಳ ಸುತ್ತಲೂ ಓಡಾಡಲು ಭಯಪಡುವ ವಾತಾವರಣ ನಿರ್ವಣವಾಗಿದೆ. ಆದ್ದರಿಂದ ಭೂಮಿ ಕೊರೆದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

    ದೇವರಗುಡ್ಡದ ಮನೆಗಳು ಬಿರುಕು ಬಿಡುತ್ತಿವೆ. ಬಾಂಬ್ ಬ್ಲಾಸ್ಟ್ ಮಾಡುತ್ತಿರುವ ಕಾರಣ ಗ್ರಾಮದ ಜನತೆ ರಾತ್ರಿ ಸಮಯದಲ್ಲಿ ನಿದ್ದೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ. ದೇವರಗುಡ್ಡಕ್ಕೆ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಅವರಿಗೂ ತೊಂದರೆ ಉಂಟಾಗುತ್ತಿದೆ. ಗ್ರಾಮದ ದೇವಸ್ಥಾನಗಳ ಗೋಡೆಗಳು ಬಿರುಕು ಬಿಡುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಗಣಿಗಾರಿಕೆ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ.

    | ಸಂತೋಷ ಭಟ್, ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts