More

    ದೇವದಾಸಿ ನಿಷೇಧ ಕಾಯ್ದೆಗೆ ಆಗಲಿ ತಿದ್ದುಪಡಿ- ಬಸವರಾಜ್

    ದಾವಣಗೆರೆ: ದೇವದಾಸಿ ಪದ್ಧತಿ ನಿಷೇಧ ಕಾಯ್ದೆ-1982 ದೋಷಪೂರಿತವಾಗಿದ್ದು, ರಾಜ್ಯ ಸರ್ಕಾರ ಇದಕ್ಕೆ ತಿದ್ದುಪಡಿ ತರಬೇಕಿದೆ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ್ ಆಗ್ರಹಿಸಿದರು.
    ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದೇವದಾಸಿಯರ ನಾಲ್ಕನೇ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.
    ಈಗಿರುವ ಕಾಯ್ದೆಯಡಿ ದೇವದಾಸಿ ಪದ್ಧತಿಗೆ ಒಳಗಾಗುವ ಕುಟುಂಬವನ್ನು ಮಾತ್ರ ಶಿಕ್ಷಿಸಲಾಗುತ್ತಿದೆ. ಆದರೆ ಇದುವರೆಗೆ ಈ ಪದ್ಧತಿಗೆ ಮಹಿಳೆಯನ್ನು ಬಳಸಿಕೊಳ್ಳುವ ಮೇಲ್ಜಾತಿಯ ಬಲಾಢ್ಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡ ಒಂದೇ ಒಂದು ನಿದರ್ಶನವಿಲ್ಲ. ಅವರನ್ನೂ ಶಿಕ್ಷೆಗೊಳಪಡಿಸುವ ಸಂಬಂಧ ಕಾಯ್ದೆಯಲ್ಲಿ ತಿದ್ದುಪಡಿ ಆಗಬೇಕು ಎಂದು ಹೇಳಿದರು.
    ಈ ಹೀನಾಯ ಪದ್ದತಿಗೆ ಒಳಗಾದ ಮಹಿಳೆಯ ಕುಟುಂಬ ನಿರ್ವಹಣೆಯನ್ನ್ನು, ಅದಕ್ಕೆ ಕಾರಣನಾದ ವ್ಯಕ್ತಿಯೇ ಹೊರುವಂತೆಯೂ ಜವಾಬ್ದಾರಿ ನಿಗದಿಪಡಿಸಬೇಕು. ಆಕೆಗೆ ಮಾಸಿಕ ಪರಿಹಾರಧನ ನೀಡಬೇಕು. ಮಕ್ಕಳಿಗೆ ಆಸ್ತಿಯಲ್ಲಿ ಪಾಲುದಾರಿಕೆ ನೀಡುವಂತೆ ಕಾನೂನಿನಲ್ಲಿ ಮಾರ್ಪಾಡಾಗಬೇಕು ಎಂದು ತಿಳಿಸಿದರು.
    ದೇವದಾಸಿ ಪದ್ಧತಿ ಇದೊಂದು ಸಾಮಾಜಿಕ ದೌರ್ಜನ್ಯ. ಹಿರೇಸಿಂಧೋಗಿ ಗ್ರಾಮದ ಮಠದಲ್ಲಿ ಇಂದಿಗೂ ದೇವದಾಸಿ ಪದ್ದತಿ ಇದ್ದುದನ್ನು ಬಯಲಿಗೆಳೆದರೂ ಸರ್ಕಾರ ಮೌನ ವಹಿಸಿದೆ. ದೇವದಾಸಿ ಪದ್ಧತಿ ವಿರುದ್ಧದ ಹೋರಾಟಗಾರರ ಮೇಲೆಯೇ ಸರ್ಕಾರ ಸುಳ್ಳು ಮೊಕದ್ದಮೆಗಳನ್ನು ದಾಖಲು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
    ಸರ್ಕಾರದ ಬಳಿ 65 ಲಕ್ಷ ಎಕರೆ ಸರ್ಕಾರಿ ಜಮೀನು, 45 ಲಕ್ಷ ಎಕರೆ ಬಗರ್‌ಹುಕುಂ ಸಾಗುವಳಿ ಜಮೀನಿದೆ. ಖಾಸಗಿ ಕಂಪನಿಗಳಿಗೆ ಭೂಸ್ವಾಧೀನ ಮಾಡಿಕೊಡುವ ಸರ್ಕಾರ, ದೇವದಾಸಿಯರ ಬಗ್ಗೆ ಲಕ್ಷೃ ವಹಿಸುತ್ತಿಲ್ಲ. ಅವರ ಸ್ವಾವಲಂಬಿ ಜೀವನಕ್ಕಾಗಿ ಸರ್ಕಾರ ತಲಾ 5 ಎಕರೆ ಜಮೀನು ನೀಡಬೇಕಿದೆ ಎಂದರು.
    ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ ಮಾತನಾಡಿ ದೇವದಾಸಿಯರ ಪಿಂಚಣಿಗೆ ಆಗ್ರಹಿಸಿದರೂ ನಾಲ್ಕು ಸರ್ಕಾರಗಳ ಅವಧಿಯಲ್ಲಿ ಜಾರಿಯಾಗಲಿಲ್ಲ. ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಇದಾದಲ್ಲಿ ದೇವದಾಸಿಯರ ಮಕ್ಕಳಿಗೆ ಅಲಭ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು
    2007-08ನೇ ಸಾಲಿನಲ್ಲಿ ನಡೆದ ದೇವದಾಸಿಯರ ಸಮೀಕ್ಷೆಯಲ್ಲಿ 35 ವರ್ಷ ಮೇಲ್ಪಟ್ಟವರನ್ನು ಮಾತ್ರವೇ ಗುರುತಿಸಲಾಯಿತು. ಇತರರನ್ನು ಸೇರ್ಪಡೆ ಮಾಡಲಿಲ್ಲ. ಅಲ್ಲದೆ ಮಕ್ಕಳನ್ನೂ ಸಹ ಸಮೀಕ್ಷೆ ಮಾಡಲಿಲ್ಲ. ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಕಲ್ಪಿಸುವಂತೆ ಸರ್ಕಾರವನ್ನು ಕೇಳಿದ್ದೇವೆ. ಸರ್ಕಾರ ಮೌಖಿಕ ಭರವಸೆ ನೀಡಿದೆ ಎಂದರು.
    ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಮುಖಂಡರಾದ ಎ.ಭರಮಪ್ಪ, ಹಿರಿಯಮ್ಮ, ಕರಿಸಬಮ್ಮ, ಹೊನ್ನಮ್ಮ, ಚನ್ನಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts