More

    ದೃಷ್ಟಿಗೆ ಅಂಧಕಾರ; ಬದುಕು ದುಸ್ತರ

    ನರಗುಂದ: ಎಲ್ಲರಂತೆ ಇವರು ಕೂಡ ಸುಂದರ ಜೀವನದ ಕನಸು ಕಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. 2014ರಲ್ಲಿ ಇವರಿಗೆ ಮದುವೆಯಾಗಿತ್ತು. ಮದುವೆಯಾಗಿ ಆರು ತಿಂಗಳ ನಂತರ ವಿಪರೀತ ತಲೆ ಹಾಗೂ ಕೈಕಾಲು ನೋವು ಕಾಣಿಸಿಕೊಂಡು, ಎರಡು ಕಣ್ಣುಗಳ ದೃಷ್ಟಿಯೇ ಹೊರಟು ಹೋಯ್ತು. ಇಂಥ ಕಷ್ಟದ ಸಂದರ್ಭದಲ್ಲಿ ಹೆಂಡತಿಯೂ ತವರು ಮನೆ ಸೇರಿದ್ದರಿಂದ ಆತ ಅನಾಥನಾಗಿದ್ದಾನೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾನೆ.

    ಇದು, ಪಟ್ಟಣದ ಹೊರಕೇರಿ ಬಡಾವಣೆಯ ಅಂಧ ಫಕ್ರುಸಾಬ ಸವಟಗಿ ಅವರ ದುಸ್ಥಿತಿ. ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಬೇಕಾಗಿದ್ದ ಸಂಬಂಧಿಕರು ದೂರವಾಗಿದ್ದಾರೆ. ಫಕ್ರುಸಾಬ ಅವರು ಲಾರಿ ಚಾಲಕರಾಗಿ ತಮ್ಮ ಬದುಕು ಕಟ್ಟಿಕೊಂಡಿದ್ದರು. 10 ವರ್ಷ ಹೊಸಪೇಟೆಯಲ್ಲಿ ಲಾರಿ ಚಾಲಕರಾಗಿ, 6 ವರ್ಷ ಕಾರು ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2014ರಲ್ಲಿ ಪಟ್ಟಣದ ಬಂದಗೀಸಾಬ ಕೋಟಿ ಎಂಬುವರ ಮಗಳು ಸೈನಾಜ್ ಜತೆಗೆ ಮದುವೆಯಾಗಿದೆ. ಆದರೆ, ಪತಿಗೆ ದೃಷ್ಟಿ ಹೊರಟು ಹೋದ ಮೇಲೆ ಸೈನಾಜ್ ಅವರು ತಂದೆಯ ಮನೆ ಸೇರಿಕೊಂಡರು. ಇವರಿಗೆ ಈಗ ನಾಲ್ಕು ವರ್ಷದ ಅಷ್ಪಾಕ್ ಎಂಬ ಮಗನಿದ್ದಾನೆ. ಆದರೆ, ಫಕ್ರುಸಾಬಗೆ ಮಗನನ್ನು ನೋಡುವ ಭಾಗ್ಯವೇ ಇಲ್ಲದಂತಾಗಿದೆ.

    ಫಕ್ರುಸಾಬ ಅವರಿಗೆ ಒಬ್ಬ ಸಹೋದರ, ಮೂವರು ಸಹೋದರಿಯರಿದ್ದರು. ನಾಲ್ಕು ವರ್ಷದ ಹಿಂದೆ ನಡೆದ ಭೀಕರ ಅಪಘಾತದಲ್ಲಿ ಸಹೋದರ ಮೃತಪಟ್ಟಿದ್ದಾರೆ. ಮದುವೆಯಾದ ಸಹೋದರಿಯರ ಮನೆಗೆ ತೆರಳಿದರೆ ಅವರ ಗಂಡಂದಿರು, ‘ಬರೀ ನಿಮ್ಮ ತಮ್ಮನ ಸೇವೆಯನ್ನೇ ಮಾಡೋದಾಯ್ತು. ನಮ್ದೇನ್ ಗತಿ’ ಎಂದು ಹೀಯಾಳಿಸುತ್ತಾರೆ.

    ಕಣ್ಣು ಕಾಣದ ಪರಿಣಾಮ ಶೌಚಕ್ಕೆ ತೆರಳಲು ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ, ಮನೆಯ ಬಚ್ಚಲಿನಲ್ಲಿಯೇ ನಿತ್ಯ ಕರ್ಮ ಮುಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸ್ಥಳೀಯ ಪುರಸಭೆಗೆ ಶೌಚಗೃಹ ನಿರ್ವಣಕ್ಕೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಿರಂತರ ನೀರು ಯೋಜನೆಯಡಿ ಇವರ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಕಾರಣ, ನೀರಿನ ಕರ ಕಟ್ಟುವವರಾರು ಎಂದು ಆಧಿಕಾರಿಗಳು ಪ್ರಶ್ನಿಸುತ್ತಾರಂತೆ. ಜೀವನಕ್ಕೆ ಆಧಾರವಾಗಿದ್ದ ಬಿಪಿಎಲ್ ಪಡಿತರ ಕಾರ್ಡ್ ಕೂಡ ಕಳೆದ 7 ತಿಂಗಳಿನಿಂದ ಬಂದ್ ಆಗಿದೆ ಎಂದು ಕಣ್ಣೀರು ಹಾಕುತ್ತಾರೆ ಫಕ್ರುಸಾಬ.

    ಫಕ್ರುಸಾಬ ಬ್ಯಾಂಕ್ ಖಾತೆ ವಿವರ

    ಹೆಸರು: ಫಕ್ರುಸಾಬ ಮಾಬುಸಾಬ ಸವಟಗಿ
    ಭಾರತೀಯ ಸ್ಟೇಟ್ ಬ್ಯಾಂಕ್ (ಎಡಿಬಿ) ನರಗುಂದ
    ಖಾತೆ ಸಂಖ್ಯೆ: 32886303725
    ಐಎಫ್​ಎಸ್​ಸಿ ಕೋಡ್: ಎಸ್​ಬಿಐಎನ್ 0003394

    ಪುರಸಭೆಯಿಂದ ಸ್ವಚ್ಛ ಭಾರತ ಯೋಜನೆಯಡಿ ಶೌಚಗೃಹ ನಿರ್ವಿುಸಿಕೊಳ್ಳಲು ಎರಡು ಹಂತಗಳಲ್ಲಿ 15 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಶೌಚಗೃಹ ನಿರ್ವಣಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ಫಲಾನುಭವಿಗಳೇ ಮುಂಗಡವಾಗಿ ಪಾವತಿಸಬೇಕು. ಆದರೆ, ಫಕ್ರುಸಾಬ ಅವರ ಬಳಿ ಹಣವಿಲ್ಲ. ಆದ್ದರಿಂದ ನಮಗೆ ನೀವೇ ಮುಂಗಡವಾಗಿ ಹಣ ಭರಿಸಿ ವೈಯಕ್ತಿಕ ಶೌಚಗೃಹ ನಿರ್ವಿುಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಇದು ಸರ್ಕಾರದ ನಿಯಮಾನುಸಾರ ಅಸಾಧ್ಯ.
    | ಸಂಗಮೇಶ ಬ್ಯಾಳಿ ಪುರಸಭೆ ಮುಖ್ಯಾಧಿಕಾರಿ

    ನರರೋಗದಿಂದ ಕಣ್ಣಿನ ಒಂದು ರಕ್ತನಾಳ ಬ್ಲಾಕ್ ಆಗಿದೆ. ಶಸ್ತ್ರ ಚಿಕಿತ್ಸೆ ಮಾಡಿದರೆ ದೃಷ್ಟಿ ಸರಿಯಾಗುತ್ತದೆ ಎಂದು ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ಆಸ್ಪತ್ರೆಯವರು ತಿಳಿಸಿದ್ದಾರೆ. ಆದರೆ, ನನ್ನ ಬಳಿ ನಯಾಪೈಸೆ ಹಣವಿಲ್ಲ. ಸರ್ಕಾರವಾಗಲಿ ಅಥವಾ ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಸಾಯುವತನಕ ಋಣಿಯಾಗಿರುತ್ತೇನೆ. ಇಲ್ಲದಿದ್ದರೆ, ನನಗೊಂದು ಶೌಚಗೃಹ, ಕುಡಿಯುವ ನೀರಿನ ನಲ್ಲಿಯ ಸಂಪರ್ಕ ಹಾಗೂ ಪಡಿತರ ಕಾರ್ಡ್ ಒದಗಿಸಿಕೊಡಿ.
    | ಫಕ್ರುಸಾಬ ಸವಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts