More

    ದೇವನಹಳ್ಳಿಯಲ್ಲಿ ವಿಜೃಂಭಿಸಿದ ಕರಗ ಉತ್ಸವ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಇತಿಹಾಸ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಾಲಯದ ಮೌಕ್ತಿಕಾಂಭ ಅಮ್ಮನವರ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
    13ನೇ ಬಾರಿ ಮಲ್ಲಿಗೆ ಹೂವಿನ ಕರಗವನ್ನು ಹೊತ್ತ ಪೂಜಾರಿ ರವಿಕುಮಾರ್ ತಡ ರಾತ್ರಿ 2.10 ರಲ್ಲಿ ದೇವಾಲಯದಿಂದ ಹೊರಟು ಪುಟ್ಟಪ್ಪನಗುಡಿ ಬೀದಿಯ ಕರಗ ಮಂಟಪ, ಏಳು ಸುತ್ತಿನ ಕೊಟೆ ಸುತ್ತಿ, ಪಟ್ಟಣದ ಎಲ್ಲ ರಸ್ತೆಗಳಲ್ಲಿ ಸಾಗಿದರು.
    ಭಕ್ತರು ಕರಗಕ್ಕೆ ಪೂಜಿಸಿ ಮಲ್ಲಿಗೆ ಹೂವು ಹಾಕಿ ನಮಿಸಿದರು. ಕೋಟೆ ಹಿಂಭಾಗ ಚಿಕ್ಕಕರೆ ಬಳಿಯ ದರ್ಗಾ, ತಾಲೂಕು ಕಚೇರಿ ರಸ್ತೆಯ ಮಸೀದಿಯ ಮುಂದೆ ಮುಸ್ಲಿಮರು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಮರಳುಬಾಗಿಲಿನ ಪರ್ವತಪುರ ರಸ್ತೆಯ ವೃತ್ತದಲ್ಲಿ ಮುಖಂಡ ವೆಂಕಟರಾಯಪ್ಪ, ಪುರಸಬೆ ಮಾಜಿ ಸದಸ್ಯ ವಿ.ಗೋಪಾಲ್ ಸಂಗಡಿಗರು 1000 ಕೆಜಿ ಹೂಗಳಿಂದ ಚಕ್ರಾಕಾರವಾಗಿ ನಿರ್ಮಿಸಿದ್ದ ಸ್ಥಳಕ್ಕೆ ಬಂದ ಕರಗ ಹೂವಿನ ಮೇಲೆ ನೃತ್ಯ ಮಾಡಿದ್ದು ಆಕರ್ಷಕವಾಗಿತ್ತು.
    14ನೇ ವಾರ್ಡಿನಲ್ಲಿ ಪುರಸಭೆ ಸದಸ್ಯ ವೈ.ಆರ್.ರುದ್ರೇಶ್ ವಿಶೇಷ ಹೂಗಳ ಹಾಸಿ ಕರಗ ಸ್ವಾಗತಿಸಿದರು. ವೀರಕುಮಾರರು ಕತ್ತಿ ಹಿಡಿದು ಗೋವಿಂದ ಸ್ಮರಣೆಯೊಂದಿಗೆ ಕರಗದ ಹಿಂದೆ ಮುಂದೆ ಹೆಜ್ಜೆ ಹಾಕಿದರು. ಶನಿವಾರ ಬೆಳಗ್ಗೆ 9.20ಕ್ಕೆ ಕರಗ ದೇವಾಲಯ ಪ್ರವೇಶಿಸಿತು.
    ಪಟ್ಟಣದ ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳನ್ನು ತೆರೆಯಲಾಗಿತ್ತು. ಪಟಾಕಿ ಬಾಣಬಿರುಸುಗಳು ಆರ್ಭಟಿಸಿದವು. ವೇಣುಗೋಪಾಲಸ್ವಾಮಿ, ಮಾರಮ್ಮ , ಚೌಡೇಶ್ವರಿ ಮದ್ದೂರಮ್ಮ, ಮಹೇಶ್ವರಮ್ಮ, ದೊಡ್ಡಮ್ಮ, ಕಾಳಮ್ಮ ಗಂಗಮ್ಮ, ಮುನೇಶ್ವರ, ಮೌಕ್ತಿಕಾಂಭ ಅಮ್ಮನವರ ಉತ್ಸವ ನೆರವೇರಿತು. ಭಕ್ತರ ಮನರಂಜನೆಗಾಗಿ ಹಳೇ ಬಸ್ ನಿಲ್ದಾಣದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
    ವಹ್ನಿಕುಲ ತಿಗಳ ಸಂಘದ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಗೋಪಾಲಕೃಷ್ಣ, ಗಣಾಚಾರಿ ಗೋಪಾಲಪ್ಪ, ವಿ.ಶ್ರೀನಿವಾಸ್, ವಿ.ಗೋಪಾಲ್, ವಿ. ಮಂಜುನಾಥ್, ಉಮೇಶ್, ವಾಸು, ರಾಮು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts