More

    ದೆಹಲಿ ಪೊಲೀಸರ ದುರ್ವತನೆ ಖಂಡಿಸಿ ಪ್ರತಿಭಟನೆ : ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಧರಣಿ

    ಕೊಡಗು : ದೆಹಲಿಯಲ್ಲಿ ಪ್ರತಿಭಟನಾನಿರತ ಅಂತಾರಾಷ್ಟ್ರೀಯ ಒಲಂಪಿಕ್ ಕುಸ್ತಿ ಪಟುಗಳ ಮೇಲೆ ದೆಹಲಿ ಪೋಲಿಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿ ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.

    ವಿರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ತಿಮ್ಮಯ್ಯ ಶಿರಸ್ತೆದಾರ್ ಅಣ್ಣು ನಾಯಕ್ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿ, ಮೂರು ತಿಂಗಳಿಂದ ಅಂತಾರಾಷ್ಟ್ರೀಯ ಒಲಂಪಿಯನ್ ಕ್ರೀಡಾಪಟುಗಳು ಧರಣಿ ನಡೆಸುತ್ತಿದ್ದ ಸಂಧರ್ಭ ದೆಹಲಿ ಪೊಲೀಸರು ಅವರ ಮೇಲೆ ಅಮಾನವೀಯವಾಗಿ ನಡೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳನ್ನು ಗೌರಯುತವಾಗಿ ಕಾಣುತ್ತಿಲ್ಲ. ಅವರುಗಳಿಗೆ ಭದ್ರತೆ ಇಲ್ಲ. ಈ ರೀತಿಯಾದರೆ ಪಾಲಕರು ಯಾವ ರೀತಿಯಾಗಿ ಹೆಣ್ಣು ಮಕ್ಕಳನ್ನು ಕ್ರೀಡಾ ತರಬೇತಿಗೆ ಕಳುಹಿಸುತ್ತಾರೆ. ಕೂಡಲೇ ಕ್ರೀಡಾಪಟುಗಳ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದು ಗೊಳಿಸಿ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.


    ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ನರೇಂದ್ರ ಕಾಮತ್ ಮಾತನಾಡಿ ಪ್ರತಿಭಟನಾ ನಿರತ ಕ್ರೀಡಾಪಟುಗಳ ಮೇಲೆ ಪೊಲೀಸರು ಇಂತಹ ದೌರ್ಜನ್ಯ ಎಸಗಿದರೆ ಅವರ ಮನೋಸ್ಥೈರ್ಯ ಕುಗ್ಗುತ್ತದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥ ಗೊಳಿಸಿವಂತೆ ಮನವಿ ಮಾಡಿದರು.


    ಪುರಸಭೆ ಸದಸ್ಯ ರಾಜೇಶ್ ಮಾತನಾಡಿ, ಕೇಂದ್ರ ಸರ್ಕಾರದ ಬೇಟಿ ಪಡಾವೊ ಬೇಟಿ ಬಜಾವೋ ಎಲ್ಲಿ ಹೋಯಿತು. ದೆಹಲಿ ಪೊಲೀಸರ ಕ್ರಮಕ್ಕೆ ನಮ್ಮ ಧಿಕ್ಕಾರ ಇದೆ. ನ್ಯಾಯ ಸಿಗದೆ ಇದ್ದಾಗ ಒಲಿಂಪಿಕ್‌ನಲ್ಲಿ ಪಡೆದ ಚಿನ್ನದ ಮೆಡಲ್‌ಗಳನ್ನು ಗಂಗಾ ನದಿಗೆ ಬಿಸಾಕಲು ತೆರಳಿದ್ದಾರೆ ಎಂದರೆ ನಮ್ಮ ದೇಶದ ಕ್ರೀಡಾಪಟುಗಳ ಸ್ಥಿತಿ ಹೇಗಿದೆ ಎಂಬುದನ್ನು ಊಹಿಸಲು ಅಸಾದ್ಯ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.

    ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಹಮೀದ್, ಕಾರ್ಯದರ್ಶಿ ಶಶಿಧರನ್, ಸಂಘಟನಾ ಕಾರ್ಯದರ್ಶಿ ಶಾನ್, ಪುರಸಭೆ ಸದಸ್ಯ ಸಿ.ಕೆ ಪೃಥ್ವಿನಾಥ್, ಮರ‌್ವಿನ್ ರಾಜೇಶ್, ದಿನೇಶ್, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts