More

    ಕರಗದ ಕುಂಟೆಯ ಶಕ್ತಿ ಪೀಠದಲ್ಲಿ ಭಾನುವಾರ ರಾತ್ರಿ ‘ಹಸಿಕರಗ’

    ಬೆಂಗಳೂರು: ಧಾರ್ಮಿಕ ಆಚರಣೆಯ ಜತೆಗೆ ಜನಪದೀಯ ಸಂಸ್ಕೃತಿಯೂ ಆಗಿರುವ ಕರಗ ಉತ್ಸವದಲ್ಲಿ ದ್ವಾದಶಿಯಂದು (ಶನಿವಾರ)ರಾತ್ರಿ ಆರತಿ ದೀಪಗಳನ್ನು ಬೆಳಗಲಾಗುತ್ತದೆ. ಮರುದಿನ ತ್ರಯೋದಶಿಯಂದು (ಭಾನುವಾರ) ರಾತ್ರಿ ‘ಹಸಿಕರಗ’ ನಡೆಯಲಿದೆ.

    ಆದಿಶಕ್ತಿ ದ್ರೌಪದಿದೇವಿಯಿಂದ ಶಕ್ತಿಯ ಆವಾಹನೆ ಮಾಡಿಕೊಳ್ಳುವ ವಿಧಿಯೊಂದಿಗೆ ‘ಹಸಿಕರಗ’ ಆರಂಭವಾಗಲಿದೆ. ಇದು ನಡೆಯುವುದು ಸಂಪಂಗಿ ಕೆರೆ ಕರಗದ ಕುಂಟೆಯ ಶಕ್ತಿ ಪೀಠದಲ್ಲಿ. ಇಲ್ಲಿ ಖಡ್ಗ, ತ್ರಿಶೂಲಗಳನ್ನಿಟ್ಟು , ಕೆಂಪು ಬಟ್ಟೆಯಿಂದ ಅಲಂಕಾರಗೊಂಡ ‘ಹಸೀಕರಗ’ಕ್ಕೆ ಪೂಜೆ ಮಾಡಲಾಗುತ್ತದೆ. ಈ ವೇಳೆ ಭಕ್ತರು ಮಣಗಟ್ಟಲೆ ಕರ್ಪೂ ಉರಿಸುತ್ತಾರೆ.

    ನಂತರ ಪೂಜಾರಿಗಳು ವೀರಕುಮಾರರ ಕಂಕಣಕಟ್ಟಿಕೊಂಡು ನೆತ್ತಿಗೆ ಗಂಧವನ್ನು ಬಳಿದುಕೊಳ್ಳುತ್ತಾರೆ.ಆಮೇಲೆ ಈ ವೀರಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ‘ಡಿಕ್ ಡೀ ಡಿಕ್ ಡೀ…..’ ಎನ್ನುತ್ತ ಖಡ್ಗ ಹಿಡಿದು ಎದೆಯ ಮೇಲೆ ಹೊಡೆದು ಕೊಳ್ಳುತ್ತ ಅಲಗುಸೇವೆ ಕೈಗೊಳ್ಳುತ್ತಾರೆ. ಅಲ್ಲಿಂದ ಪೂಜಾರಿ ಕಂಕುಳಲ್ಲಿ ಹಸೀಕರಗವನ್ನು ಹೊತ್ತು ದಾರಿಯುದ್ದಕ್ಕೂ ದರ್ಶನ ನೀಡುತ್ತ ಕಾರ್ಪೊರೇಷನ್ ಬಳಿಯ ದೇವಾಲಯದಲ್ಲಿನ 7 ಸುತ್ತಿನ ಕೋಟೆ ಬಳಿಗೆ ಬಂದು ಪೂಜೆ ಸ್ವೀಕರಿಸಿ ಅಲ್ಲಿಂದ ಬೆಳಗಿನ ಜಾವದ ಹೊತ್ತಿಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಲಿದ್ದಾರೆ.

    ಭಾರತ ಕಥಾ ವಾಚನ: ಕರಗದಲ್ಲಿ ಆರಾಧನೆಗೊಳ್ಳುವ ಶಕ್ತಿಸ್ವರೂಪಿಣಿಯು ಸೃಷ್ಟಿ-ಸ್ಥಿತಿ-ಲಯಗಳ ಸಂಕೇತವೆನ್ನುವ ಅರ್ಥವಿದೆ. ವೀರಘೋಷದಿಂದಾಗಿ ಆವೇಶಪೂರ್ಣವಾಗಿ ಕಾಣುವ ಆದಿಶಕ್ತಿಯನ್ನು ತಹಬಂದಿಗೆ ತರಲು ಕರಗದಲ್ಲಿ ನಾಟ್ಯಮಂತ್ರ ಮತ್ತು ಘಂಟಾನಾದಕ್ಕೂ ವಿಶೇಷ ಪ್ರಾಶಸ್ತ್ಯವಿದೆ. ಹಸಿಕರಗದಂದು ಮಧ್ಯರಾತ್ರಿ ಒಂದು ಗಂಟೆಯ ನಂತರ ದ್ರೌಪದಿಯ ಮಹಿಮೆಯ ವರ್ಣನೆಯನ್ನುಳ್ಳ ‘ಭಾರತ ಕಥಾ ವಾಚನ’ ನಡೆಯುತ್ತದೆ.

    ಕರಗದ ಆಚರಣೆಗಳಲ್ಲಿ ಕೆರೆಕುಂಟೆಗಳಿಗೆ ಅಗ್ರಸ್ಥಾನವಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಗರದ ಕೆರೆಕುಂಟೆಗಳು ಕಣ್ಮರೆಯಾಗಿವೆ. ಆದರೂ ಆಚರಣೆಗಳು ಮಾತ್ರ ನಿಂತಿಲ್ಲ. ಇಂದಿಗೂ ಕರಗದ ಅಂಗವಾಗಿ ನಗರದ ಒಂಬತ್ತು ಕಡೆಗಳಲ್ಲಿ ಶುದ್ಧಿಕಾರ್ಯ ಮತ್ತು ತೀರ್ಥಸ್ನಾನಗಳು ನೆರವೇರುತ್ತವೆ. ಇವು ಚೈತ್ರ ಶುಕ್ಲ ಸಪ್ತಮಿಯಿಂದ ಆಂಭವಾಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts