More

    ದೇವನಹಳ್ಳಿಯಲ್ಲಿ ಪೊಲೀಸರ ಕಿರಿಕಿರಿ!, ನಗರ ನಿಯಮ ತಪ್ಪಿಸುವಂತೆ ಶಾಸಕರಲ್ಲಿ ಮನವಿ, ಶಾಸಕರಿಂದ ಸಮಸ್ಯೆ ಬಗೆಹರಿಸುವ ಭರವಸೆ

    ದೇವನಹಳ್ಳಿ: ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಹಲವು ಕಟ್ಟಳೆಗಳ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ, 500 ಮೀಟರ್ ಅಂತರದಲ್ಲಿ ನಾಲ್ಕೈದು ಕಡೆ ವಾಹನ ತಪಾಸಣೆ ನಡೆಸುವ ಮೂಲಕ ತೀವ್ರ ಕಿರಿಕಿರಿ ಉಂಟುಮಾಡುತ್ತಿದ್ದಾರೆ ಎಂದು ಹಿಂದುಳಿದ ಒಕ್ಕೂಟದ ಅಧ್ಯಕ್ಷ ಸಿ.ಮುನಿರಾಜು ಆರೋಪಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲವು ಸಂಘಟನೆಗಳ ಮುಖಂಡರು ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ವೇಳೆ ಸಾರ್ವಜನಿಕರ ಪರವಾಗಿ ಮಾತನಾಡಿದರು.

    ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದು ಎಷ್ಟರ ಮಟ್ಟಿಗೆ ಕೇಸ್ ಹಾಕುತ್ತಾರೆ ಎಂದು ಉದಾಹರಣೆ ಸಹಿತ ಮುನಿರಾಜು ವಿವರಿಸಿದರು. ವಿಜಯಪುರ ತಿರುವು ರಸ್ತೆಯ ಶಿವಕುಮಾರ ಸ್ವಾಮಿ ರಸ್ತೆ ಬಳಿ ಬರುವ ದ್ವಿಚಕ್ರ ವಾಹನದ ಫೋಟೋ ತೆಗೆಯುವ ಪೊಲೀಸರು ಅಲ್ಲೆ ಒಂದು ಕೇಸ್ ಹಾಕುತ್ತಾರೆ. ಅಲ್ಲಿಂದ ಮುಂದೆ ಅದೇ ಸಮಯದಲ್ಲಿ ಅದೇ ವಾಹನ ಹಳೇ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಅಲ್ಲೊಬ್ಬರು ೆಟೋ ತೆಗೆದು ಕೇಸ್ ಹಾಕುತ್ತಾರೆ, ಅದೇ ವಾಹನ ಸವಾರ ಸಮೀಪದ ತಾಲೂಕು ಕಚೇರಿ ಬಳಿ ಬಂದರೆ ಅಲ್ಲೊಂದು ಕೇಸ್ ಬೀಳುತ್ತೆ, ಅದೇ ರಸ್ತೆಯಲ್ಲಿ ಮುಂದೆ ಸಾಗಿ ಹೊಸಬಸ್ ನಿಲ್ದಾಣ ತಲುಪಿದರೆ ಮಗದೊಂದು ಕೇಸ್. ಹೀಗೆ ಒಂದೇ ದಿನ ಕೇವಲ 500 ಮೀಟರ್ ಅಂತರದಲ್ಲಿ ಒಂದೇ ವಾಹನಕ್ಕೆ ಐದಾರು ಕೇಸ್ ಹಾಕಿ ಸಾರ್ವಜನಿಕರನ್ನು ಸುಲಿಯುತ್ತಿದ್ದಾರೆ ಎಂದು ಆರೋಪಿಸಿದರು.

    ಮುಖ್ಯರಸ್ತೆಗಳ ಕಡೆ ನೋಡಿ: ಶ್ರೀ ರಾಮ ಸ್ಟುಡಿಯೋ ಮಾಲೀಕ ನಾಗರಾಜ್ ಮಾತನಾಡಿ, ಹೆದ್ದಾರಿಯಲ್ಲಿ ಸಂಚರಿಸುವ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಹೆಲ್ಮೆಟ್ ಇಲ್ಲವೆಂದರೆ ದಂಡ ಹಾಕಲಿ. ಪಟ್ಟಣದ ಒಳಗೆ ವಿನಾಯತಿ ಕೊಡಬೇಕು ಎಂದು ಮನವಿ ಮಾಡಿದರು.

    ಶಾಸಕರಿಂದ ಭರವಸೆ: ದೇವನಹಳ್ಳಿ ಪಟ್ಟಣ ಮತ್ತು ವಿಮಾನ ನಿಲ್ದಾಣ ವ್ಯಾಪ್ತಿ ಮಾತ್ರ ನಗರ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ, ಉಳಿದಂತೆ ಎಲ್ಲ ಭಾಗ ಗ್ರಾಮಾಂತರ ಠಾಣೆಗಳ ವ್ಯಾಪ್ತಿಯಲ್ಲಿದೆ. ಹಾಗಾಗಿ ಇಲ್ಲಿ ಬೆಂಗಳೂರು ನಗರಕ್ಕಿರುವ ನಿಯಮಗಳನ್ನು ಪೋಲಿಸರು ಅನುಸರಿಸುತ್ತಾರೆ. ಆದರೂ ಪಟ್ಟಣದ ಒಳಗೆ ಸಂಚರಿಸುವವರಿಗೆ ವಿನಾಯಿತಿ ಕೊಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡುತ್ತೇನೆ. ಈ ಬಗ್ಗೆ ಸದನದಲ್ಲಿ ಗಮನಸೆಳೆದು, ದೇವನಹಳ್ಳಿ ನಗರವನ್ನು ಮೊದಲಿನಂತೆ ಗ್ರಾಮಾಂತರ ಠಾಣೆಯಾಗಿ ಪರಿವರ್ತಿಸಲು ಒತ್ತಾಯಿಸುತ್ತೇನೆ. ಅಲ್ಲಿಯೂ ನ್ಯಾಯ ಸಿಗದೇ ಹೋದರೆ ನ್ಯಾಯಾಲಯದ ಮೊರೆ ಹೋಗೋಣ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts