More

    ದೇಗುಲಗಳ ಸೇವೆಯಿಂದ ಹಿಂದು ಸಾಮ್ರಾಜ್ಯ ಸುಭದ್ರ – ರವಿಶಂಕರ್ – ವಾಸವಿ ದೇವಾಲಯಗಳ ಪ್ರಥಮ ಮಹಾ ಅಧಿವೇಶನ

    ದಾವಣಗೆರೆ: ದೇಗುಲಗಳು ಸೇವಾಲಯಗಳು ಆದಾಗ ಹಿಂದು ಸಾಮ್ರಾಜ್ಯ ಭದ್ರಗೊಳ್ಳುವ ಮೂಲಕ ಸಮಾಜ ಸಂಘಟನೆಯಾಗಲಿದೆ ಎಂದು ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದರು.
    ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಾಗೂ ಶ್ರೀ ವಾಸವಿ ದೇವಾಲಯಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ವಾಸವಿ ದೇವಾಲಯಗಳ ಪ್ರಥಮ ಮಹಾ ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ರಾಜ್ಯದಲ್ಲಿ ಸುಮಾರು 1.20 ಲಕ್ಷ ದೇವಸ್ಥಾನಗಳಿದ್ದು, ಇದರಲ್ಲಿ 34 ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ಬೆರಳೆಣಿಕೆಯಷ್ಟು ದೇಗುಲಗಳು ಉತ್ತಮವಾಗಿ ನಡೆಯುತ್ತಿವೆ. ಉಳಿದೆಲ್ಲವುಗಳಿಗೆ ಸುಣ್ಣ, ಬಣ್ಣ ಬಳಿಸಲು ಆಗುತ್ತಿಲ್ಲ. ಆದರೆ, ಆರ್ಯವೈಶ್ಯ ಸಮಾಜ ವಾಸವಿ ದೇವಾಲಯಗಳ ನಿರ್ವಹಣೆಗೆ ಮಾಸಿಕ ಸುಮಾರು 2 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದರು.
    ರಾಜ್ಯದ ಸುಮಾರು 232 ವಾಸವಿ ದೇವಾಲಯಗಳ ಧರ್ಮದರ್ಶಿ ಮಂಡಳಿಯವರು ಅಧಿವೇಶನದಲ್ಲಿ ಭಾಗವಹಿಸಿದ್ದು, ದೇವಸ್ಥಾನಗಳ ಮೂಲಕ ಧಾರ್ಮಿಕ ಚಿಂತನೆ ಜತೆಗೆ ಸಂಘಟನಾತ್ಮಕ ಚಿಂತನೆಗಳಾಗಬೇಕು. ಒಂದು ಜಾತಿಗೆ ಸೀಮಿತವಾಗದೆ ಮಾನವ ಕಲ್ಯಾಣ ಕಾರ್ಯಕ್ರಮ ನಡೆಸುವಂತಾಗಬೇಕು ಎಂಬ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಜಗತ್ತಿನಲ್ಲಿಂದು ಭಾರತದ ಪರ್ವಕಾಲ ಶುರುವಾಗಿದ್ದು, ದೇಶವು ತನ್ನ ಆಧ್ಯಾತ್ಮಿಕ ಬೆಳಕಿನಿಂದ ಇಡೀ ಪ್ರಪಂಚಕ್ಕೆ ಶ್ರೇಷ್ಟ ಸಂದೇಶ ನೀಡುತ್ತಿದೆ ಎಂದು ಹೇಳಿದರು.
    ದೇಶದಲ್ಲಿ ಹಿಂದೆಂದೂ ಕಾಣದಷ್ಟು ದೇವಸ್ಥಾನಗಳ ಪ್ರವಾಸೋದ್ಯಮ ಚುರುಕಾಗಿದೆ. ಕಳೆದ 9 ತಿಂಗಳಲ್ಲಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದವರ ಸಂಖ್ಯೆ 30 ಕೋಟಿಗೂ ಅಧಿಕವಾಗಿದ್ದು, ಇದರಲ್ಲಿ ಸುಮಾರು 13 ಕೋಟಿ ಜನರು ಕಾಶಿ ವಿಶ್ವನಾಥ ದೇವಸ್ಥಾನದ ದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.
    ಗುಜರಾತ್‌ನಲ್ಲಿ ನಿರ್ಮಿತ ಸರ್ದಾರ್ ವಲ್ಲಭಬಾಯ್ ಪಟೇಲರ ಪ್ರತಿಮೆ ವೀಕ್ಷಣೆಗೆ ಒಂದು ವರ್ಷದಲ್ಲಿ 50 ಲಕ್ಷ ಜನರು ಬಂದುಹೋಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಬಳಿಕ ಜಗತ್ತಿನಲ್ಲೇ ಅತ್ಯಧಿಕ ಪ್ರವಾಸಿಗರನ್ನು ಆಕರ್ಷಿಸಲಿದೆ. ಶ್ರೀರಾಮ ಮಂದಿರ ಲೋಕಾರ್ಪಣೆಯ ಒಂದೇ ದಿನದಲ್ಲಿ ದೇಶದಲ್ಲಿ ಸುಮಾರು 50 ಸಾವಿರ ಕೋಟಿ ರೂ.ವಹಿವಾಟು ನಡೆಯಲಿದೆ. ಈ ಹಣವನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದರೆ 1 ವರ್ಷಗಳ ಕಾಲ ಅನಾಯಾಸವಾಗಿ ಬಿಟ್ಟಿ ಭಾಗ್ಯ ಕೊಡುತ್ತಾರೆ ಎಂದೂ ಹೇಳಿದರು.
    ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಶಾಶ್ವತ ಸಂಪನ್ಮೂಲ ಕ್ರೋಡೀಕರಿಸುವ ಮೂಲಕ ದೇವಾಲಯಗಳ ಬಲಿಷ್ಠಗೊಳಿಸುವ ಚಿಂತನೆ ಮಾಡಬೇಕು. ಅರ್ಚಕರಿಗೆ ಬೇಕಾದ ಸೌಲಭ್ಯ ಕಲ್ಪಿಸಬೇಕು. ಯುವಜನರು ದೇವಸ್ಥಾನಗಳಿಗೆ ಬರಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
    ಧರ್ಮ ಜಾಗೃತಿಯಲ್ಲಿ ದೇವಾಲಯಗಳ ಪಾತ್ರ ಕುರಿತು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಪ್ರಧಾನ ಭಾಷಣ ಮಾಡಿದರು. ಒಕ್ಕೂಟದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ವೇದಪಂಡಿತ ಹಿರೇಮಗಳೂರು ಕಣ್ಣನ್, ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಪ್ರಚಾರಕ ಮನೋಹರ್ ಮಠದ್, ಮಹಾಸಭಾ ಕಾರ್ಯದರ್ಶಿ ಕೆ.ಆರ್. ಕೃಷ್ಣ, ಆರ್ಯವೈಶ್ಯ ಯುವಜನ ಮಹಾಸಭಾ ಅಧ್ಯಕ್ಷ ಸುನಿಲ್, ಆರ್.ಜಿ.ನಾಗೇಂದ್ರ ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts